ಭಾಲ್ಕಿ ಶ್ರೀಗಳಿಗೆ ಚುಟುಕು ತಪಸ್ಸಿ ಪ್ರಶಸ್ತಿ ಪ್ರಧಾನ..
ಚಿಟಗುಪ್ಪಾ : ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ವತಿಯಿಂದ ಬೆಂಗಳೂರಿನ ವನಕಲ್ಲು ಮಠದಲ್ಲಿ ಹಮ್ಮಿಕೊಂಡಿದ್ದ ಚುಟುಕು ದಶಮಾನೋತ್ಸವ ಸಂಭ್ರಮ ಹಾಗೂ ರಾಜ್ಯ ಮಟ್ಟದ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಭಾಲ್ಕಿಯ ಪೂಜ್ಯ ಡಾ.ಮ.ಘ.ಚ ಬಸವಲಿಂಗ ಪಟ್ಟದೇವರಿಗೆ ಚುಟುಕು ತಪಸ್ಸಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಪೂಜ್ಯ ಬಸವಲಿಂಗ ಪಟ್ಟದೇವರು ಮಾತನಾಡಿ ಸಾಹಿತ್ಯ ಲೋಕದಲ್ಲಿ ಚುಟುಕು ಸಾಹಿತ್ಯ ಚುಟುಕಾಗಿದ್ದರೂ ಅರ್ಥಪೂರ್ಣ ವಿಷಯವನ್ನು ಹೊಂದಿರುತ್ತದೆ.ಮಹತ್ವವಾದ ವಿಚಾರಗಳನ್ನು ಅತಿ ಕಡಿಮೆ ಸಾಲುಗಳಲ್ಲಿ ಹೇಳುವುದೇ ಚುಟುಕು ಸಾಹಿತ್ಯದ ಲಕ್ಷಣ, ಚುಟುಕು ಕಾವ್ಯಕ್ಕೆ ಸುದೀರ್ಘ ಇತಿಹಾಸ ಇದೆ. ಶಿಲಾಲಿಪಿಗಳಲ್ಲಿ, ವಚನಗಳಲ್ಲಿ ಶರಣರು, ದಾಸರ ನಂತರದಲ್ಲಿ ತ್ರಿಪದಿಯ ಸರ್ವಜ್ಞ ಮೇರು ಚುಟುಕು ಸಾಹಿತ್ಯ ರಚಿಸಿದ್ದು ಐತಿಹಾಸಿಕವಾದದ್ದು.ಚುಟುಕುಗಳು ಓದುಗರನ್ನು ಸಾಹಿತ್ಯದೆಡೆ ಆಕರ್ಷಿಸುತ್ತದೆ, ಸಾಹಿತ್ಯದ ಬೆಳವಣಿಗೆಯಲ್ಲಿ ಚುಟುಕು ಸಾಹಿತ್ಯವೂ ಅತ್ಯಂತ ಪ್ರಾಮುಖ್ಯ ಪಡೆದಿದೆ.ಹಲವಾರು ಕವಿಗಳು ಅದ್ಭುತವಾದ ಚುಟುಕು ಸಾಹಿತ್ಯ ರಚಿಸುವ ಮೂಲಕ ಕನ್ನಡ ಸಾಹಿತ್ಯದ ಲೋಕವನ್ನು ಗಟ್ಟಿಗೊಳಿಸಿದ್ದಾರೆ. ಇದು ಕಾವ್ಯದ ಯಾವುದೇ ಪ್ರಾಕಾರಕ್ಕೆ ಕಡಿಮೆ ಏನಿಲ್ಲ. ಜೀವನ ಮೌಲ್ಯಗಳನ್ನು ಅರ್ಥಪೂರ್ಣವಾಗಿ ಪ್ರತಿಪಾದಿಸುವ ಚುಟುಕು ಸಾಹಿತ್ಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ರಾಜ್ಯಾದ್ಯಂತ ಸಮ್ಮೇಳನಗಳನ್ನು ನಡೆಸುವ ಮೂಲಕ ಅನನ್ಯವಾದ ಸಾಹಿತ್ಯ ಸೇವೆ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಡಾ. ಶಿವಮೂರ್ತಿ ಮುರುಘಾ ಶರಣರು, ಡಾ.ಬಸವ ದಯಾನಂದ ಶರಣರು, ಮಲ್ಲಿಕಾರ್ಜುನ ಶರಣರು, ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಜೆ. ಪುಟ್ಟಸ್ವಾಮಿ, ಚುಟುಕು ಸಾಹಿತ್ಯ ಪರಿಷತ್ತು ರಾಜ್ಯ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ, ಬೀದರ ಜಿಲ್ಲಾಧ್ಯಕ್ಷ ಸಂಗಮೇಶ ಎನ್ ಜವಾದಿ, ರಾಜ್ಯ ಕಾರ್ಯದರ್ಶಿ ಮರಿಗೌಡ, ಮಲ್ಲಿಕಾರ್ಜುನ ಬೃಂಗಿಮಠ, ಮಣ್ಣೆ ಮೋಹನ, ಬಸವಲಿಂಗ ದೇವರು, ಚಂದ್ರಶೇಖರ್ ಸೇರಿದಂತೆ ಅಪಾರ ಪ್ರಮಾಣದಲ್ಲಿ ಸಾಹಿತಿಗಳು, ಗಣ್ಯರು, ಕವಿಗಳು, ಮಠದ ಭಕ್ತರು ಉಪಸ್ಥಿತರಿದ್ದರು.
ವರದಿ – ಸಂಗಮೇಶ ಎನ್ ಜವಾದಿ