ಸಾಹಿತ್ಯ ಲೋಕದ ಹಿರಿಯ ಚೇತನ ಚಂದ್ರಶೇಖರ ಪಾಟೀಲ.

Spread the love

ಸಾಹಿತ್ಯ ಲೋಕದ ಹಿರಿಯ ಚೇತನ ಚಂದ್ರಶೇಖರ ಪಾಟೀಲ.

ಕರ್ನಾಟಕದ ಹಿರಿಯ ಅಗ್ರಗಣ್ಯ, ಧೀಮಂತ ಸಾಹಿತಿ ಚಂದ್ರಶೇಖರ ಪಾಟೀಲರ ಅಗಲಿಕೆ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಸಾಹಿತ್ಯದ ಬಹಳಷ್ಟು ಪ್ರಾಕಾರಗಳಲ್ಲಿ ತಮ್ಮದೇ ಆಕ್ರಮಣಕಾರಿ ನಿಲುವಿನಲ್ಲಿ ಛಾಪು ಮೂಡಿಸಿದ ಹಿರಿಯ ಕವಿ ಚೇತನ. ಸಾಹಿತಿ, ವಿಮರ್ಶಕ, ನಾಟಕಕಾರ,ಹೋರಾಟಗಾರರಾಗಿದ ಪ್ರೊಫೆಸರ್ ಚಂದ್ರಶೇಖರ್ ಪಾಟೀಲ್ (ಚಂಪಾ) ಅವರು ನಿಧನರಾದ ಸುದ್ದಿ ಬಹಳ ಬರಸಿಡಿಲಿನಂತೆ ನೋವು ತಂದಿದೆ. ಹಾವೇರಿ ಜಿಲ್ಲೆಯ ಹತ್ತಿಮತ್ತೂರಿನವರಾದ ಚಂಪಾ ಅವರು ಒಬ್ಬ ಕ್ರಾಂತಿಕಾರಿ ಸಾಹಿತಿ ಎಂದರೆ ತಪ್ಪಾಗಲಾರದು. ಕನ್ನಡ ನಾಡು-ನುಡಿಗೆ ಅವರು ಸಲ್ಲಿಸಿದ ಕೊಡುಗೆ ಅಪ್ರತಿಮ,ಅಪಾರ. ಗೋಕಾಕ್ ಚಳವಳಿ ಸೇರಿದಂತೆ ಕನ್ನಡಕ್ಕಾಗಿ ನಡೆದ ಹಲವಾರು ಹೋರಾಟಗಳಲ್ಲಿ ಮುಂಚೂಣಿಯಾಗಿ ನಿಂತವರು. ರಾಜ್ಯದಲ್ಲಿ ಕನ್ನಡ ಭಾಷಾ ಮಾಧ್ಯಮ ಕಲಿಕೆಗೆ ಒತ್ತು ಕೊಟ್ಟವರು.ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದಲ್ಲಿ ಅವರು ಪ್ರಾಧ್ಯಾಪಕರಾಗಿ ಚೇರ್ಮನ್ ಆಗಿ ಸೇವೆ ಸಲ್ಲಿಸಿ. ಸಂಕ್ರಮಣ ಎಂಬ ಸಾಹಿತ್ಯ ಪತ್ರಿಕೆಯ ಸಂಪಾದಕತ್ವದ ಸಾರಥ್ಯವನ್ನು ಯಶಸ್ವಿಯಾಗಿ ಮುನ್ನುಡಿಸಿದ ಕೀರ್ತಿ ಅವರದು.ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿ, ಎಲ್ಲರಿಂದಲೂ ಸೈ ಎನಿಸಿಕೊಂಡ ಧೀಮಂತ ವೈಚಾರಿಕತೆಯ ಮೂರ್ತಿಯಾಗಿ, ಕನ್ನಡ ನಾಡಿನ ಉನ್ನತಿಗಾಗಿ ಶ್ರಮಿಸಿದ ಕರುನಾಡಿನ ಶ್ರೇಷ್ಠ  ಸಾಹಿತಿ ಚಂದ್ರಶೇಖರ ಪಾಟೀಲ ರವರು.  ಚಂದ್ರಶೇಖರ್ ಪಾಟೀಲ್ ಅವರ ಬಾಲ್ಯ, ಕೌಟುಂಬಿಕ ಹಿನ್ನೆಲೆ, ಶಿಕ್ಷಣ, ಸಾಹಿತ್ಯ ಲೋಕಕ್ಕೆ ಅವರು ಸಲ್ಲಿಸಿದ ಸೇವೆ ಹಾಗೂ ಪಡೆದ ಪ್ರಶಸ್ತಿಗಳ ಕುರಿತು ಅವರ ಜೀವನವನ್ನು ಪರಿಚಯಿಸುವ ಕುರಿತು ಒಂದು ವಿವರಣಾತ್ಮಕ ಲೇಖನ ಇದಾಗಿದೆ.

ಚಂದ್ರಶೇಖರ ಪಾಟೀಲ ರವರ ಜನನ ಜೂನ್ ೧೮, ೧೯೩೯ ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಹತ್ತೀಮತ್ತೂರು ಎಂಬ ಊರಿನ ಬಸವರಾಜ ಹಿರೇಗೌಡರು ಮತ್ತು ಶ್ರಿಮುರಿಗವ್ವ ದಂಪತಿಯ ಪುತ್ರರಾಗಿ ಜನಿಸಿ, ಹಾವೇರಿಯಲ್ಲಿಯೇ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ, ಧಾರವಾಡದಲ್ಲಿ ಪ್ರೌಢ ಮತ್ತು ಉನ್ನತ ಶಿಕ್ಷಣವನ್ನು ಪಡೆದುಕೊಂಡರು. ಇಂಗ್ಲಿಷ್ ಎಂ.ಎ. ಪದವಿ ಹೊಂದುವ ಮೂಲಕ ಇಂಗ್ಲೆಂಡಿನ ಲೀಡ್ಸ್ ವಿಶ್ವವಿದ್ಯಾಲಯದಿಂದ ಭಾಷಾಶಾಸ್ತ್ರದಲ್ಲಿನ ಸ್ನಾತಕೋತ್ತರ ಪದವಿ ಮತ್ತು ಹೈದರಾಬಾದಿನ ಕೇಂದ್ರೀಯ ಇಂಗ್ಲಿಷ್ ಸಂಸ್ಥೆಯಿಂದ ಇಂಗ್ಲಿಷ್ ಅಧ್ಯಯನದ ಡಿಪ್ಲೊಮಾ ಸಹ ಪಡೆದಿದ್ದರು. ಮುಂದೆ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ, ವೃತ್ತಿ ಜೀವನವನ್ನು ಆರಂಭಿಸಿ,ಕನ್ನಡ ನಾಡು ನುಡಿ, ಭಾಷೆಗಾಗಿ ದುಡಿದಿದ್ದಾರೆ.ಅಧ್ಯಾಪಕರಾಗಿ ತಮ್ಮ ವೃತ್ತಿಜೀವನ ಆರಂಭಿಸಿದ್ದ ಚಂಪಾ, ಆನಂತರ ಸಾಹಿತಿಯಾಗಿ, ಪತ್ರಕರ್ತರಾಗಿ ನಾಡಿನಾದ್ಯಂತ ಹೆಸರು ಮಾಡಿದವರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್‌ ಉಪನ್ಯಾಸಕರಾಗಿ ಬೋಧಕ ವೃತ್ತಿ ಆರಂಭಿಸಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಲೇ ತಮ್ಮ ಕಾವ್ಯ ಹಾಗೂ ನಾಟಕಗಳ ಮೂಲಕ ಪ್ರಸಿದ್ಧರಾಗಿದ್ದವರು. ಚಂಪಾರವರ ಸಾಹಿತ್ಯ ಪ್ರೇಮ: ಲೇಖಕ, ಪ್ರಾಧ್ಯಾಪಕ, ಸಂಘಟನಕಾರರು, ಅಂಕಣಕಾರರು, ಹೀಗೆ ವಿವಿಧ ರಂಗದಲ್ಲಿ ಸೇವೆ ಸಲ್ಲಿಸುತ್ತಾ, ಡಾಕ್ಟರೇಟ್ ಪದವಿಯೊಂದಿಗೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕೆ ಕಾಲಿರಿಸಿದ ಸಾಹಿತಿ ಎಂದರೆ ಚಂಪಾರವರು. ಪ್ರಗತಿಪರ ವೈಜ್ಞಾನಿಕ ಚಿಂತಕರಾಗಿ,.ಕನ್ನಡ ನಾಡಿನ ಶ್ರೇಷ್ಠ ಕವಿಯಾಗಿ, ನಾಟಕಕಾರಾಗಿ, ಸಂಘಟನಕಾರಾಗಿ, ಪತ್ರಿಕಾ ಸಂಪಾದಕ, ಆಡಳಿತಗಾರ, ಕನ್ನಡ ಹೋರಾಟಗಾರ, ನೇರ ನುಡಿಯ ಸ್ನೇಹ ಜೀವಿಯಾಗಿ, ಬಂಡಾಯದ ಸಾಹಿತಿಯಾಗಿ, ಹೀಗೆ ಬಹುಮುಖ ವ್ಯಕ್ತಿತ್ವದಿಂದ ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡಿದರಿಂದ ಅಂದರೆ ಅವರ ಹೋರಾಟದಿಂದ ಕನ್ನಡ ನಾಡಿಗೆ ಘನತೆ ಯನ್ನು ತಂದು ಕೊಡುವಲ್ಲಿ ಶ್ರಮಿಸಿದ್ದಾರೆ. ಈ ಮೂಲಕ ಸಾಹಿತ್ಯ ಪ್ರೇಮದ ಸುಗಂಧವನ್ನು ಕರುನಾಡಿನಲ್ಲಿ ಹಂಚಿದ್ದಾರೆ. ಜೊತೆಗೆ  ಸಂಕ್ರಮಣ ಕಾವ್ಯವೆಂಬ ಪತ್ರಿಕೆಯನ್ನು ಕಳೆದ 50 ವರ್ಷಗಳಿಂದ ನಿರಂತರವಾಗಿ ಪ್ರಕಟಿಸಿದ ಚಂಪಾ, ಆ ಪತ್ರಿಕೆಯು ನವ್ಯದ ಉಚ್ಛ್ರಾಯ ಸ್ಥಿತಿಯಲ್ಲಿ ಪ್ರಾರಂಭವಾಗಿದ್ದು ಎಪ್ಪತ್ತರ ದಶಕದ ನಂತರ ದಲಿತ, ಬಂಡಾಯ ಸಾಹಿತ್ಯ ಚಳವಳಿ ಮುಂತಾದವುಗಳನ್ನು ಒಳಗೊಂಡು ಹಲವಾರು ಯುವ ಬರಹಗಾರರಿಗೆ ವೇದಿಕೆಯನ್ನು ಕಲ್ಪಿಸಿದ ಪತ್ರಿಕೆಯಾಗಿ ಐದು ದಶಕಗಳಿಗೂ ಹೆಚ್ಚು ಕಾಲದಿಂದ ಪ್ರಕಟವಾಗುತ್ತಿದೆ. ಹೀಗೆ ಹತ್ತಕ್ಕೂ ಹೆಚ್ಚು ಗ್ರಂಥಗಳನ್ನು ಸಂಪಾದಿಸಿದ್ದಾರೆ.  ಬಾನುಲಿ, ಮಧ್ಯಬಿಂದು, ಹೂವು ಹಣ್ಣು ತಾರೆ, ಓ ಎನ್ನ ದೇಶ ಬಾಂಧವರೇ, ಗುಂಡಮ್ಮನ ಹಾಡು ಮೊದಲಾದ ಕವನ ಸಂಗ್ರಹ ಹೊರತಂದಿದ್ದಾರೆ. ಕೊಡೆಗಳು, ಗೋಕರ್ಣದ ಗೌಡಶಾನಿ, ನಳ ಕವಿಯ ಮಸ್ತಕಾಭಿಷೇಕ, ವಂದಿಮಾಗಧ ಮೊದಲಾದ ನಾಟಕಗಳನ್ನು ರಚಿಸಿದ್ದಾರೆ. ಬೇಂದ್ರೆ-ನಾನು ಕಂಡಂತೆ, ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ, ಚಂಪಾದಕೀಯ ಇತ್ಯಾದಿ ಕೃತಿಗಳನ್ನು ರಚಿಸಿದ್ದಾರೆ. ಇಂಗ್ಲಿಷಿನಲ್ಲಿ ಹತ್ತಾರು ನಿಯತಕಾಲಿಕೆಗಳಿಗೆ ಲೇಖಕರಾಗಿರುವ ಇವರು ಇಂಗ್ಲಿಷಿನಲ್ಲಿ ಪೊಯಮ್ಸ್ ಅಂಡ್ ಪ್ಲೇಸ್ ಎಂಬ ಗ್ರಂಥವನ್ನು (ಕನ್ನಡದಿಂದ ಅನುವಾದಿಸಿದ ಕೃತಿಗಳು) ಹೊರತಂದಿದ್ದು ಕನ್ನಡ ಸಾಹಿತ್ಯ ಲೋಕಕ್ಕೆ ತನ್ನದೇ ಆದ ಕೊಡುಗೆ ಕೊಟ್ಟಿದ್ದಾರೆ. ಇನ್ನು ಕಾವ್ಯಕೃಷಿಯಲ್ಲೇ ತೊಡಗಿಸಿಕೊಂಡಿದ್ದ ಚಂಪಾರವರು ಹಲವಾರು ಸಮಸ್ಯೆಗಳ ಮಿಡಿತಕ್ಕೆ ಒಳಗಾಗಿ ಕಾವ್ಯ ಮಾಧ್ಯಮದಿಂದ ನಾಟಕಮಾಧ್ಯಮವನ್ನೂ ಆಯ್ದುಕೊಂಡು ಹಲವಾರು ನಾಟಕಗಳನ್ನೂ ರಚಿಸಿದ್ದು ಯಾರು ಮರೆಯುವಂತಿಲ್ಲ.

ಜನಪರ ಕಾಳಜಿ: ಸಾಹಿತ್ಯ ಲೋಕದಲ್ಲಿ ‘ಚಂಪಾ’ ಎಂದೇ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುವ ಚಂಪಾ ಅವರು ಎಲ್ಲ ಜನವರ್ಗ ಜನರ ಹೃದಯದ ಮನಸ್ಸುಗಳಲ್ಲಿ ಚಿರಪರಿಚಿತದವರು. ಹಾಸ್ಯ, ವಿಡಂಬನೆ ಮತ್ತು ನೇರ-ನಿಷ್ಠುರ ಪ್ರಗತಿಪರ ಚಿಂತಕ, ನೇರ ನುಡಿ ನಡೆಗೆ ಮಾದರಿ ವ್ಯಕ್ತಿ, ಕಾವ್ಯ, ನಾಟಕ, ವಿಮರ್ಶಾ ವಲಯಗಳಲ್ಲಿ ಸ್ವತಃ ಕೃಷಿ ಮಾಡುತ್ತಲೇ 1934ರಲ್ಲಿ ‘ಸಂಕ್ರಮಣ’ ಮಾಸಪತ್ರಿಕೆ ಆರಂಭಿಸಿ, ಇಂದಿನವರೆಗೂ ಸಾವಿರಾರು ಜನ ಉದಯೋನ್ಮುಖ ಸಾಹಿತಿಗಳಿಗೆ ಪ್ರೇರಣೆ ಮತ್ತು ಬರಹ ವೇದಿಕೆ ನೀಡಿದವರು. ಚಂದ್ರಶೇಖರ ಪಾಟೀಲರು ಉತ್ತರ ಕರ್ನಾಟಕದ ಹೆಮ್ಮೆಯ ಪುತ್ರರಾಗಿ, ಮಾಡಿದ ದೊಡ್ಡ ಕೆಲಸವೆಂದರೆ ಸಾಂಸ್ಕೃತಿಕ,ಸಾಹಿತ್ಯ ದ ರಾಜಧಾನಿ ಎನಿಸಿಕೊಂಡಿರುವ ಧಾರವಾಡದಲ್ಲಿ ಕನ್ನಡ ಪರ ಕಾಳಜಿ ವಹಿಸಿ, ಕನ್ನಡ ಪರ ಹೋರಾಟವನ್ನು ನಡೆಸುತ್ತಾ ಬಂದವರು. ಹಲವಾರು ಸಂಘಟನೆಗಳಲ್ಲಿ ಪ್ರಮುಖ ಪಾತ್ರವಹಿಸಿದವರು. ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆಯ ಸಂಚಾಲಕರಾಗಿ, ಅಖಿಲ ಕರ್ನಾಟಕ ಕೇಂದ್ರ ಕನ್ನಡ ಕ್ರಿಯಾಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ, ಧಾರವಾಡ ನಾಟಕ ಕೂಟದ ಕಾರ್ಯದರ್ಶಿಯಾಗಿ, ಮ್ಯಾಳ ನಾಟಕ ಸಂಘದ ಕಾರ್ಯಾಧ್ಯಕ್ಷರಾಗಿ, ಕರ್ನಾಟಕ ವಿಶ್ವವಿದ್ಯಾಲಯದ ವಿಶ್ವಚೇತನ ಸಾಂಸ್ಕೃತಿಕ ವೇದಿಕೆಯ ಸಂಯೋಜಕರಾಗಿ-ಹೀಗೆ ಹಲವು ಹತ್ತು ಸಂಘಟನೆಗಳಲ್ಲೂ, ದುಡಿಯುವ ಮೂಲಕ ಸಂಘಟನೆಗಳು ಬಲಗೊಳಿಸುವ ದಿಸೆಯಲ್ಲಿ ಅವಿರತ್ನ ಪ್ರಯತ್ನ ಮಾಡಿದ್ದಾರೆ. ಗೋಕಾಕ ಚಳವಳಿ ಮುಂದಾಳತ್ವ ವಹಿಸಿಕೊಂಡು ಚಳವಳಿ ಶ್ರೇಯಸ್ಸಿಗೆ ಹೋರಾಡಿದಾರೆ. ಇನ್ನು ಅನೇಕ ಜನಪರ ಚಳವಳಿಗಳಲ್ಲೂ  ತೊಡಗಿಸಿಕೊಂಡವರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜೈಲುವಾಸವನ್ನು ಅನುಭವಿಸಿದಾರೆ.ಹೀಗೆ ಜನಪರ, ನಾಡಿನ ಪರ ಹಗಲು ರಾತ್ರಿ ಎನ್ನದೆ,ನಿಸ್ವಾರ್ಥ ದಿಂದ ಸೇವೆ ಮಾಡಿದ ಶ್ರೇಷ್ಠ ಸಾಹಿತಿ ಚಂಪಾ ರವರದಾಗಿತ್ತು.

ಸಂಘಟನೆ/ಹೋರಾಟ: ದಾರವಾಡದಲ್ಲಿ ಆರಂಭಗೊಂಡ ಅಖಿಲ ಕರ್ನಾಟಕ ಕೇಂದ್ರ ಕನ್ನಡ ಕ್ರಿಯಾ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಗೊಳ್ಳುವ ಮೂಲಕ , ಸಮಿತಿಯ ಕಾರ್ಯಚಟುವಟಿಕೆಗಳು ನಿರಂತರವಾಗಿ  ಸಾಗುವ ದಿಸೆಯಲ್ಲಿ ,ಸಂಘಟನಾ ಯಾತ್ರೆ ಗೋಕಾಕ್ ಚಳವಳಿ, ನಾಟಕ ಸಂಘಗಳು, ಬಂಡಾಯ ಸಾಹಿತ್ಯ ಸಂಘಟನೆ ಕಾರ್ಯಕ್ರಮ ಗಳು ಹಾಗೂ ಇತ್ಯಾದಿ ಸಂಘಟನೆ ಕೆಲಸಗಳು ಮಾಡುವಲ್ಲಿ ಯಶಸ್ವಿಯಾಗಿದರು ಅವರು ಪರಿಷತ್ತಿನ ಅಧ್ಯಕ್ಷರಾಗಿದ್ದಾಗ ಪರಿಷತ್ತನ್ನು ಪ್ರಬಲ ಹೋರಾಟದ ವೇದಿಕೆಯನ್ನಾಗಿ ರೂಪಿಸಿದ್ದು, ಪುಸ್ತಕ ಮಾರಾಟದ ಮೂಲಕ ಸಣ್ಣ ಪ್ರಮಾಣದ ಪ್ರಕಾಶಕರನ್ನು ಉತ್ತೇಜಿಸಲು ‘ಪುಸ್ತಕ ಸಂತೆ’ಯನ್ನು ಪ್ರತಿ ಶನಿವಾರ ಸಂಜೆ ಏರ್ಪಡಿಸಿದ್ದರ ಜೊತೆಗೆ ಆಯೋಜಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು, ಶಿಕ್ಷಣ ಸಮಸ್ಯೆಯನ್ನು ಪರಿಹರಿಸಲು ಉನ್ನತ ಮಟ್ಟದ ಸಮಾಲೋಚನ ಸಭೆಯನ್ನು ಏರ್ಪಡಿಸಿದ್ದು, ಗಡಿನಾಡ ಕನ್ನಡಿಗರ ಸಮಸ್ಯೆಗಳ ಪರಿಹಾರಕ್ಕಾಗಿ ಅಧ್ಯಕ್ಷರ ಪುಸ್ತಕ ನಿಧಿಯನ್ನು ಪ್ರಾರಂಭಿಸಿದ್ದು, ಕನ್ನಡ ಭಾಷೆಗೂ ಶಾಸ್ತ್ರೀಯ ಸ್ಥಾನಮಾನ ದೊರೆಯುವಂತಾಗಲು ಹೋರಾಟ ನಡೆಸಿದ್ದು, ಕನ್ನಡ ಸಾಹಿತ್ಯಕ್ಕೆ ಬಹುದೊಡ್ಡ ಗೆಲುವು ಅನ್ನಬಹುದಾಗಿದೆ.ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡವೇ ಬೋಧನಾ ಮಾಧ್ಯಮವಾಗಿರಬೇಕು, ಬೇಕಿದ್ದರೆ ಇಂಗ್ಲಿಷನ್ನು ಪ್ರಾಥಮಿಕ 5ನೇ ತರಗತಿಯಿಂದ (ಮಿಡ್ಲ್‍ಸ್ಕೂಲ್) ಕಲಿಸಬೇಕು, ಕೇಂದ್ರ ಪಠ್ಯಕ್ರಮದ (ಹಿಂದಿ ಇಂಗ್ಲಿಷ್) ಮಾಧ್ಯಮಗಳ ಶಾಲೆಗಳಲ್ಲಿ ಕರ್ನಾಟಕದಲ್ಲಿ ಕನ್ನಡವನ್ನು ಕಲಿಸಬೇಕು- ಎಂಬ ವಿಷಯಗಳ ಬಗ್ಗೆ ಚಂಪಾ ಸರ್ಕಾರದೊಡನೆ ಹೋರಾಡಿದವರು. ನಾಡಿನ ಶಿಕ್ಷಣತಜ್ಞರನ್ನು, ವಿದ್ವಾಂಸರನ್ನು ಕಾನೂನು ತಜ್ಞರನ್ನು ಕನ್ನಡ ಸಂಘಟನೆಗಳ ಪ್ರಮುಖರನ್ನು ಆಹ್ವಾನಿಸಿ ಸಮಾಲೋಚನಾ ಸಭೆ ಏರ್ಪಡಿಸಿ ಕನ್ನಡ ಮಾಧ್ಯಮದ ಸಮಸ್ಯೆಗಳನ್ನು ಚರ್ಚಿಸಿದರು. ಕನ್ನಡ ಮಾಧ್ಯಮದಲ್ಲಿ ಶಾಲೆ ನಡೆಸಲು ಅನುಮತಿ ಪಡೆದು ಇಂಗ್ಲಿಷ್ ಮಾಧ್ಯಮದಲ್ಲಿಯ ೨೨೧೫ ಶಾಲೆಗಳನ್ನು ಕನ್ನಡ ದ್ರೋಹಿ ಶಾಲೆಗಳೆಂದು ಪರಿಗಣಿಸಿ ಇವುಗಳನ್ನು ರದ್ದು ಮಾಡಲು ಹಕ್ಕೊತ್ತಾಯ ಮಾಡಿದಾಗ ಸರ್ಕಾರ ಶಾಲೆಯ ಮಾನ್ಯತೆಯನ್ನು ರದ್ದುಮಾಡಿತು.ಶಾಸ್ತ್ರೀಯ ಭಾಷೆಗಾಗಿ ಹೋರಾಟ ಮಾಡಿದವರು. ಪರಿಷತ್ತಿಗೆ ತನ್ನದೇ ಆದ ವೆಬ್ಸೈಟ್, ಅಂತರ್ಜಾಲ ಸೌಲಭ್ಯಗಳು, ಗಣಕ ಸಮ್ಮೇಳನದ ಆಯೋಜನೆ ಮುಂತಾದ ಹತ್ತು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಪರಿಷತ್ತಿಗು ಕೀರ್ತಿ ತಂದಿದ್ದಾರೆ.

ಗೌರವ ಸನ್ಮಾನ/ಪ್ರಶಸ್ತಿಗಳು: ಕನ್ನಡ ನಾಡು-ನುಡಿ, ಸಂಸ್ಕೃತಿಯ ರಕ್ಷಣೆಗಾಗಿ ನಿರಂತರ ಹೋರಾಡುತ್ತಾ ಬಂದಿರುವ ಚಂಪಾರವರಿಗೆ ಬಂದಿರುವ ಪ್ರಶಸ್ತಿ ಗೌರವಗಳು ಹಲವಾರು ಅವುಗಳಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ಗೌರವ ಪ್ರಶಸ್ತಿ., ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ.,ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ.,ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ., ಕೆ.ವಿ. ಶಂಕರಗೌಡ ರಂಗಭೂಮಿ ಪ್ರಶಸ್ತಿ.,ಸಂದೇಶ್ ಮಾಧ್ಯಮ ಪ್ರಶಸ್ತಿ, ಕರುನಾಡ ಭೂಷಣ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ ಮತ್ತು ಪಂಪ ಪ್ರಶಸ್ತಿ., 2017 ರಲ್ಲಿ ಮೈಸೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಅಂತಾರಾಷ್ಟ್ರೀಯ ಪ್ರಶಸ್ತಿ., ದೇಶದ ಪ್ರಗತಿಪರ ವೈಜ್ಞಾನಿಕ ವೈಚಾರಿಕ ಪ್ರತಿಷ್ಠಿತ ಮುರುಘಾ ಮಠದ ವತಿಯಿಂದ ನೀಡಲಾಗುವ 2018ನೇ ಸಾಲಿನ ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿ.,ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಇವರ ನಿಸ್ವಾರ್ಥ ಸೇವೆಗೆ ಸಂಧಿವೆ.

ಗೌರವ ನಮನಗಳು : ಚಂದ್ರಶೇಖರ ಪಾಟೀಲರು ‘ಕನ್ನಡ ಕಾವ್ಯದ ಭೂತ ಭವಿಷ್ಯವ ಬಣ್ಣಿಸಿ ಹೇಳೋ ಗಾಂಪಾ; ನಮ್ಮ ಆದಿಕವಿ ಪಂಪಾ, ಗುರುವೇ ನಮ್ಮ ಅಂತ್ಯಕವಿ ಚಂಪಾ’ ಎಂದು ಅಂದು ತಮ್ಮನ್ನೇ ತಾವು ವಿನೋದ ಮಾಡಿಕೊಳ್ಳುತ್ತಿದ್ದ ಚಂದ್ರಶೇಖರ ಪಾಟೀಲ ರವರ ನಿಧನದಿಂದ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಕನ್ನಡ ಸಾಹಿತ್ಯ ಕ್ಷೇತ್ರ ಬಡವಾಗಿದೆ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ ಹಾಗೂ ಅವರ ಅಭಿಮಾನಿಗಳಿಗೆ ಆ ಬಸವಾದಿ ಪ್ರಮಥರು ಕರುಣಿಸಲಿ ಎಂದು ಪ್ರಾರ್ಥಿಸುತ್ತಾ, ಹಿರಿಯ ಸಾಹಿತಿ ಚೇತನಕ್ಕೆ ಅಂತಿಮ ಭಕ್ತಿಯ ನಮನಗಳು ಸಲ್ಲಿಸುತ್ತೇನೆ.

ಲೇಖಕರು : ಸಂಗಮೇಶ ಎನ್ ಜವಾದಿ,ಬೀದರ ಜಿಲ್ಲೆ. ಅಧ್ಯಕ್ಷರುಕಲ್ಯಾಣ ಕರ್ನಾಟಕ ಸಾಹಿತ್ಯ ಪರಿಷತ್ತು.

Leave a Reply

Your email address will not be published. Required fields are marked *