ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಗೆ ಹೈಕೋರ್ಟ್ ಅಂಕುಶ….
ಬೆಂಗಳೂರು : ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯುಜೆ) ಕಾರ್ಯಕಾರಿ ಸಮಿತಿ ಚುನಾವಣೆಯಲ್ಲಿ ಸ್ಪರ್ಧಿಸುವವರು ನೈಜ ಪತ್ರಕರ್ತರೇ ಆಗಿರಬೇಕು ಮತ್ತು ಕರ್ನಾಟಕ ಟ್ರೇಡ್ ಯೂನಿಯನ್ ಮಾದರಿ ನಿಯಮಗಳು-1953ರ ಅನುಸಾರ ಕಟ್ಟುನಿಟ್ಟಿನ ಚುನಾವಣೆ ನಡೆಯುವಂತೆ ನೋಡಿಕೊಳ್ಳಬೇಕು’ ಎಂದು ಹೈಕೋರ್ಟ್, ಕಾರ್ಮಿಕ ಇಲಾಖೆಗೆ ಕಟ್ಟುನಿಟ್ಟಿನ ತಾಕೀತು ಮಾಡಿದೆ. ಈ ಸಂಬಂಧ ರಾಯಚೂರಿನ ‘ಈಶಾನ್ಯ ಟೈಂಸ್’ ಸಂಪಾದಕ ಎನ್. ನಾಗರಾಜ, ಶಿವಮೊಗ್ಗದ ‘ಕ್ರಾಂತಿದೀಪ’ ದಿನಪತ್ರಿಕೆ ಸಂಪಾದಕ ಎನ್.ಮಂಜುನಾಥ ಮತ್ತು ರಾಯಚೂರಿನ ‘ಸುದ್ದಿ ಮೂಲ’ ದಿನಪತ್ರಿಕೆ ಮುಖ್ಯ ವರದಿಗಾರ ಬಿ.ವೆಂಕಟಸಿಂಗ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು (ಡಬ್ಲ್ಯು.ಪಿ ಸಂಖ್ಯೆ: 8001/2021) ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ನವೆಂಬರ್ 8ರಂದು ವಿಲೇವಾರಿ ಮಾಡಿದ್ದು, ‘ಒಂದು ವೇಳೆ ಆದೇಶ ಪರಿಪಾಲನೆ ಆಗದೆ, ಯಾವುದೇ ತಕರಾರು ಉದ್ಭವವಾದಲ್ಲಿ ಅರ್ಜಿದಾರರು ಪುನಃ ಹೈಕೋರ್ಟ್ ಕದ ಬಡಿಯಬಹುದು’ ಎಂದು ತಿಳಿಸಿದೆ. ಅರ್ಜಿದಾರರ ಪರ ವಾದ ಮಂಡಿಸಿದ್ದ ವಕೀಲ ಹರೀಶ್ ಗಣಪತಿ, ‘ಸಮಾಜದ ನ್ಯೂನತೆಗಳನ್ನು ಎತ್ತಿ ತೋರಿಸುವ ಪತ್ರಕರ್ತರ ಸಂಘದಲ್ಲೇ ನ್ಯೂನತೆಗಳು ಗೂಡು ಕಟ್ಟಿಕೊಂಡಿವೆ!. ಸಂಘದಲ್ಲಿ ಟ್ರೇಡ್ ಯೂನಿಯನ್ ನಿಯಮಗಳ ಅನುಸಾರ ಮಾಲೀಕರೂ ಸದಸ್ಯತ್ವ ಹೊಂದಿರುವುದು ಆಕ್ಷೇಪಾರ್ಹ. ಸಂಘದಲ್ಲಿ 7,800 ಸದಸ್ಯರು ಇದ್ದಾರೆ. ಆದರೆ, ಇವರಲ್ಲಿ ನೈಜ ಪತ್ರಕರ್ತರ ಸಂಖ್ಯೆ ತುಂಬಾ ಕಡಿಮೆ.
ವರದಿ – ಸಂಪಾದಕೀಯ