ಬಸವಾದಿ ಪ್ರಮಥರ ವಚನ ಸಾಹಿತ್ಯವು ಎಲ್ಲಾ ತರಗತಿಗಳ ಪಠ್ಯ ಪುಸ್ತಕಗಳಲ್ಲಿ ಸೇರ್ಪಡೆಯಾಗಲಿ : ಸಾಹಿತಿ ಸಂಗಮೇಶ ಎನ್ ಜವಾದಿ.

Spread the love

ಬಸವಾದಿ ಪ್ರಮಥರ ವಚನ ಸಾಹಿತ್ಯವು ಎಲ್ಲಾ ತರಗತಿಗಳ ಪಠ್ಯ ಪುಸ್ತಕಗಳಲ್ಲಿ ಸೇರ್ಪಡೆಯಾಗಲಿ : ಸಾಹಿತಿ ಸಂಗಮೇಶ ಎನ್ ಜವಾದಿ.

ಚಿಟಗುಪ್ಪಾ : ವಿಶ್ವಕ್ಕೆ ಸಮಾನತೆಯ ಸಂದೇಶವನ್ನು ಸಾರಿ, ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸಿ, ನುಡಿದಂತೆ ನಡೆದ, ಅರಿವೇ ಗುರು, ದಯವೇ ಧರ್ಮ ಎಂಬುದು ಜಾಗತಿಕ ಪ್ರಪಂಚಕ್ಕೆ ಸಾರಿದ 12 ನೇ ಶತಮಾನದ ಬಸವಾದಿ ಶಿವಶರಣರ ವಚನ ಸಾಹಿತ್ಯವು ದೇಶ ಹಾಗೂ ರಾಜ್ಯದ ಎಲ್ಲಾ ಶಿಕ್ಷಣ ಇಲಾಖೆಯ ತರಗತಿಗಳ ಪಠ್ಯ ಪುಸ್ತಕಗಳಲ್ಲಿ ಸೇರ್ಪಡೆಯಾಗಬೇಕೆಂದು ಸಾಹಿತಿ,ಚಿಂತಕರಾದ ಸಂಗಮೇಶ ಎನ್ ಜವಾದಿಯವರು ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಒತ್ತಾಯಿಸಿದಾರೆ. ಅವರು ಪತ್ರಿಕಾ ಪ್ರಕಟಣೆ ನೀಡಿ ವಚನ ಸಾಹಿತ್ಯವು ಸ್ಥಾವರ ಸಮಾಜವನ್ನು ತಿರಸ್ಕರಿಸಿ ಜಂಗಮ ಸಮಾಜವನ್ನು ನಂಬಿದ ಬಹಳ ದೊಡ್ಡ ಮಾನವೀಯ  ಮೌಲ್ಯಾಧಾರಿತ ಮೌಲ್ಯ. ಕಾಯಕ ಮತ್ತು ದಾಸೋಹಗಳ ಮೂಲಕ ಸಮಾಜೋತ್ಪನ್ನಗಳ ಸಮಪಾಲು ಸಿದ್ಧಾಂತವನ್ನು ಮಂಡಿಸುವ ಈ ಚಳವಳಿ ಭಾರತೀಯ ಸಂಸ್ಕೃತಿಯಲ್ಲೇ ಅತಿ ಐತಿಹಾಸಿಕವಾದದು ಜೊತೆಗೆ ಪ್ರಮುಖವಾದುದು.ಕನ್ನಡ ನಾಡಿಗೆ ಹೊಸ ತಿರುವು ಕೊಟ್ಟಿದ್ದು ವಚನ ಸಾಹಿತ್ಯ ಎಂಬುದು ಇಂದಿನ ಸರಕಾರಗಳು ಮರೆಯಬಾರದು. ಆಚಾರ-ವಿಚಾರ, ಭಾಷೆ-ಸಾಹಿತ್ಯ ಮುಂತಾದ ಹಲವು ಕ್ಷೇತ್ರಗಳಲ್ಲಿ ಹೊಸತನ್ನು ತುಂಬಿದವರು.ಸಮಾಜದ ಎಲ್ಲಾ ಶರಣರು ವಚನವನ್ನು ಮುಖ್ಯ ಮಾಧ್ಯಮವನ್ನಾಗಿ ಮಾಡಿಕೊಂಡು, ತಮ್ಮ ಅನುಭವಗಳನ್ನು ಹೇಳಿಕೊಳ್ಳತೊಡಗಿದ್ದರಿಂದ ವಚನ ಸಾಹಿತ್ಯ ಒಂದು  ವೈಚಾರಿಕ ಚಳವಳಿಯೂ ಆಯಿತು. ವಚನಕಾರರು ಸ್ವತಂತ್ರ ಮನೋಭಾವದವರು. ಅವರು ಸಾಹಿತ್ಯ ರಚಿಸಬೇಕೆಂಬ ಉದ್ದೇಶದಿಂದ ಬರೆದವರಲ್ಲ. ದಿನದಿನದ ತಮ್ಮ ಅನುಭವಗಳನ್ನು ವಚನಗಳ ರೂಪದಲ್ಲಿ  ಬರೆದವರು.ಶರಣರು ತಾವು ಅಂದಿನ ಸಮಾಜದಲ್ಲಿ ಕಂಡ ಅನ್ಯಾಯ, ಅಧರ್ಮ, ಅಸಮಾನತೆ, ಮೂಢನಂಬಿಕೆ ಮತ್ತು ಡಾಂಭಿಕತೆಯನ್ನು ವಚನಗಳ ಮೂಲಕ ಪ್ರತಿಭಟಿಸಿದವರು. ಸಮಾಜ ಸುಧಾರಣೆ ಮತ್ತು ಕಾಯಕಭಕ್ತಿ  ಅವರ ಮುಖ್ಯ ಉದ್ದೇಶವಾಗಿತ್ತು, ಅವರ ಶೈಲಿಯಲ್ಲಿ ಅಡಂಬರಿಕೆ ಕಡಿಮೆ, ಅರ್ಥವಾಗದ ಕಠಿಣ ಶಬ್ದಗಳಿಲ್ಲ. ಆಡುವ ಭಾಷೆಯಲ್ಲಿ ಜನರಿಗೆ ಅರ್ಥವಾಗುವಂತೆ ಆದರ್ಶ ಜೀವನದ ರೀತಿ ನೀತಿಗಳನ್ನು ಉಪದೇಶಿಸಿದ ಕೀರ್ತಿ ವಚನಕಾರರಿಗೆ ಸಲ್ಲುತ್ತದೆ. ನೂರಾರು ಜನ ವಚನಕಾರರಿದ್ದಾರೆ. ಕೆಳವರ್ಗದಿಂದ ಬಂದವರಿದ್ದಾರೆ, ಮಹಿಳಾ ವಚನಕಾರ್ತಿಯರಿದ್ದಾರೆ. ಬೇರೆ ಬೇರೆ ಕಾಯಕದವರಿದ್ದಾರೆ. ಅವರ ವಚನಗಳು ನಿರಾಭರಣ ಸುಂದರಿಯಂತೆ ಮನಸೆಳೆಯುತ್ತವೆ. ಜ್ಞಾನ ಇರುವವರು ಯಾವುದೋ ಒಂದು ಧರ್ಮದ ಸ್ವತ್ತಾಗಿದರು. ಶರಣರು ಅದನ್ನು ಜನಸಾಮಾನ್ಯರೆಲ್ಲರಿಗೂ ಒದಗುವಂತೆ ಮಾಡಿದರು. ಮೇಲ್ಜಾತಿ ಕೀಳ್ಜಾತಿ ಎಂಬ ತಾರತಮ್ಯ ಮಾಡಲಿಲ್ಲ. ಆತ್ಮೋದ್ಧಾರದ ದಾರಿ, ಧರ್ಮ, ನೀತಿಗಳು ಎಲ್ಲರಿಗೂ ತೆರೆದಿರಬೇಕೆಂಬುದೇ ವಚನಕಾರರ ಮುಖ್ಯ ಧೈಯ ಮತ್ತು ಗುರಿಯಾಗಿತ್ತು.ಇವರಲ್ಲಿ ಜಾತಿ ಮತ ಪಂಥಗಳ ಪ್ರಶ್ನೆಯಿಲ್ಲ. ಕುಲಕ್ಕಿಂತ ಶೀಲವೇ ಮುಖ್ಯ‌. ಕಾಯಕವೇ ಎಲ್ಲರಿಗೂ ಅತ್ಯಗತ್ಯ. ಕಾಯಕದಲ್ಲಿ ಮೇಲು ಕೀಳೆಂಬುದಿಲ್ಲ. ಹಗ್ಗ ಹೊಸೆಯುವವ, ಸೌದೆ ಹೊರುವವ, ಚಪ್ಪಲಿ ಹೊಲಿಯುವವ, ಹೆಂಡಮಾರುವವ, ಅಗಸ, ಬೆಸ್ತ, ಬೇಡ – ಇವರೆಲ್ಲರೂ ಸಮಾನರು. ಇದು ವಚನಕಾರರ ಸಿದ್ಧಾಂತ. ಅವರ ಜೀವನದ ದೃಷ್ಟಿಯಂತೆಯೇ ವಚನ ಸಾಹಿತ್ಯದ ಸೃಷ್ಟಿ ಕೂಡಾ ಒಂದು ಎಂಬುದು ಇಂದಿನ ಜಾಗತಿಕ ಲೋಕ ಯಾವತ್ತು ಮರೆಯುವಂತಿಲ್ಲ.ಈ ರೀತಿಯ ಸಾಹಿತ್ಯವು ಭಾರತದ ಬೇರಾವ ಭಾಷೆಗಳಲ್ಲೂ ಇಲ್ಲ. ಕನ್ನಡದ ಈ ನೆಲದಿಂದ ವಿಶ್ವಸಾಹಿತ್ಯಕ್ಕೆ ಏನಾದರೂ ಕಾಣಿಕೆ ನೀಡಬೇಕೆಂದರೆ ಅದು ನಾವು ವಚನ ಸಾಹಿತ್ಯವನ್ನೇ  ನೀಡುತ್ತೇವೆ, ಆರಿಸಿಕೊಳ್ಳಬೇಕಾಗುತ್ತದೆ. ಆದಕಾರಣ ಕೇಂದ್ರ ಹಾಗೂ ರಾಜ್ಯ ಸರಕಾರದ ಅಡಿಯಲ್ಲಿ ಬರುವ ಕೇಂದ್ರಿಯ ವಿಶ್ವವಿದ್ಯಾಲಯ, ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ರಾಜ್ಯ ಸರಕಾರದ ಉನ್ನತ ಶಿಕ್ಷಣ,ಪ್ರಾಥಮಿಕ ಪ್ರೌಢ ಶಿಕ್ಷಣ, ವಿಶ್ವವಿದ್ಯಾಲಯಗಳು ಸೇರಿದಂತೆ ಸಂಶೋಧನಾ ವಿಭಾಗದಲ್ಲಿ ವಚನ ಸಾಹಿತ್ಯವು ಸೇರ್ಪಡೆಯಾಗಬೇಕು. ಈ ಮೂಲಕ ಯುವ ಪೀಳಿಗೆಯು ಆದರ್ಶ ಸಮಾಜ ನಿರ್ಮಾಣ ಮಾಡುವಲ್ಲಿ ಸರಕಾರದ ಪಾತ್ರ ಬಹಳ ಮುಖ್ಯವಾಗಿದೆ. ಈ ದಿಸೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಈ ಕೂಡಲೇ ವಚನ ಸಾಹಿತ್ಯವು ಪಠ್ಯ ಪುಸ್ತಕಗಳಲ್ಲಿ ಸೇರ್ಪಡೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಂಗಮೇಶ ಎನ್ ಜವಾದಿಯವರು ತಿಳಿಸಿದ್ದಾರೆ.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *