ಜಲಸಿಂಚನ ಯೋಜನೆಯಲ್ಲಿ 2.50 ಕೋಟಿ ಕೃಷಿ ತೋಟಗಾರಿಕೆ ಅಧಿಕಾರಿಗಳ ಅಕ್ರಮ, ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಗರಂ-
ಚಿಕ್ಕಬಳ್ಳಾಪುರ : ಜಿಲ್ಲೆಯ ಗುಡಿಬಂಡೆ ಬಾಗೇಪಲ್ಲಿ ತಾಲೂಕಿನ ರೈತರ ತೋಟಗಳಲ್ಲಿ ಅಳವಡಿಸಿರುವ ಹನಿ ನೀರಾವರಿ ಯೋಜನೆಯಲ್ಲಿ ಭಾರೀ ಲೋಪವಾಗಿದ್ದು ಸುಮಾರು 2.50 ಕೋಟಿ ಅಕ್ರಮವೆಸಗಲಾಗಿದೆ. ಇದಕ್ಕೆ ಕಾರಣಕರ್ತರಾದ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ರೂಪ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ಇವರ ಅದಕ್ಷ ಕಾರ್ಯವೈಖರಿಯೇ ಕಾರಣವಾಗಿದ್ದು ಇವರನ್ನು ಸೇವೆಯಿಂದ ಅಮಾನತುಗೊಳಿಸಬೇಕೆಂದು ಸಂಸದ ಬಿ.ಎನ್.ಬಚ್ಚೇಗೌಡ ಅಧ್ಯಕ್ಷತೆಯಲ್ಲಿ ನಡೆದ ದಿಶಾ ಸಭೆಯಲ್ಲಿ ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಗರಂ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೇಂದ್ರ ಪುರಸ್ಕೃತ ಯೋಜನೆಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜನಪ್ರತಿನಿಧಿಗಳ ಆರೋಪ, ಅಧಿಕಾರಿಗಳ ಸಮರ್ಥನೆ ಇತ್ಯಾದಿ ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗಿತ್ತು. ಜಿಲ್ಲಾ ಪಂಚಾಯಿತಿ, ಪಿ.ಎಂ.ಜಿ.ಎಸ್.ವೈ, ಕೃಷಿ, ತೋಟಗಾರಿಕೆ, ಆರೋಗ್ಯ, ರಾಷ್ಟ್ರೀಯ ಹೆದ್ದಾರಿ, ಪಶುಪಾಲನೆ, ರೇಷ್ಮೆ ಇಲಾಖೆ ಹೀಗೆ ಸುಮಾರು 21 ಇಲಾಖೆಗಳ ಪ್ರಗತಿ ಪರೀಶೀಲನೆಗಾಗಿ ನಡೆದ ದಿಶಾ ಸಭೆಯಲ್ಲಿ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ ಸೇರಿದಂತೆ ಹಲವು ಇಲಾಖಾ ಅಧಿಕಾರಿಗಳ ಗೈರು ಎದ್ದು ಕಾಣುತ್ತಿತ್ತು. ಇನ್ನು ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳು ಸಂಸದರು ಸೇರಿದಂತೆ ಇತರೆ ಜನಪ್ರತಿನಿಧಿಗಳು ಕೇಳುತ್ತಿದ್ದ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರ ನೀಡುವಲ್ಲಿ ವಿಫಲರಾಗಿದ್ದು ಕಂಡು ಬಂತು. ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಭಿವೃದ್ದಿ ವಿಚಾರಗಳು ಚರ್ಚೆಗೆ ಬಂದ ಸಂದರ್ಭವಂತೂ ಬಾಗೇಪಲ್ಲಿ ಶಾಸಕ ಎಸ್ ಎನ್ ಸುಬ್ಬಾರೆಡ್ಡಿ ಅಧಿಕಾರಿಗಳನ್ನು ಹಿಗ್ಗಮುಗ್ಗ ತರಾಟೆಗೆ ತೆಗೆದುಕೊಂಡರು. ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಜಂಟಿಯಾಗಿ ಜಲ ಸಿಂಚನ ಯೋಜನೆಯಲ್ಲಿ ನಡೆದಿರುವ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಭೂರಹಿತರು, ಕೊಳವೆಬಾವಿ ಇಲ್ಲದವರ ಹೆಸರಿನಲ್ಲೂ ಕೂಡ ಹಣ ಮಂಜೂರು ಆಗಿದೆ. ವಿಶೇಷ ಎಂದರೆ ತೋಟಗಾರಿಕೆ ಇಲಾಖೆಯಲ್ಲಿ ಫಲಾನುಭವಿಯಾದವರು, ಕೃಷಿ ಇಲಾಖೆಯಲ್ಲೂ ಫಲಾನುಭವಿಯಾಗಿದ್ದಾರೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ಥಳ ತನಿಖೆ ಮಾಡದೆ, ಫಲಾನುಭವಿಯ ಮಾಹಿತಿ ಪರಿಶೀಲಿಸದೆ ಅದೇಗೆ ಬಿಲ್ಲು ಪಾಸು ಮಾಡಲು ಸಾಧ್ಯ. ಈ ಬಗ್ಗೆ ನನ್ನ ಬಳಿ ದಾಖಲೆಯಿದೆ. ಬೇಕಿದ್ದರೆ ಪರಿಶೀಲಿಸಿ ಎಂದು ಸಂಸದರ ಮುಂದೆಯೇ ದಾಖಲೆಗಳನ್ನು ಬಿಡುಗಡೆಗೊಳಿಸಿದರು. ನನ್ನ ಆರೋಪದಲ್ಲಿ ತಪ್ಪಿದ್ದರೆ ಮುಂದಿನ ದಿಶಾ ಸಭೆಗೆ ನಾನು ಬರುವುದೇ ಇಲ್ಲ ಎಂದು ಶಪಥ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಎರಡೂ ಇಲಾಖೆಗಳ ಅಧಿಕಾರಿಗಳು ನಮ್ಮದು ತಪ್ಪಿಲ್ಲ. ತಪ್ಪು ಮಾಡಿದ ಅಧಿಕಾರಿಗಳನ್ನು ರಕ್ಷಣೆ ಮಾಡುವ ಪ್ರಮೇಯವೇ ಇಲ್ಲ. ಎಲ್ಲವನ್ನೂ ಆನ್‌ಲೈನ್ ಮೂಲಕವೇ ಪಾರದರ್ಶಕವಾಗಿ ನಡೆದಿದೆ ಎಂದು ಸಮರ್ಥನೆ ಮಾಡಿಕೊಂಡರು. ಇವರ ಮದ್ಯೆ ಪ್ರವೇಶಿಸಿ ಮಾತನಾಡಿದ ಸಂಸದ ಬಚ್ಚೇಗೌಡ ನಿಮ್ಮ ತಾಲ್ಲೂಕಿನ ಅಧಿಕಾರಿಗಳನ್ನು ನಿಮ್ಮ ಕಪಿ ಮುಷ್ಟಿಯಲ್ಲಿರಬೇಕು ಸಮನ್ವಯ ಮಾಡಿಕೊಂಡು ಮಾಡದೆ ಇದ್ರೆ ಯಾವುದು ಸರಿಯಾಗುವುದಿಲ್ಲ, ಇವೆಲ್ಲಾ ಮಧ್ಯವರ್ತಿಗಳು ಮಾಡ್ತಾ ಇದ್ದಾರಾ? ನೀವು ಜಿಲ್ಲಾ ಅಧಿಕಾರಿಯಾಗಿದ್ದೀರಾ? ನಿಮ್ಮ ಕೈ ಕೆಳಗಡೆ ಕೆಲಸ ಮಾಡುವಂತಹ ಅಧಿಕಾರಿಗಳು ಇದ್ದಾರೆ ಅಲ್ವಾ ಕೆಲಸ ಮಾಡಿಸಿಕೊಳ್ಳಬಹುದು ಅಲ್ವಾ? ಎಂದು ಪ್ರಶ್ನೆ ಮಾಡಿದರು. ಇದೇ ವೇಳೆ ನರೇಗಾ ಕೌಶಲ್ಯಾಭಿವೃದ್ದಿ, ಗ್ರಾಮೀಣ ಕುಡಿಯುವ ನೀರು ಒಳಚರಂಡಿ, ಪಶುಪಾಲನೆ, ಇತ್ಯಾದಿ ಇಲಾಖೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಶಿವಶಂಕರ್, ಎಸ್ಪಿ ಮಿಥುನ್‌ಕುಮಾರ್, ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು. ವರದಿ – ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428