ಕಾಂಗ್ರೆಸ್ ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆ ರೈತ ಗೀತೆ ಮೂಲಕ ಚಾಲನೆ : ಸಾವಿರಾರು ಮಂದಿ ಭಾಗಿ..!!
ರಾಮನಗರ : ಬೆಂಗಳೂರು ಸಮೀಪದ ರಾಮನಗರದಿಂದ ಕಾಂಗ್ರೆಸ್ ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆಗೆ ರೈತ ಗೀತೆ ಮೂಲಕವಾಗಿ ಇದು ಚಾಲನೆ ನೀಡಲಾಗಿದೆ.ಸಾವಿರಾರು ಮಂದಿ ಇದರಲ್ಲಿ ಭಾಗಿಯಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿದೆ. ಕೈ ನಾಯಕರು ಮೊದಲ ದಿನ 15 ಕಿಲೋ ಮೀಟರ್ ಪಾದಯಾತ್ರೆ ಮಾಡಲಿದ್ದಾರೆ. ಸಂಗಮದಿಂದ ದೊಡ್ಡ ಆಲಹಳ್ಳಿಯವರೆಗೂ ಈ ಪಾದಯಾತ್ರೆ ನಡೆಯಲಿದೆ ಎಂದು ತಿಳಿದು ಬಂದಿದೆ. ಇಂದಿನಿಂದ ಆರಂಭವಾದ ಮೇಕೆದಾಟು ಪಾದಯಾತ್ರೆ ಜನವರಿ 18ರವರೆಗೆ ನಡೆಯಲಿದೆ. ನಮ್ಮ ನೀರು ನಮ್ಮ ಹಕ್ಕು ಘೋಷ ವಾಕ್ಯದೊಂದಿಗೆ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಆರಂಭಿಸಿದೆ. ಸಂಜೆಯ ವೇಳೆಗೆ ಕನಕಪುರವನ್ನು ತಲುಪಲಿದ್ದಾರೆ ಎನ್ನಲಾಗಿದೆ. ಈ ಮೇಕೆದಾಟು ಪಾದಯಾತ್ರೆ ಸಂಗಮದಲ್ಲಿ ಕೊರೊನಾ ರೂಲ್ಸ್ ದೊಡ್ಡ ಮಟ್ಟದಲ್ಲಿ ಉಲ್ಲಂಘನೆಯಾಗಿದೆ. ಕರ್ಫ್ಯೂ ನಿಯಮ ಮೀರಿ ಮಾಸ್ಕ್ ಇಲ್ಲದೆ, ಸಾಮಾಜಿಕ ಅಂತರ ಇಲ್ಲದೆ ಸಾವಿರಾರು ಜನ ಸೇರಿದ್ದಾರೆ. ಕೊರೊನಾ ರೂಲ್ಸ್ ಪಾಲನೆ ಮಾಡುತ್ತೇವೆ ಅಂತ ಕಾಂಗ್ರೆಸ್ ಹೇಳಿತ್ತು.ನಿಯಮ ಮೀರಿ ಸಾವಿರಾರು ಜನ ಸಂಗಮದಲ್ಲಿ ಜಮಾಯಿಸಿದ್ದಾರೆ ಎಂದು ಆರೋಪವು ಕೇಳಿ ಬರುತ್ತಿದೆ. “ನಮ್ಮ ಯಾರನ್ನಾದರೂ ಮುಟ್ಟಲಿ ನೋಡೋಣ, ನಾವು ಪಾದಯಾತ್ರೆ ಮಾಡಿಯೇ ಮಾಡುತ್ತೇವೆ” ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. “ಎಲ್ಲರೂ ಮಾಸ್ಕ್ ಹಾಕಿ, ಅಂತರ ಕಾಪಾಡಿ ಆರೋಗ್ಯ ಮುಖ್ಯ” ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವರದಿ – ಸಂಪಾದಕೀಯ