ರಾಜ್ಯಮಟ್ಟದ ಪ್ರಶಸ್ತಿ ಪಡೆದ ಉತ್ತರಕನ್ನಡದ ಅಮ್ಮ – ಮಗಳು..
ಉತ್ತರ ಕನ್ನಡ ಜಿಲ್ಲೆಯ ಶ್ರೀಮತಿ ಭಾರತಿ ಕುಲಕರ್ಣಿ (ತಾಯಿ) ಹಾಗೂ ಕುಮಾರಿ ಅನುರಾಧ ಕುಲಕರ್ಣಿ (8 ವರ್ಷದ ಮಗಳು) ಪ್ರಶಸ್ತಿಗೆ ಭಾಜನರಾಗಿದ್ದು ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ. ಕರ್ನಾಟಕ ಜನಸ್ಪಂದನಾ ಟ್ರಸ್ಟ್ ವತಿಯಿಂದ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಕಲೆ, ಶಿಕ್ಷಣ, ಸಮಾಜಸೇವೆ ಕ್ಷೇತ್ರದಲ್ಲಿ ಶ್ರೀಮತಿ ಭಾರತಿ ಕುಲಕರ್ಣಿ ಪ್ರಶಸ್ತಿ ಪಡೆದುಕೊಂಡರೆ ಮಗಳು ಅನುರಾಧ ಕುಲಕರ್ಣಿ(8 ವರ್ಷ) ಕಲಾ ಕ್ಷೇತ್ರದಲ್ಲಿ ಸಾಧನೆಗೈದು ರಾಜ್ಯಮಟ್ಟದ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಕರ್ನಾಟಕ ಜನಸ್ಪಂದನಾ ಟ್ರಸ್ಟ್ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ 2022 ಮತ್ತು 5ನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮಾರ್ಚ್ 6ರಂದು ಭಾನುವಾರ ಬೆಂಗಳೂರಿನ ಬಾಗಲಗುಂಟೆಯ ಹೆಸರುಗಟ್ಟ ಮುಖ್ಯರಸ್ತೆಯಲ್ಲಿರುವ ಶ್ರೀ ಸಾಯಿ ಕಲ್ಯಾಣ ಮಂಟಪದಲ್ಲಿ ಜನಸ್ಪಂದನಾ ಕಾಯಕ ರತ್ನ ಪ್ರಶಸ್ತಿ, ಜನಸ್ಪಂದನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಜನಸ್ಪಂದನ ಕಲಾಸಿರಿ ರತ್ನ ಪ್ರಶಸ್ತಿ ಪುರಸ್ಕೃತರಿಗೆ ಗೌರವಿಸಿ ಸನ್ಮಾನಿಸಲಾಯಿತು. ಶ್ರೀಮತಿ ಭಾರತಿ ಕುಲಕರ್ಣಿಯವರಿಗೆ ಬಾಲ್ಯದಿಂದಲೂ ಕಲೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಎಲ್ಲಿಲ್ಲದ ಆಸಕ್ತಿ. ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದ ಇವರು ಚಿತ್ರಕಲೆ, ಕಸೂತಿ ಹೊಲಿಗೆ, ಸಂಗೀತ, ನೃತ್ಯ, ಭರತನಾಟ್ಯ, ಕರಕುಶಲತೆ, ನಟನೆ ಇನ್ನು ಮುಂತಾದ ಕಲೆಗಳಲ್ಲಿ ನೈಪುಣ್ಯತೆ ಪಡೆದು ತಮ್ಮನ್ನು ತಾವು ತೊಡಗಿಸಿಕೊಂಡವರು. ಆದರ್ಶ ಶಿಕ್ಷಕಿ ಆಗಬೇಕೆಂದುಕೊಂಡ ಇವರಿಗೆ ಬಡತನ ದೊಡ್ಡ ಮುಳುವಾಗಿ ವಿದ್ಯಾಭ್ಯಾಸವನ್ನು ಮೊಟಕುಗೊಳಿಸುವಂತೆ ಮಾಡಿತ್ತು. ಆದರೂ ಛಲ ಬಿಡದ ಭಾರತೀಯವರು ಲಘು ತರಬೇತಿ ಪಡೆದು ಉತ್ತರ ಕರ್ನಾಟಕ ಭಾಗದಲ್ಲಿ ತಮ್ಮ ಶಿಕ್ಷಕ ವೃತ್ತಿ ಪ್ರಾರಂಭಿಸಿದರು. ಶಿಕ್ಷಣ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾ ಬಾಹ್ಯ ಪರೀಕ್ಷೆಗಳನ್ನು ಬರೆದು ಹೆಚ್ಚಿನ ವಿದ್ಯಾಭ್ಯಾಸಗಳನ್ನು ಮುಗಿಸಿಕೊಂಡರು. ಸತತ 18ವರ್ಷಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸುವುದರ ಜೊತೆಜೊತೆಗೆ ಕಲಾಕ್ಷೇತ್ರಗಳಲ್ಲಿ ಸಾಧನೆಯನ್ನು ತೋರುತ್ತಾ ಸಹಸ್ರಾರು ಮಕ್ಕಳಿಗೆ ಗುರುವಾಗಿ ಕಲೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದರು. ಉತ್ತರ ಕರ್ನಾಟಕ ಭಾಗಗಳಲ್ಲಿ ಅಷ್ಟೇ ಅಲ್ಲದೆ ತಮ್ಮ ಹುಟ್ಟೂರಾದ ಉತ್ತರ ಕನ್ನಡ ಜಿಲ್ಲೆ ಗಳಲ್ಲೂ ಸಹ ಕಲೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಗೈದವರಾಗಿದ್ದಾರೆ. ಎಷ್ಟೇ ಬಡತನವಿದ್ದರೂ ಪರೋಪಕಾರದ ಗುಣ ಹೊತ್ತವರು ಇವರು. ಹಲವಾರು ಮಕ್ಕಳಿಗೆ ಉಚಿತವಾಗಿ ಶೈಕ್ಷಣಿಕ ಹಾಗೂ ಕಲಾಕ್ಷೇತ್ರದಲ್ಲಿ ತರಬೇತಿ ನೀಡಿ ಸಮಾಜಸೇವೆಯಲ್ಲಿ ಸಹ ತೊಡಗಿಸಿಕೊಂಡವರು. ತೆರೆಮರೆಯಲ್ಲಿದ್ದ ಇವರ ಸಾಧನೆಯನ್ನು ಗುರುತಿಸಿದ್ದು ಬೆಂಗಳೂರಿನ ಕರ್ನಾಟಕ ಜನಸ್ಪಂದನಾ ಟ್ರಸ್ಟ್. ಈ ಟ್ರಸ್ಟ್ ಕರ್ನಾಟಕದ ಮೂಲೆ ಮೂಲೆಯಲ್ಲಿ ವಿಭಿನ್ನ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸುವಲ್ಲಿ ಯಶಸ್ವಿ ಐದನೇ ವರ್ಷ ಪೂರೈಸಿದೆ. ಇನ್ನು ಭಾರತೀಯವರ ಮಗಳು ಅನುರಾಧ ಬಾಲಪ್ರತಿಭೆ. ಚಿಕ್ಕವಯಸ್ಸಿನಿಂದಲೇ ನೃತ್ಯ, ಭರತನಾಟ್ಯ, ಚಿತ್ರಕಲೆ, ಸಾಂಸ್ಕೃತಿಕ ನಡಿಗೆ (ಫ್ಯಾಶನ್ ಶೋ), ಕರಕುಶಲತೆ, ನಟನೆ ಇನ್ನು ಮುಂತಾದ ಅನೇಕ ಕಲೆಗಳನ್ನು ರೂಢಿಸಿಕೊಂಡು ಕರ್ನಾಟಕ ಜನಸ್ಪಂದನ ಟ್ರಸ್ಟ್ ವತಿಯಿಂದ ನಡೆಸಿ ಕೊಟ್ಟಂತಹ 25 ವಾರಗಳ ವಿಭಿನ್ನ ಆನ್ಲೈನ್ ಸ್ಪರ್ಧೆಗಳಲ್ಲಿ ಸಹ ಭಾಗವಹಿಸಿ ಸತತವಾಗಿ ಪ್ರಥಮ ದ್ವಿತೀಯ ಅಥವಾ ತೃತೀಯ ಸ್ಥಾನವನ್ನು ಗಳಿಸಿಕೊಂಡು ಸಾಧನೆಗೈದಿದ್ದಾಳೆ. ಇವಳ ಬಾಲ ಸಾಧನೆ ಮೆಚ್ಚಿ ಕರ್ನಾಟಕ ಜನಸ್ಪಂದನಾ ಟ್ರಸ್ಟ್ ವತಿಯಿಂದ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಈ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಬೆಂಗಳೂರು ಶಾಖೆಯ ದಿವ್ಯಜ್ಯೋತಿ ಜಾಗೃತಿ ಸಂಸ್ಥಾನದ ಪ್ರಚಾರಕರಾದಂತಹ ಶ್ರೀ ಅಶುತೋಷ ಮಹಾರಾಜರವರ ಶಿಷ್ಯೆ ಸಾಧ್ವಿ ಉನ್ಮೇಷಾ ಭಾರತಿಯವರು ದಿವ್ಯ ಸಾನಿಧ್ಯವನ್ನು ವಹಿಸಿದ್ದರು. ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ನಿಕಟಪೂರ್ವ ಶಾಸಕರು, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಶ್ರೀಯುತ ಎಸ್ ಮುನಿರಾಜು ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇನ್ನು ದಾಸರಹಳ್ಳಿ ಮಂಡಲ ಅಧ್ಯಕ್ಷರಾದಂತಹ ಶ್ರೀಯುತ ಎಂ ಲೋಕೇಶ್ ರವರು ಘನ ಅಧ್ಯಕ್ಷತೆಯನ್ನು ವಹಿಸಿದರೆ ಕರ್ನಾಟಕ ಕನ್ನಡ ಸೇನೆಯ ರಾಜ್ಯದ್ಯಕ್ಷರು ಶ್ರೀಯುತ ಕೆ ಆರ್ ಕುಮಾರ್ ರವರು ಅಧ್ಯಕ್ಷತೆಯನ್ನು ವಹಿಸಿದ್ದರು. ಸಮಾಜಸೇವಕರಾದ ಶ್ರೀಮತಿ ಸುಜಾತಾ ಮುನಿರಾಜು ರವರು ಹಾಗೂ ಶ್ರೀಮತಿ ಆಶಾ ಎಂ ಪಾಟೀಲ್ ರವರು, ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ಉಮಾದೇವಿ ನಾಗರಾಜುರವರು ಮತ್ತು ವಿಜಯಪುರ ಜಿಲ್ಲೆಯ ತಿಕೋಟಾ ಪಿಕೆಪಿಎಸ್ ಅಧ್ಯಕ್ಷರಾದ ಶ್ರೀಮತಿ ಭಾಗಿರತಿ ತೇಲಿ ಯವರು ಪ್ರಶಸ್ತಿ ಪ್ರಧಾನ ಮಾಡಿದರು. ವಿಜಯಪುರ ಜಿಲ್ಲೆಯ ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಸಂಗಮೇಶ ಬಬಲೇಶ್ವರ, ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ವೈ ಬಿ ಎಚ್ ಜಯದೇವ, ಸ್ವಾಮಿ ವಿವೇಕಾನಂದ ಶಾಲಾ ಮಕ್ಕಳ ಪೋಷಕರೂ ಕ್ಷೇಮಾಭಿವೃದ್ಧಿಯ ಸಂಸ್ಥಾಪಕರು ಗೌರವಾಧ್ಯಕ್ಷರೂ ಆದ ಶ್ರೀ ಎಚ್. ಪಿ ಗುರುನಾಥ್, ಕರ್ನಾಟಕ ಕನ್ನಡ ಸೇನೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮಹಾಂತೇಶ ತಾರಾಪುರ, ಡಾ. ಅಭಿ ಚಲನಚಿತ್ರ ನಾಯಕ ಮತ್ತು ನಿರ್ದೇಶಕರಾದ ಶ್ರೀ ವಿಷ್ಣು ಗೌರವ ಉಪಸ್ಥಿತಿಯಲ್ಲಿದ್ದರು. ಮುಖ್ಯ ಅತಿಥಿಗಳಾಗಿ ಕಾಯಕಯೋಗಿ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀ ಬಸವರಾಜಣ್ಣ, ಕರ್ನಾಟಕ ಸರ್ಕಾರದ ಸಚಿವಾಲಯದ ಶ್ರೀಮತಿ ಮಧುಮಾಲತಿ ಎನ್. , ಬಿಜೆಪಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಶ್ರೀ ಪಿ ರಾಜು ನಾಗಿಣಿ-1 ಖ್ಯಾತಿಯ ನಟಿ ಶ್ರೀಮತಿ ಗೌತಮಿ ಜಯರಾಮ್ ಹಾಗೂ ಇನ್ನೂ ಮುಂತಾದ ಗಣ್ಯಾತಿಗಣ್ಯರು ಉಪಸ್ಥಿತರಿದ್ದರು. ಕರ್ನಾಟಕ ಜನಸ್ಪಂದನಾ ಟ್ರಸ್ಟ್ ನ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶ್ರೀ ಹನುಮಂತಪ್ಪ ಎಸ್ ಮೇಡೆಗಾರ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಕರ್ನಾಟಕ ಜನಸ್ಪಂದನಾ ಟ್ರಸ್ಟ್ ರಾಜ್ಯ ಸಲಹಾ ಸಮಿತಿ ಸದಸ್ಯರು, ರಾಜ್ಯ ಪದಾಧಿಕಾರಿಗಳು ದಾಸರಳ್ಳಿ ವಿಧಾನಸಭಾ ಕ್ಷೇತ್ರ ಮಹಿಳಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ವಿವಿಧ ಜಿಲ್ಲೆಗಳಿಂದ ಆಗಮಿಸಿದ ಮಕ್ಕಳಿಂದ ಹಾಗೂ ನೃತ್ಯಕಲಾ ತಂಡದವರಿಂದ ಭರತನಾಟ್ಯ ನೃತ್ಯ ಸಂಗೀತ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಶ್ರೀ ಅಂಬಣ್ಣ ಮುಡಬಿ, ಶ್ರೀ ಶರಣಯ್ಯ ಜಡಿಮಠ, ಶ್ರೀ ಬಸವರಾಜ ಕುಂಬಾರ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಲತಾ ಕುಂದರಗಿ ವಂದಿಸಿದರು.
ವರದಿ – ಸಂಪಾದಕೀಯ