ವಿವೇಕಾನಂದರ ವಿಚಾರಧಾರೆ ಮತ್ತು ರಾಷ್ಟ್ರೀಯ ದಿನದ ಕುರಿತು ಬರೇದ ಉತ್ತಮ ಲೇಖನ ತಪ್ಪದೆ ಓದಿ……
ಅತ್ಯಂತ ಇತಿಹಾಸ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ವಜ್ಞಾನಿಗಳಲ್ಲಿ ಒಬ್ಬರಾದ ಸ್ವಾಮಿ ವಿವೇಕಾನಂದರು ನಿರ್ಭಿಡತೆ, ದೇಶಭಕ್ತಿ,ಆಶಾವಾದ, ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೂರದೃಷ್ಟಿಯ ಕುರಿತು ಮಾನವೀಯ ಮೌಲ್ಯಗಳನ್ನು ಈ ಜಗತ್ತಿನಲ್ಲಿ ಸಾರಿದ ಮಾಹಾ ಸಂತರು. 12 ನೇ ಜನವರಿ 1862 ರಂದು ಕಲ್ಕತ್ತದಲ್ಲಿ ತಂದೆ ವಿಶ್ವನಾಥ ದತ್ತ ಮತ್ತು ತಾಯಿ ಭುವನೇಶ್ವರಿ ದೇವಿ ದಂಪತಿಗಳ ಮಗನಾಗಿ ಜನಿಸಿದ ಸ್ವಾಮಿ ವಿವೇಕಾನಂದರು ಇಡೀ ವಿಶ್ವವೇ ಮೆಚ್ಚಿ ಕೊಳ್ಳುವಂತಹ ಸಮಾಜಿಕ, ಧಾರ್ಮಿಕ ಕಾರ್ಯಗಳನ್ನು ಮಾಡಿ ಅಜರಾಮರರಾಗಿದ್ದಾರೆ. ಹಿನ್ನೆಲೆಯಲ್ಲಿ ಅವರ ಕುರಿತು ಸಂಕ್ಷಿಪ್ತವಾಗಿ ತಿಳಿಸುವ ಪ್ರಯತ್ನ ಮಾಡಲಾಗಿದೆ. ದೇಶವನ್ನು ಮುನ್ನಡೆಸಲು ಸಶಕ್ತವಾದ ಯುವಪಡೆಯನ್ನು ನಿರ್ಮಿಸುವುದೇ ನನ್ನ ಗುರಿ ಎನ್ನುತ್ತಿದ್ದವರು ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು. ಯುವಕರಿಗೆ ಮಾನಸಿಕ, ದೈಹಿಕ, ಅಧ್ಯಾತ್ಮಿಕ, ನೈತಿಕ, ಸಾಮಾಜಿಕವಾಗಿ ಎಂದೂ ಶಕ್ತಿ ಕಳೆದುಕೊಳ್ಳಬಾರದು ಎಂದು ಕರೆ ನೀಡಿದ್ದ ಅವರು ಭಾರತೀಯ ಸಂಸ್ಕೃತಿಯ ಉಳಿಸಿ, ಬೆಳಸಲು ಯುವಕರಲ್ಲಿ ನವೋತ್ಸಾಹವನ್ನು ಕೆರಳಿಸಿ, ಅವರಲ್ಲಿ ನಮ್ಮ ಸಂಸ್ಕೃತಿಯ ಬಗ್ಗೆ ಅರಿವನ್ನು ಮೂಡಿಸಿ ಸ್ವತಂತ್ರ ನವ ಭಾರತ ನಿರ್ಮಾಣಕ್ಕೆ ಬುನಾದಿಯನ್ನು ಹಾಕಿದವರು.ಹಾಗಾಗಿ ಸ್ವಾಮಿ ವಿವೇಕಾನಂದರ ಸಂದೇಶಗಳು ಪ್ರಸ್ತುತ ಮನುಕುಲದ ಒಳಿತನ್ನು ಬಯಸುತ್ತವೆ. ಇಂದಿನ ಪೀಳಿಗೆಗೆ ವಿವೇಕಾನಂದರ ಬದುಕಿನ ಆದರ್ಶಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕಾಗಿದೆ ಅಲ್ಲವೇ?ವಿವೇಕಾನಂದರು ತಿಳಿಸಿದಂತೆ, ಈ ಕ್ಷಣಭಂಗುರವಾದ ಪ್ರಪಂಚದಲ್ಲಿ ಒಂದೆರಡು ದಿನ ಜಾಸ್ತಿ ಬದುಕಿದರೆ ತಾನೆ ಏನು? ತುಕ್ಕು ಹಿಡಿದು ಬದುಕುವುದಕ್ಕಿಂತ ಇತರರಿಗೆ ಕೈಲಾದಷ್ಟು ಸಹಾಯ ಮಾಡುತ್ತಾ ಸವೆದು ಸಾಯುವುದು ಮೇಲು ಎಂದು ತಿಳಿದು ಬದುಕುವುದು ಒಳ್ಳೆಯದು ಎಂದು ತಿಳಿದು ನಡೆದವರು ಹಾಗೆ
ಸ್ವಾಮಿ ವಿವೇಕಾನಂದರು ತಾವಷ್ಟೇ ದೇಶಪ್ರೇಮಿಗಳಾಗಿರಲಿಲ್ಲ. ಅವರು ತಮ್ಮ ವೀರವಾಣಿಯಿಂದ ಯುವಕರನ್ನು ಬಡಿದೆಬ್ಬಿಸಿದ್ದರು ಮತ್ತೆ ಅವರಲ್ಲಿ ಸ್ಫೂರ್ತಿಯ ಸೆಲೆ ತುಂಬಿದ್ದರು ಎನ್ನುವುದು ಯಾರು ಮರಿಯಬೇಡಿ,ಇದಲ್ಲದೆ ನಮಗಿಂದು ದೇಶಕ್ಕಾಗಿ ತಮ್ಮ ಜೀವನವನ್ನೇ ಅರ್ಪಿಸುವಂತಹ ಕೆಲವು ಮಂದಿ ಯುವಕರು ಬೇಕಿದ್ದಾರೆ ಎನ್ನುವ ಸ್ವಾಮೀಜಿಯವರ ಮಾತುಗಳಲ್ಲಿ ಯುವಶಕ್ತಿಯ ಬಗ್ಗೆ ಎಷ್ಟೊಂದು ಭರವಸೆಯಿತ್ತು ಎನ್ನುವುದು ಎದ್ದು ಕಾಣುತ್ತದೆ ಅಲ್ಲವೆ. ಆದರೆ ಇಂದಿನ ಈ ಸಮಾಜದ ಯುವಕರಲ್ಲಿ ದೇಶಭಕ್ತಿ ಅಭಿಮಾನದ ವಿಚಾರಗಳನ್ನು ಕಾಣುವುದು ಬಹಳ ವಿರಳವಾಗಿದೆ ಅಲ್ಲವೇ ದೇಶಾಭಿಮಾನಿಗಳೆ. ವಿವೇಕಾನಂದರ ಪ್ರಸ್ತುತ ತತ್ವಗಳು: ಒಂದು ಆದರ್ಶ ಅಥವಾ ಒಳ್ಳೆಯ ವಿಚಾರ ಪ್ರಸ್ತುತವಾಗಬೇಕಾದರೆ ಅದು ಸರ್ವಕಾಲದಲ್ಲೂ ಸತ್ಯವಾಗಿಯೇ ಇರಬೇಕು ಅಂದಾಗ ಮಾತ್ರ ಅನುಷ್ಠಾನ ಮಾಡಲು ಯೋಗ್ಯವಾಗುತ್ತದೆ ಹಾಗೆ ಅನುಷ್ಠಾನದಿಂದ ಉತ್ತಮ ವಾತಾವರಣ ನಿರ್ಮಾಣ ಮಾಡುವಂತಿರಬೇಕು. ಯಾವ ಯಾವ ಆದರ್ಶಗಳು ಇಂತಹ ಸ್ವರೂಪವನ್ನು ಹೊಂದಿವೆಯೋ ಅವನ್ನೇ `ಸತ್ಯ’ ಅಥವಾ ‘ತತ್ತ್ವ’ ಎನ್ನುತ್ತಾರೆ ನಮ್ಮ ವಿಚಾರವಾದಿಗಳು.ಹಾಗಾಗಿ ಸತ್ಯ ಎನ್ನುವುದು ತ್ಯಾಗಮೂರ್ತಿಗಳಿಗೆ ಅನುಭವಗೋಚರವಾದದ್ದು. ಅನುಭವದಿಂದ ತ್ಯಾಗಮೂರ್ತಿಸದೃಶ ವ್ಯಕ್ತಿಗಳು ಆಡಿದ ಮಾತು ಕೂಡ ಸತ್ಯವೇ. ಅದನ್ನೇ
ಶರಣರವಾಣಿ, ವಿವೇಕಾನಂದರವಾಣಿ ಎಂದೆಲ್ಲಾ ಕರೆಯುತ್ತೇವೆ. ತ್ಯಾಗಮೂರ್ತಿವಾಣಿ ಸತ್ಯದ ಕುರಿತಾಗಿರುವುದರಿಂದ ಅದು ಎಂದೆಂದಿಗೂ ಪ್ರಸ್ತುತ. ಅದು ಲೋಕದ ಜನರ ಶ್ರೇಯಸ್ಸಿಗಾಗಿ, ಅಪಾರ ಕರುಣೆಯ ಮೂಲಕ ಅವರಿಂದ ಹೊರಬಂದ ಮಾತುಗಳು ಹಾಗಾಗಿ ಅವರ ಮೌಲ್ಯದಾರಿತ ವೈಚಾರಿಕ ವಿಚಾರಗಳು ಎದೆಂದಿಗೂ ಪ್ರಸ್ತುತ.ಆದ್ದರಿಂದ ಸ್ವಾಮಿ ವಿವೇಕಾನಂದರ ಕೆಲವು ಸಂದೇಶಗಳು ಯಾವುದಕ್ಕೂ ಅಂಜದಿರು ಅಧ್ಭುತ ಕಾರ್ಯವನ್ನೆಸಗುವೆ.ಭೀತಿಯೇ ಪ್ರಪಂಚದ ಎಲ್ಲ ದುಃಖಗಳಿಗೂ ಮಹತ್ಕಾರಣ. ನಮ್ಮ ದುರವಸ್ಥೆಗಳಿಗೆಲ್ಲಾ ಭೀತಿಯೇ ಕಾರಣ. ನಿರ್ಭೀತಿಯೇ ಕ್ಷಣಮಾತ್ರದಲ್ಲಿ ಸ್ವರ್ಗವನ್ನು ಸಾಧಿಸಿಕೊಡಬಲ್ಲದು. ಎದ್ದು ನಿಲ್ಲು, ಜಾಗೃತನಾಗು ಮತ್ತು ಗುರಿ ಪ್ರಾಪ್ತವಾಗುವವರೆಗೂ ನಿಲ್ಲದಿರು ಎನ್ನುವ ಅವರ ವಿಚಾರಗಳನ್ನು ಇಂದಿಗೂ ಹಾಗೂ ಎಂದೆಂದಿಗೂ ಪ್ರಸ್ತುತ ಎನ್ನುವುದು ನಾವ್ಯಾರು ಮರೆಯಬಾರದು.ಹಾಗೆ ಪ್ರಪಂಚವೆ ನಮಗೆ ವ್ಯಾಯಾಮ ಶಾಲೆ ಹೃದಯ ಮತ್ತು ಮೆದುಳಿನ ನಡುವಿನ ಸಂಘರ್ಷದಲ್ಲಿ ಹೃದಯ ಅನುಸರಿಸುತ್ತದೆ ಒಮ್ಮೆ ನಿಮ್ಮೊಂದಿಗೆ ನೀವು ಮಾತನಾಡಿ ಇಲ್ಲದಿದ್ದರೆ ನೀವು ಜಗತ್ತಿನಲ್ಲಿ ಬುದ್ದಿವಂತ ವ್ಯಕ್ತಿಯನ್ನು ಭೇಟಿಯಾಗುವುದನ್ನು ಕಳೆದುಕೊಳ್ಳಬಹುದು
ದೈಹಿಕವಾಗಿ ಬೌದ್ದಿಕವಾಗಿ ಮತ್ತು ಆಧ್ಯಾತ್ಮಕವಾಗಿ ನಿಮ್ಮನ್ನು ದುರ್ಬಲಗೊಳಿಸುವ ಯಾವುದಾದರೂ ವಿಷವು ನಿಮ್ಮನ್ನ ತಿರಸ್ಕರಿಸುತ್ತದೆ.ಮೊದಲು ಸೇವಕರಾಗಿ, ನಿಸ್ವಾರ್ಥರಾಗಿರಿ ಯಶಸ್ಸು ನಿಮ್ಮದಾಗುತ್ತದೆ ಎಂದು ವಿವೇಕಾನಂದರು ಘಂಟಾಘೋಷವಾಗಿ ಅವರ ತತ್ತ್ವಗಳು ನಾಡಿನ ಜನತೆಯ ಮನದಲ್ಲಿ ಬಿತ್ತಿದ್ದಾರೆ.
ಸ್ವಾಮಿ ವಿವೇಕಾನಂದರ ಪ್ರಸ್ತುತತೆ ಸಂದೇಶಗಳು: ಸ್ವಾಮಿ ವಿವೇಕಾನಂದರು ಮಹಾನ ಮೇಧಾವಿ ತ್ಯಾಗಿ, ಅವರು ಸಪ್ತರ್ಷಿಗಳಲ್ಲೊಬ್ಬರು. ಆದ್ದರಿಂದ ಅವರ ಸಂದೇಶಗಳೆಲ್ಲವೂ ಪ್ರಸ್ತುತವೇ. ಅವರದು ಋಷಿದೃಷ್ಟಿ. ಅವರು ಸಮಸ್ಯೆಯ ಮೂಲಕ್ಕೆ ಹೋಗಿ ಪರಿಹಾರವನ್ನು ಕಂಡು ಹಿಡಿದವರು. ನಮ್ಮ ಸಮಸ್ಯೆಗಳೆಲ್ಲ ಗೊತ್ತಿದ್ದು, ನಮ್ಮ ಮೇಲೆ ಅನುಕಂಪೆತೆಯಿರುವ, ಪರಿಹಾರ ಕೊಡುವ ಸಾಮರ್ಥ್ಯವಿರುವ ವ್ಯಕ್ತಿಯಿಂದ ಮಾತ್ರ ಮಾರ್ಗದರ್ಶನ ಸಾಧ್ಯ. ಸ್ವಾಮೀಜಿಯವರು ಅಂತಹ ಒಬ್ಬ ಮಹಾನ
ಕಾರ್ಯ ನಿರ್ವಹಿಸಿದ ಶಕ್ತಿ, ವ್ಯಕ್ತಿ ಎನ್ನುವುದು ಅವರ ಜೀವನದ ಅಧ್ಯಯನದಿಂದ ತಿಳಿಯುತ್ತದೆ ಬಂಧುಗಳೆ.
ಆದ್ದರಿಂದ ವಿಶ್ವಮಾನವ ಸ್ವಾಮಿ ವಿವೇಕಾನಂದರು ಹೇಳುತ್ತಾರೆ.ಒಳ್ಳೆಯ ಉದ್ದೇಶ, ಸತ್ಯಸಂಧತೆ ಮತ್ತು ಅನಂತ ಪ್ರೇಮ ಇವು ಜಗತ್ತನ್ನೇ ಗೆಲ್ಲಬಲ್ಲವು. ಈ ಸದ್ಗುಣಗಳನ್ನು ಹೊಂದಿದ ಒಬ್ಬನೇ ವ್ಯಕ್ತಿ ಕೋಟ್ಯಂತರ ದುಷ್ಟರ, ದುರುಳರ ಕಪಟ ಜಾಲವನ್ನು ನಾಶಮಾಡಬಹುದು ಎನ್ನುತ್ತಾರೆ. ಅದಕ್ಕಾಗಿ ಬನ್ನಿ ಯುವಕರೇ, ಹೊಸ ನಾಡನ್ನು ಕಟ್ಟೋಣ, ತ್ಯಾಗ-ಸೇವೆಗಳೇ ನಮ್ಮ ಉಸಿರಾಗಲಿ, ಸದೃಢರಾಗಿ, ಖಿನ್ನರಾಗದಿರಿ, ನಕಾರಾತ್ಮಕ ಚಿಂತನೆಗಳನ್ನು ದೂರ ಬಿಸಾಡಿ, ಇದೇ ನಮ್ಮ ನವಯುಗದ ಚಿಹ್ನೆಯಾಗಿರಲಿ, ಭವ್ಯ ಭಾರತವನ್ನು ಕಟ್ಟೋಣ.ಸ್ವಾಮಿ ವಿವೇಕಾನಂದರ ಈ ಅಮೃತವಾಣಿಯನ್ನು ಅರ್ಥ ಮಾಡಿಕೊಂಡಲ್ಲಿ ಖಂಡಿತಾ ನಮ್ಮ ಯುವಶಕ್ತಿ ಎದ್ದು ನಿಂತು ಗುರಿ ಮುಟ್ಟುವ ತನಕ ನಿಲ್ಲದೆ ಇಡೀ ಜಗತ್ತನ್ನೇ ಗೆಲ್ಲುವಂತಹ ಶಕ್ತಿ ನಮಗೆ ದೊರೆಯುತ್ತದೆ. ಒಳ್ಳೆಯ ಶೀಲವಂತರಾದ, ಬುದ್ಧಿವಂತರಾದ, ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡುವಂತಹ, ವಿಧೇಯರಾಗಿರುವ, ನಮ್ಮ ಭಾವನೆಗಳನ್ನು ಕಾರ್ಯರೂಪಕ್ಕೆ ತರಲು ತಮ್ಮ ಪ್ರಾಣವನ್ನೇ ಅರ್ಪಿಸಬಲ್ಲ ಯುವಕರ ಮೇಲೆ ನಮ್ಮ ಭವಿಷ್ಯದ ಹಾರೈಕೆಯೆಲ್ಲಾ ನಿಂತಿದೆ. ಅದರಿಂದ ದೇಶಕ್ಕೂ ಅವರಿಗೂ ಕಲ್ಯಾಣವಾಗುವುತ್ತದೆ ಎನ್ನುವುದು ಅವರ ವಿಚಾರದಾರೆ.ಹಾಗೆ ಇಂದಿನ ಯುವಜನತೆ ಇಂತಹ ವಿದ್ಯುತ್‌ವಾಣಿಯಿಂದ ತಮ್ಮ ತಮ್ಮ ತಾಮಸಿಕ ಮನಸ್ಥಿತಿಯನ್ನು ಕೊಡವಿ ಎದ್ದು ಸ್ವಾಮಿ ವಿವೇಕಾನಂದರ ಸಿಂಹವಾಣಿಯ ಘರ್ಜನೆಯನ್ನು ಆಲಿಸಿ ತನ್ಮೂಲಕ ಪರಿಪೂರ್ಣ ಮಾನವರಾಗಿ ತನ್ಮೂಲಕ ಮೌಲ್ಯಾಧಾರಿತ ಜೀವನವನ್ನು ನಡೆಸುವಂತಹ ಕೆಚ್ಚೆದೆಯುಳ್ಳವರಾಗಬೇಕೆನ್ನುವ ಮೂಲಕ ನಾಡಿನ ಪ್ರಜ್ಞಾವಂತ ಮಾಹಾಜನತೆಗೆ ಕರೆ ನೀಡಿದ್ದಾರೆ.ಹಾಗಾಗಿ ಅವರ ಉಪದೇಶಗಳು ಸಾರ್ವಕಾಲಿಕ ಸತ್ಯದಂತೆ ಇಂದಿಗೂ, ಎಂದೆಂದಿಗೂ ಪ್ರಸ್ತುತ ಮತ್ತು ಅವರ ಸಂದೇಶದ ಪ್ರಸ್ತುತತೆಯನ್ನು ಅವರ ಮಾತಿನಲ್ಲೇ ಕೇಳಿದರೆ ಇನ್ನೂ ಸ್ವಾರಸ್ಯ. ಅವರು ಹೀಗೆ ಹೇಳಿದ್ದಾರೆ, ನಾನು ಮುಂದಿನ 1500 ವರ್ಷಗಳಿಗೆ ಬೇಕಾಗುವಷ್ಟು ಆದರ್ಶ ವಿಚಾರ ಸಂದೇಶಗಳನ್ನು ಈ ನಾಡಿಗೆ ಕೊಟ್ಟಿದ್ದೇನೆ ಎನ್ನುವ ಅವರ ಈ ಇಂಥಹ ಮಾತುಗಳನ್ನು ಆಡಬೇಕಾದರೆ ಎಂತಹ ಅದಮ್ಯ ವಿಶ್ವಾಸ ಅವರಲ್ಲಿ ಇರಬೇಕು! ನೀವೇ ಹೇಳಿ ಸಹೋದರರೇ ಹಿಗಾಗಿ ಇವುಗಳೇ ವಿವೇಕಾನಂದರ ಅದ್ಬುತವಾಣಿ ಎನ್ನಬಹುದು ತಾನೆ ಸ್ನೇಹಿತರೇ. ಆದಕಾರಣ ಈ ಲೇಖನದ ಮೂಲ ಸಂದೇಶ ಅಥವಾ ಉದ್ದೇಶ ಇಂದಿನ ಯುವಜನತೆ ಆಧುನಿಕತೆಯ ಅಲೆಯಲ್ಲಿ ಸಿಲುಕಿ ದೈವಿಕತೆ ಹಾಗೂ ಸಂಸ್ಕೃತಿ ಮತ್ತು ಪಾರಂಪರ‍್ಯವನ್ನು ಸಂಪೂರ್ಣವಾಗಿ ಮರೆತು ಭೋಗದ ವಿಷಸುಳಿಯಲ್ಲಿ ಸಿಲುಕಿ ನರಳುವ ಬದಲು ಸ್ವಾಮಿ ವಿವೇಕಾನಂದರು ತಿಳಿಸಿದಂತೆ ನಮ್ಮ ದೇಶಕ್ಕೆ ಇಂದು ಬೇಕಾಗಿರುವುದು ಕಬ್ಬಿಣದಂತಹ ಮಾಂಸ ಖಂಡಗಳು, ಉಕ್ಕಿನಂತಹ ನರಗಳು, ಯಾವುದನ್ನೂ ಲೆಕ್ಕಿಸದೆ ವಿಶ್ವದ ರಹಸ್ಯತಮ ಸತ್ಯಗಳನ್ನು ಭೇದಿಸಿ ಸಾಧ್ಯವಾದರೆ ಕಡಲಿನ ಆಳಕ್ಕಾದರೂ ಹೋಗಿ ಮೃತ್ಯುವಿನೊಂದಿಗೆ ಹೋರಾಡಿ ಗುರಿಯನ್ನು ಸಾಧಿಸಬಲ್ಲ ಅದಮ್ಯ ಪ್ರಚಂಡ ಇಚ್ಛಾಶಕ್ತಿಯುಳ್ಳ ಯುವ ಜನತೆ ಮುಂದೆ ಬರಲಿ ಎಂಬ ಬಯಕೆ ಅವರದಾಗಿತ್ತು. ಈ ತೆರನಾದ ಸದೃಢ ಮನಸ್ಸಿನ ಯುವಜನತೆ ಸ್ವಾಮಿ ವಿವೇಕಾನಂದರ ಭಾರತವನ್ನು ನಿರ್ಮಿಸಲು ಮುಂದಾಗಲಿ ಎನ್ನುವುದೇ ಕೋಟ್ಯಾಂತರ ಜನರ ಆಶೆ. ಇದೆಲ್ಲದಕ್ಕಿಂತ ಮಿಗಿಲಾಗಿ ಕೇವಲ ವಿಶ್ವವಿದ್ಯಾನಿಲಯಗಳ ಮಾನ್ಯತಾ ಪತ್ರಗಳನ್ನು ಪಡೆದು ತಾನು ವಿದ್ಯಾವಂತ ಎಂದೆನಿಸಿಕೊಳ್ಳುವ ಬದಲು ಸಮಾಜದಲ್ಲಿ ಹೃದಯವಂತರಾಗಿ ಬಾಳುವುದು ಮೇಲು. ಈ ಜೀವನದಲ್ಲಿ ಏನನ್ನಾದರೂ ಸಾಧಿಸಿ ಬಾಳಲು ಪ್ರಯತ್ನಿಸಬೇಕು. ಅಂತ್ಯದಲ್ಲಿ ಸ್ವಾಮಿ ವಿವೇಕಾನಂದರ ಈ ವಾಣಿ ನಮ್ಮೆಲ್ಲರ ಹೃದಯದಲ್ಲಿ ಚಿರಸ್ಥಾಯಿಯಾಗಿ ಉಳಿಯಲಿ ಎಂಬುದೇ ನಮ್ಮ ಅಭಿಲಾಷೆ. ರಾಷ್ಟ್ರೀಯ ದಿನ : ವೈಯಕ್ತಿಕ ಮುಕ್ತಿಯ ಆಸೆಯನ್ನು ಬಿಟ್ಟು ಎಲ್ಲರ ಮುಕ್ತಿಗಾಗಿ ಶ್ರಮಿಸುವವನೇ ಅವರೇ ನಿಜವಾದ ಮನುಷ್ಯ, ಮಾನವೀಯತೆಯ ಹರಿಕಾರ, ದೂರದೃಷ್ಟಿಯ ಪ್ರಬುದ್ಧ ವ್ಯಕ್ತಿ ಎಂದು ವಿವೇಕಾನಂದರು ನಂಬಿದ್ದರು. ಯವಕರನ್ನು ಬಡಿದೆಬ್ಬಿಸಿ ಸದಾ ಜಾಗೃತರಾಗಿ ಮಾಡಿದ ಇವರ ನಿಸ್ವಾರ್ಥ ಸೇವೆ ಕಾರ್ಯ ಬಹಳ ದೂಡ್ಡದು.ಆದಕಾರಣ ಯವಕರನ್ನು ಸರಿ ದಾರಿ ತರವಲ್ಲಿ ಪ್ರೇರೇಪಣೆ ನೀಡಿದ ಈ ಮಹಾತ್ಮ ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ 12 ರಂದು ರಾಷ್ಟ್ರೀಯ “ಯುವದಿನ”ವೆಂದು ಆಚರಿಸಲಾಗುತ್ತದೆ ಬಂಧುಗಳೆ.ವಿವೇಕಾನಂದ ಎಂಬ ನಾಮಧೇಯದಿಂದ ಜಗದ್ವಿಖ್ಯಾತರಾದ ಈ ಸಂತ ಎಂದು ಅವರಿಗಾಗಿ ಏನೇನು ಮಾಡಿಕೊಳ್ಳದೆ ಸಮಾಜಕ್ಕಾಗಿ ಇಡೀ ಜೀವನ ಮುಡುಪಾಗಿಟ್ಟು ಸೇವೆ ಮಾಡಿದ ಸೇವಕ. 1902 ಜುಲೈ 4 ರಂದು ದೈಹಿಕ ಶರೀರವನ್ನು ತೊರೆದ ಸ್ವಾಮಿ ವಿವೇಕಾನಂದರು ಅಂದು ಹಚ್ಚಿದ ಸತ್ಯತ್ವದ ದೀವಿಗೆಯು ಇಂದೂ ಕೂಡ ಜಗತ್ತಿಗೆ ಬೆಳಕು ಚೆಲ್ಲುತ್ತಿದೆ ಮತ್ತು ನೀಡುತ್ತಿದೆ. ಅವರ ಗುರು ಶ್ರೀ ರಾಮಕೃಷ್ಣರ ಸಂದೇಶಗಳಿಗೆ ದನಿಯಾದ ವಿವೇಕಾನಂದರು ಶತಮಾನದ ನಂತರವೂ ತರುಣರಿಗೆ ವಿಶೇಷವಾಗಿ ಇಡೀ ವಿಶ್ವದ ಜನರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ. ಕೊನೆಯ ಮಾತು: ಸ್ವಾಮಿ ವಿವೇಕಾನಂದರು ದೇಶದ ಯುವಜನತೆಯ ಮೇಲೆ ಅಪಾರ ವಿಶ್ವಾಸವಿಟ್ಟಿದ್ದರು. ಆದರೆ ಆ ವಿಶ್ವಾಸವೆಲ್ಲಾ ಹುಸಿಯಾದಂತಿದೆ ಇಂದು. ಆದಕಾರಣ ಭಾರತೀಯ ಪ್ರಜ್ಞಾವಂತ ಯುವಜನತೆ ಯುವಕರೇ, ಇನ್ನಾದರೂ ಎಚ್ಚೆತ್ತುಕೊಳ್ಳಿ, ದುಶ್ಚಟಗಳನ್ನು ಬಿಟ್ಟು ಮುಂದೆ ಬನ್ನಿ! ಟೊಂಕಕಟ್ಟಿ ನವ ಭಾರತದ ನಿರ್ಮಾಣದ ಹಾದಿಯಲ್ಲಿ ನೀವೆಲ್ಲರೂ ಸಾಗಬೇಕಾಗಿದೆ. ಈ ದೇಶವೇ ನಮ್ಮ ಕಾಯಕಭೊಮಿಯಾಗಿ ಮಾಡುವ ಮೂಲಕ ಪ್ರತಿಯೊಬ್ಬರೂ ಕಾಯಕ ಜೀವಿಗಳಾಗಿ, ದೇಶ ಸುಭದ್ರ ದಿಕ್ಕಿನಲ್ಲಿ ನಡೆಸುವ ಕಾರ್ಯ ನಿಮ್ಮೆಲ್ಲರಿಂದ ಆಗಬೇಕಾಗಿದೆ. ಅದಕ್ಕಾಗಿ ಈ ದೇಶದ ಅಭ್ಯುದಯಕ್ಕಾಗಿ ನಾವು ಏನು ಬೇಕಾದರೂ ತ್ಯಜಿಸೋಣ! ಭಾರತಾಂಬೆಯನ್ನು ಸದೃಢಗೊಳಿಸೋಣ, ಇದೇ ನಮ್ಮ ಗುರಿ,ಉದ್ದೇಶವಾಗಿರಲಿ. ದೇಶವಿರುವುದು ಯುವಕರ ಶಕ್ತಿಯಿಂದ ಎಂಬುದನ್ನು ಮರೆಯದಿರಿ ಸ್ನೇಹಿತರೇ. ನಮ್ಮ ಉದ್ದೇಶ ಸದುದ್ದೇಶವಾಗಿರಲಿ, ಅದು ಬಲಾಡ್ಯ ಭಾರತದ ನಿರ್ಮಾಣಕ್ಕೆ ಕಾರಣೀಭೂತವಾಗಲಿ. ವಿವೇಕಾನಂದರ ಆಶಯ : ಭಾರತವನ್ನು ಸ್ವಾಮಿ ವಿವೇಕಾನಂದರು ಅಪಾರವಾಗಿ ಪ್ರೀತಿಸುತ್ತಿದ್ದರು. ಅವರ ಧಮನಿ ಧಮನಿಗಳಲ್ಲಿ ಭಾರತ ಮಿಡಿಯುತ್ತಿತ್ತು. ಅವರ ಕನಸು ನನಸುಗಳಲ್ಲೆಲ್ಲಾ ಭಾರತವೇ ತುಂಬಿತ್ತು. ಒಂದರ್ಥದಲ್ಲಿ ಅವರೇ ಭಾರತವಾಗಿ ಬಿಟ್ಟಿದ್ದರು. ಭಾರತಾಂಬೆಯ ಆಧ್ಯಾತ್ಮಿಕತೆ, ಪಾವಿತ್ರ್ಯ, ಜ್ಞಾನ, ಶಕ್ತಿ ಮತ್ತು ಧ್ಯೇಯಗಳ ಶ್ರೇಷ್ಠ ಲಾಂಛನವಾಗಿದ್ದರು. ಆದರಿಂದ ಈಗ ನೀವೇ ಯೋಚನೆ ಮಾಡಿ. ಸ್ವಾಮಿ ವಿವೇಕಾನಂದರ ಶಕ್ತಿಶಾಲಿ ವಿಚಾರಧಾರೆ ಇಂದಿಗೂ ಪ್ರಸ್ತುತವಲ್ಲವೆ? ಅವರ ಆಶಯ ಸಹ ಭವ್ಯ ಭಾರತದ ನಿರ್ಮಾಣವೇ ಆಗಿತ್ತು ಅಲ್ಲವೇ ? ಇನ್ನೂ ಸ್ವಲ್ಪ ಆಲೋಚಿಸಿ ನೋಡಿ. ಅದು ಎಂದೆಂದಿಗೂ ಪ್ರಸ್ತುತ ಎನ್ನಿಸುವುದಿಲ್ಲವೆ.ಸ್ವಾಮಿ ವಿವೇಕಾನಂದರು ಭಾರತಾಂಬೆಯ ಹೃನ್ಮಂದಿರದಲ್ಲಿ ಇಂದಿಗೂ ವಿರಾಜಮಾನರಾಗಿದ್ದಾರೆ. ಹಾಗೆಯೇ ಭಾರತಾಂಬೆಯ ಪ್ರತಿ ಸಂತಾನದಲ್ಲಿಯೂ ಸ್ವಾಮಿ ವಿವೇಕಾನಂದರು ರಾರಾಜಿಸುತ್ತಿದ್ದಾರೆ. ಯುವಜನತೆ ನವಭಾರತ ನಿರ್ಮಾಣದ ಮಹಾನ್ ಕಾರ್ಯದಲ್ಲಿ ಕಟಿಬದ್ಧರಾಗಿ ಟೊಂಕ ಕಟ್ಟಿದಲ್ಲಿ ಮಾತ್ರ ಆ ವೀರ ಸನ್ಯಾಸಿಗೆ ಅದು ನಾವು ಅರ್ಪಿಸುವ ಬಹು ದೊಡ್ಡ ದೇಶಭಕ್ತಿಯ ಪುಷ್ಪಾಂಜಲಿಯಾಗುತ್ತದೆ. ವಿವೇಕಾನಂದರ ಆಡಿದ ಮಾತನ್ನು ತಿಳಿದು ನಮ್ಮ ಆಂತರ್ಯದ ಆ ಶಕ್ತಿಯ ಕಿಡಿಯನ್ನು ಹೆಚ್ಚಿಸುವ ಮೂಲಕ ಭಾರತ ದೇಶವನ್ನು ಜಾಗತಿಕ ಮಟ್ಟದಲ್ಲಿ ವಿಶ್ವಗುರುವಾಗಿ ಮಿನುಗುವಂತೆ ನಾವೆಲ್ಲರೂ ಸೇರಿ ಮುನ್ನಡೆಸೋಣ.
ಲೇಖಕರು : ಶರಣ ಸಂಗಮೇಶ ಎನ್ ಜವಾದಿ. ಬೀದರ ಜಿಲ್ಲೆ. ಸಾಹಿತಿ, ಪತ್ರಕರ್ತ.