ಗಜಲ್ :-ಯುದ್ಧದ ಹಾದಿಯಲಿ ಗುಂಡುಗಳು ಮಾತನಾಡುತ್ತಿವೆ….
ಯುದ್ಧದ ಹಾದಿಯಲಿ ಗುಂಡುಗಳು ಮಾತನಾಡುತ್ತಿವೆ
ನಗರದ ಬೀದಿಯಲಿ ಶವಗಳು ಮಾತನಾಡುತ್ತಿವೆ
ಸತ್ತವರ ಲೆಕ್ಕದಲಿ ವಿಜಯಗಳು ಮಾತನಾಡುತ್ತಿವೆ
ಸೋತವರ ಸ್ಮರಣೆಯಲಿ ಸ್ಮಶಾನಗಳು ಮಾತನಾಡುತ್ತಿವೆ
ಬೆಳಕಿನ ನಿರೀಕ್ಷೆಯಲಿ ಕಾರ್ಗತ್ತಲೆಗಳು ಮಾತನಾಡುತ್ತಿವೆ
ಧರ್ಮದ ನೆಪದಲಿ ಆಫೀಮುಗಳು ಮಾತನಾಡುತ್ತಿವೆ
ಸುದ್ದಿಯ ರಸ್ತೆಯಲಿ ನೋಟುಗಳು ಮಾತನಾಡುತ್ತಿವೆ
ದ್ವೇಷದ ಓಣಿಯಲಿ ಗೋರಿಗಳು ಮಾತನಾಡುತ್ತಿವೆ
ನೆರಳಿನ ತಿರುವಿನಲಿ ಗಾಯಗಳು ಮಾತನಾಡುತ್ತಿವೆ
ದೈವದ ಹೆಸರಿನಲಿ ದರೋಡೆಗಳು ಮಾತನಾಡುತ್ತಿವೆ
ನಾಳೆಯ ಕುರುಡಿನಲಿ ಇಂದುಗಳು ಮಾತನಾಡುತ್ತಿವೆ
ಶವಾಗಾರದ ಸಂತೆಯಲಿ ಸಂಧಿಗಳು ಮಾತನಾಡುತ್ತಿವೆ
ಅಂಧರ ಹಾಡಿಯಲಿ ಕಿವುಡುಗಳು ಮಾತನಾಡುತ್ತಿವೆ ಗೆಳೆಯ
‘ದೇವ’ರ ನಾಡಿನಲಿ ಸತ್ತ ನಾಡಿಗಳು ಮಾತನಾಡುತ್ತಿವೆ
– ದೇವರಾಜ್ ಹುಣಸಿಕಟ್ಟಿ.