ಸಾವಯವ ಕೃಷಿ ವಿಷಮುಕ್ತ ಆಹಾರ : ಗುರುಲಿಂಗಪ್ಪಾ ಮೇಲದೊಡ್ಡಿ.
ಚಿಟಗುಪ್ಪಾ : ಮಾನವ ಆರೋಗ್ಯ ಮತ್ತು ಕೃಷಿ ಚುಟುವಟಿಕೆಗಳ ಮೇಲೆ ಹೆಚ್ಚುತ್ತಿರುವ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಬಳಕೆಯ ಋಣಾತ್ಮಕ ಪರಿಣಾಮಗಳನ್ನು ನಿವಾರಿಸಲು ಪರ್ಯಾಯ ವಿಧಾನವೇ ಸಾವಯವ ಕೃಷಿ ಎಂದು ಪ್ರಗತಿಪರ ರೈತ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಗುರುಲಿಂಗಪ್ಪಾ ಮೇಲದೊಡ್ಡಿಯವರು ಹೇಳಿದರು. ನಗರದ ಸಂತ ಮಡಿವಾಳೇಶ್ವರ ಗವಿಯಲ್ಲಿ ಹಮ್ಮಿಕೊಂಡ ಚಾಂಗಲೇರಾ ವೀರಭದ್ರೇಶ್ವರ ಸಾವಯವ ಕೃಷಿ ಪರಿವಾರದ ತಾಲೂಕು ಘಟಕದ ಉದ್ಘಾಟನಾ ಮತ್ತು ಪ್ರಥಮ ಸಭೆಯಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಹೊಸ ವ್ಯವಸ್ಥೆಯಾಗಿ ಗ್ರಹಿಸಿದರೂ ಸಾವಯವ ಕೃಷಿ ಇದು ವಿಶ್ವದ ಅತ್ಯಂತ ಹಳೆಯ ಕೃಷಿ ಮಾದರಿಯಾಗಿದೆ. ಇದು ಸಂಪೂರ್ಣ, ಸಮಗ್ರ ಕೃಷಿ ಉತ್ಪಾದನಾ ನಿರ್ವಹಣಾ ಪದ್ಧತಿಯಾಗಿದ್ದು, ಸ್ಥಳೀಯವಾಗಿ ಲಭ್ಯವಿರುವ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿ ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಂಡು ಬರುವುದು ಹಾಗೂ ಪರಿಸರ ಸ್ನೇಹಿ ಜೈವಿಕ ವಿಧಾನಗಳಿಂದ ಕೀಟ ಮತ್ತು ರೋಗಗಳ ನಿರ್ವಹಣೆ ಕೈಗೊಂಡು ಉತ್ತಮ ಗುಣಮಟ್ಟದ ವಿಷ ವಸ್ತುಗಳ ಶೇಷಾಂಶವಿಲ್ಲದ ಆಹಾರ ಉತ್ಪಾದನೆ ಕೈಗೊಳ್ಳುವ ಬೇಸಾಯ ಪದ್ಧತಿ ಸಾವಯವ ಕೃಷಿ ವೈಜ್ಞಾನಿಕ ಪದ್ಧತಿ.ಸಾವಯವ ಕೃಷಿ, ವಿಷಮುಕ್ತ ಆಹಾರ ಎನ್ನುವುದು ವೈಜ್ಞಾನಿಕವಾಗಿ ಪ್ರತಿಪಾದನಯಾಗಿದೆ ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ, ರಾಜ್ಯ ಸಾವಯವ ಕೃಷಿ ಪರಿವಾರದ ನಿರ್ದೇಶಕರಾದ ಸತೀಶ ನೆನ್ನೂರ ರವರು ಮಾತನಾಡಿ ಸಾವಯವ ಕೃಷಿಯ ಪ್ರಮುಖ ಉದ್ದೇಶವೆಂದರೆ ಆರೋಗ್ಯಕರ ಜೀವನ ಸಾಗಿಸುವುದು, ಫಲವತ್ತಾದ ಮಣ್ಣಿನಿಂದ, ಅತ್ಯುತ್ತಮ ಸಸ್ಯಗಳನ್ನು ಹೊಂದಿ, ಉತ್ತಮ ಫಸಲು ಪಡೆಯುವುದು. ನಾವು ಸಾವಯವ ಕೃಷಿ ಕುರಿತು ಚೆನ್ನಾಗಿ ಕಾಳಜಿ ವಹಿಸಿದರೆ, ಅದು ನಮಗೆ ಅನಾರೋಗ್ಯ ಆಗದಂತೆ ನೋಡಿಕೊಳ್ಳುತ್ತದೆ ಎಂದು ಹೇಳಿದರು. ಅತಿಥಿಗಳಾಗಿ ಆಗಮಿಸಿದ ಸಿದ್ದಣ್ಣ ಗಡವಂತಿ ಪ್ರಗತಿಪರ ರೈತರು ಮಾತನಾಡಿ ಕಲಬೆರಕೆಯ ಆಹಾರ ತೇಜಿಸಿ, ಶುದ್ಧವಾದ ಆಹಾರ ಪಡೆಯುವ ಉದ್ದೇಶದಿಂದ ಸಾವಯವ ಕೃಷಿಗೆ ಹೆಚ್ಚು ಒತ್ತು ಕೊಡುವ ಕೆಲಸ ಮಾಡಲಾಗುತ್ತಿದೆ.ಇದಕ್ಕೆ ಸರಕಾರದ ವತಿಯಿಂದ ಪ್ರೋತ್ಸಾಹ ಸಹ ನಮಗೆ ದೊರೆಯುತ್ತಿದೆ ಎಂದು ಹೇಳಿದರು. ಪರಿವಾರದ ತಾಲೂಕು ಘಟಕದ ಅಧ್ಯಕ್ಷರಾದ ಹಣಮಂತರಾವ ಪಾಟೀಲರು ಸಭೆಯ ಅಧ್ಯಕ್ಷತೆ ವಹಿಸಿ,ಮಾತನಾಡಿದರು.ಗಣ್ಯರನ್ನು ಸ್ವಾಗತಿಸಿ, ಪರಿವಾರದ ತಾಲೂಕು ಘಟಕದ ಕಾರ್ಯದರ್ಶಿ ಸಂಗಮೇಶ ಎನ್ ಜವಾದಿಯವರು ಪ್ರಸ್ತಾಪಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪರಿವಾರದ ಪ್ರಮುಖರಾದ ರವೀಂದ್ರ ಶಿವಪೂಜಿ,ಶಿವಕುಮಾರ, ಪರಿವಾರದ ತಾಲೂಕು ಘಟಕದ ಉಪಾಧ್ಯಕ್ಷ ಹಣಮಂತ ಹಳ್ಳಿ, ಪ್ರಮುಖರಾದ ದಯಾನಂದ ಕಾಂಬ್ಳೆ, ಪ್ರಭು ಕಾರಕಪಳ್ಳಿ, ಸಚೀನಕುಮಾರ ನಾರಾಯಣಪೇಟ, ರವಿ ಲಿಂಗಣ್ಣಿ,ಸುನಿಲ್ ಹಳ್ಳಿ,ಆನಂದ ಸಾಗರ,ಶಿವಕುಮಾರ ಬಾಂಪಳ್ಳಿ,ಉಮೇಶ ಗೌಳಿ ಸೇರಿದಂತೆ ರೈತ ಮಹಿಳೆಯರು, ರೈತ ಭಾಂದವರು ಉಪಸ್ಥಿತರಿದ್ದರು.
ವರದಿ – ಸಂಗಮೇಶ ಎನ್ ಜವಾದಿ