ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು..
ಯುಗಾದಿ ಬಂತು
ವರುಷ ವರುಷ ಹರುಷದಿಂದ
ಪಚ್ಚೆ ಮೈದಳೆದು ಕುಣಿದು ಕುಪ್ಪಳಿಸುತ
ಪರಿಮಳ ಬೀರುತ ಹರುಷ ಸೂಸುತ
ಯುಗಾದಿ ಬಂತು
ಪ್ರಕೃತಿ ಮಾತೆಗೆ ಯವ್ವನ ತಂತು…
ಹೊಂಗೆಹೂವ ಹೊನಲಲಿ ತೇಲಿತೇಲಿ
ಭೃಂಗದ ಸ್ವರ-ಮಾಧುರ್ಯದಿ ಮಿಂದು
ಮಲ್ಲಿಗೆ ಸಂಪಿಗೆ ಹೂವಿನ ಕಂಪಲಿ ತೇಲಿ
ಹರುಷದಲ್ಲಿ ಕುಪ್ಪಳಿಸುತ ಯುಗಾದಿ ಬಂತು…
ಬೇವಿನ ಒಡಲಲ್ಲಿ ಹೂವನು ತುಂಬುತ
ಮಾವಿನ ಮಡಿಲಲಿ ಫಲವನು ನೀಡುತ
ಬಾಳೆಯ ಬನದಲ್ಲಿ ರಸಬಾಳೆ ಬಿಡುತ
ಪ್ರಕೃತಿ ಮಾತೆಗೆ ಯವ್ವನ ತುಂಬುತ ಯುಗಾದಿ ಬಂತು…
ರಂಗುರಂಗಿನ ಹೂವಲ್ಲಿ ಮಯ್ಯ ಮರೆಸುತ
ಮಾವು ಬೇವಿನ ಸುವಾಸನೆಯಲ್ಲಿ ಗುಂಗನು ತರಿಸುತ
ಬಾಲ್ಯದ ಮನಸ್ಸಿಗೆ ಮುದವನು ನೀಡುತ
ಮುಪ್ಪಿನ ವಯಸ್ಸಿಗೂ ಯವ್ವನ ಬರಿಸುತ ಬಂತು ಯುಗಾದಿ ಬಂತು…
ನೊಂದ ಮನಕೆ ನವೋಲ್ಲಾಸ ತುಂಬುತ
ಬೆಂದ ಹೃದಯಕ್ಕೆ ಹರ್ಷ ಸಿಂಚನ ನೀಡುತ
ಹರುಷದ ಜೀವಕೆ ನವರಸ ತುಂಬುತ
ಜೀವ ಸಂಕುಲಕ್ಕೆ ಸ್ಪೂರ್ತಿ ತುಂಬುತ ಯುಗಾದಿ ಬಂತು…
ನಲಿಯುವ ಹಾದಿಲಿ ಹೂವನು ಹಾಸಿ
ನಡೆಯುವ ಪದದಲ್ಲಿ ಕಂಪನು ಸೂಸಿ
ಗಾಳಿಲಿ ಸುಗಂಧದ ಪರಿಮಳ ಬೀಸಿ
ನೋವನು ಮರೆಸುತ ನಗುವನು ಚೆಲ್ಲುತ ಯುಗಾದಿ ಬಂತು…
ಬೇವು-ಬೆಲ್ಲದ ಸಿಹಿ-ಕಹಿ ಬೆರೆಸುತ
ಸಂಶಯ ದ್ವೇಷ-ಅಸೂಯೆ ದಬ್ಬುತ
ಬಾಳಿನ ದುಃಖದ ಹಳೆ ಪೊರೆ ಕಳಚುತ
ಪ್ರೇಮದಿ ಮೀಯಲು ಅನುರಾಗ ಬೆರೆಸುತ ಯುಗಾದಿ ಬಂತು…
✍🏻 ಶ್ರೀಮತಿ ಮೈತ್ರಾದೇವಿ ರಾಚಯ್ಯ ಹಿರೇಮಠ ಶಿಕ್ಷಕಿa