ಹೈದ್ರಾಬಾದನತ್ತ ಸಾಗಿದ ‘ರುದ್ರಾಕ್ಷಪುರ ಚಿತ್ರತಂಡ…..
ಬೆಂಗಳೂರ : ಮ್ಯಾಕ್ ವುಡ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಕೊಂಡ್ರಾಸಿ ಉಪೇಂದರ್ ನಿರ್ಮಿಸುತ್ತಿರುವ ಆರ್.ಕೆ.ಗಾಂಧಿ ನಿರ್ದೇಶನದ ಕನ್ನಡ,ತೆಲುಗು, ತಮಿಳು ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ‘ರುದ್ರಾಕ್ಷಪುರ’ ಚಲನಚಿತ್ರದ ಅಂತಿಮ ಹಂತದ ಚಿತ್ರೀಕರಣಕ್ಕಾಗಿ ಚಿತ್ರತಂಡ ಹೈದ್ರಾಬಾದ್ ನತ್ತ ಪ್ರಯಾಣ ಬೆಳಸಿದೆ. ಈಗಾಗಲೇ ಮೂರನೇ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಕೋಲಾರ ,ಚಿಕ್ಕಬಳ್ಳಾಪುರ ಮತ್ತು ಚಿತ್ರದುರ್ಗದ ಹಲವು ಸುಂದರ ತಾಣಗಳಲ್ಲಿ ಚಿತ್ರೀಕರಣ ಮುಗಿಸಿದ್ದು, ಅಂತಿಮ ಹಂತದ ಚಿತ್ರೀಕರಣಕ್ಕೆ ಹೈದ್ರಾಬಾದ್‌ನ ರಾಮೋಜಿರಾವ್ ಫಿಲಂ ಸಿಟಿಗೆ ತೆರಳಿದೆ. ಬೆಂಗಳೂರಿನಿಂದ ಹೈದರಾಬಾದ್ ಚಲನಚಿತ್ರವೊಂದರ ಆಡಿಷನ್ ಗಾಗಿ ತೆರಳುವ ಮೂರು ಜನ ಹುಡುಗಿಯರು ಹಾಗೂ ಮೂರು ಜನ ಹುಡುಗರಿಗೆ ಮಾರ್ಗಮಧ್ಯದಲ್ಲಿರುವ ಅನಂತಪುರ ಸಮೀಪದ ರುದ್ರಾಕ್ಷಪುರ ಕಾಡಿನಲ್ಲಿ ಆಕಸ್ಮಿಕವಾಗಿ ನರಹಂತಕರ ಕೈಗೆ ಸಿಕ್ಕಿಹಾಕಿಕೊಳ್ಳುತ್ತ್ತಾರೆ. ಅವರಿಂದ ಆರು ಜನರೂ ಹೇಗೆ ಪಾರಾಗುತ್ತಾರೆ ಎಂಬ ಕುತೂಹಲ ಭರಿತ ಸಾಹಸಮಯ ಕಥಾವಸ್ತು ಚಿತ್ರದಲ್ಲಿದೆ. ತಾರಾಗಣದಲ್ಲಿ ಮಣಿಸಾಯಿತೇಜ, ಪವನ್ ವರ್ಮ, ರಾಜೇಶ್ ರೆಡ್ಡಿ, ವೈಢೂರ್ಯ, ರೇಖ, ಸುನೀತ, ಅಕ್ಷರನಿಹ, ಆನಂದ್,ಸಂತೋಷ್, ನಾಗಮಹೇಶ್, ವೀರಬಾಬು ,ಸುರೇಶ್ ಕೊಂಡೇಟಿ, ಕೃಷ್ಣ, ತರುಣ್, ಪವನ್‌ಕುಮಾರ್, ರಾಜೇಂದ್ರ, ಜೀವ, ರವಿಕುಮಾರ್, ಪದ್ಮಜಯಂತಿ, ಮೊದಲಾದವರು ಅಭಿನಯಿಸುತ್ತಿದ್ದಾರೆ. ಗಂಟಾಡಿ ಕೃಷ್ಣ ಮತ್ತು ಜಯಸೂರ್ಯ ಸಾಹಿತ್ಯ ಮತ್ತು ಸಂಗೀತವಿದೆ, ನಾಗೇಂದ್ರಕುಮಾರ ರೇಲಂಗಿ ಛಾಯಾಗ್ರಹಣ, ಸ್ಟಾರ್ ಮಲ್ಲಿ, ಬಾಜಿರವರ ಸಾಹಸ, ರಾಜು ದಾಸರಿ ಸ್ಥಿರಚಿತ್ರಣ, ಮಲ್ಲಿ ಸಂಕಲನ, ವೀರಬಾಬು ಪತ್ರಿಕಾ ಸಂಪರ್ಕ, ಡಾ.ಪ್ರಭು ಗಂಜಿಹಾಳ, ಡಾ.ವೀರೇಶ್ ಹಂಡಗಿ ಪ್ರಚಾರಕಲೆ, ಕಲಾ ನಿರ್ದೇಶನ ಕರೀವರ್, ಪ್ರಸಾಧನ ಮೇಕಪ್ ಸಿದ್ದು, ನೃತ್ಯ ಅಣ್ಣಾರಾವ್ ,ಹಲವಾರು ಚಿತ್ರಗಳನ್ನು ನಿರ್ದೇಶಿಸಿರುವ ಯುವ ಉತ್ಸಾಹಿ ನಿರ್ದೇಶಕ ಆರ್.ಕೆ.ಗಾಂಧಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಈ ಚಿತ್ರವನ್ನು ಫೆಬ್ರವರಿ ತಿಂಗಳಲ್ಲಿ ತೆರೆಗೆ ತರುವ ಪ್ರಯತ್ನ ನಡೆದಿದೆ ಎಂದು ನಿರ್ದೇಶಕ ಆರ್.ಕೆ.ಗಾಂಧಿ ತಿಳಿಸಿದ್ದಾರೆ. ವರದಿ: ಡಾ.ಪ್ರಭು ಅ ಗಂಜಿಹಾಳ-೯೪೪೮೭೭೫೩೪೬