“ಬಂಧಗಳ ಬಲೆಯೊಳಗೆ” ಕೃತಿ ಬಿಡುಗಡೆ……
ಇಂದು(ದಿನಾಂಕ: 02/01/2022) ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ ಲೇಖಕಿ ರೂಪ ಜಿ. ಎಂ ರವರ ಚೊಚ್ಚಲ ಕಾದಂಬರಿ “ಬಂಧಗಳ ಬಲೆಯೊಳಗೆ” ಬಿಡುಗಡೆ ಕಾರ್ಯಕ್ರಮ ಬಹಳ ವಿಶೇಷವಾಗಿ ನೆರವೇರಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಖ್ಯಾತ ಸಾಹಿತಿ ಹಾಗೂ ಪತ್ರಕರ್ತರಾದ ಜಾಣಗೆರೆ ವೆಂಕಟರಾಮಯ್ಯನವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕರ್ನಾಟಕದ ದಕ್ಷ ಐಪಿಎಸ್ ಅಧಿಕಾರಿ ಆದಂತಹ ಹಾಗೂ ಪ್ರಸ್ತುತ ADGP ಆಗಿರುವಂತಹ ಶ್ರೀಯುತ ಭಾಸ್ಕರ್ ರಾವ್ ರವರು ತಮ್ಮ ಅಮೃತ ಹಸ್ತದಿಂದ ಕಾದಂಬರಿಯನ್ನು ಬಿಡುಗಡೆಗೊಳಿಸಿದರು. ಹಾಗೂ ಖ್ಯಾತ ಸಾಹಿತಿಗಳು ಆದ ಡಾ. ಬೇಲೂರು ರಘುನಂದನ್ ರವರು ಕಾರ್ಯಕ್ರಮದಲ್ಲಿ ನೆರೆದಿದ್ದ ಸಾಹಿತ್ಯಾಭಿಮಾನಿಗಳಿಗೆ ಅತ್ಯದ್ಭುತವಾಗಿ ಕೃತಿಯ ಪರಿಚಯ ಮಾಡಿಸಿದರು. ಕಾರ್ಯಕ್ರಮದಲ್ಲಿ ಕಿಡ್ಸ್ ಕುಟೀರ ಶಾಲೆಯ ಸಂಸ್ಥಾಪಕರಾದ ಶ್ರೀ ರಾಜಶೇಖರ್ ಸಂಚಾರಿ ಸತ್ಯ ಪತ್ರಿಕೆಯ ಸಂಪಾದಕರಾದ ಶ್ರೀ ಶಂಕರ್ ಬೆನ್ನೂರ್, ಸಂಚಾರಿ ಸತ್ಯ ಪತ್ರಿಕೆಯ ಉಪ ಸಂಪಾದಕರಾದ ಶ್ರೀ ಕೋದಂಡರಾಮು, ಶ್ರೇಯ ಫೌಂಡೇಶನ್ ನ ಸಂಸ್ಥಾಪಕರಾದ ಸಂತೋಷ್ ಹುಣಸನಹಳ್ಳಿರವರು, ಸಾಹಿತಿ ದೇವರಾಜು ಚನ್ನಸಂದ್ರರವರು, ವಕೀಲರಾದ ಹುಲುಕುಂಟೆ ಮಹೇಶ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿಶೇಷವಾಗಿ ಕಾದಂಬರಿ ಬಿಡುಗಡೆ ಸಮಾರಂಭವನ್ನು ನಮ್ಮ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ರವರ ವೇದಿಕೆಯಲ್ಲಿ ಮಾಡಲಾಯಿತು ಹಾಗೂ ಪುನೀತ್ ರಾಜ್ ಕುಮಾರ್ ಅವರಿಗಾಗಿ ಮೌನಚಾರಣೆ ಮೂಲಕ ಗೌರವ ಸಲ್ಲಿಸಲಾಯಿತು. ಕಾದಂಬರಿಯ ಕರ್ತೃ ಲೇಖಕಿ ರೂಪ ಜಿ. ಎಂ ರವರು ಮಾತನಾಡಿ ಕಾದಂಬರಿಯ ಬಗ್ಗೆ ಅವರ ಮನದಾಳದ ಮಾತುಗಳನ್ನು ಹಂಚಿಕೊಂಡರು. ಕನ್ನಡ ಭಾಷೆಯ ಕುರಿತು ಜಾಗೃತಿ ಮೂಡಿಸುವ ಮಾತುಗಳನ್ನಾಡಿದರು. ಕಾದಂಬರಿ ಬಿಡುಗಡೆ ಕಾರ್ಯಕ್ರಮದಲ್ಲಿ ನೂರಾರು ಜನರ ಭಾಗವಹಿಸುವಿಕೆಯಿಂದ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ಬಂದಿತ್ತು.
ವರದಿ~ಮೌನೇಶ್ ರಾಥೋಡ್ ಬೆಂಗಳೂರು