ಜುಮಲಾಪೂರ ಗ್ರಾಮದಲ್ಲಿ ಯುಗಾದಿ ಹಬ್ಬ ಬಣ್ಣ ಬಣ್ಣದೊಕುಳಿ ಸಂಭ್ರಮಿಸುತ್ತಿರುವ ಯುವಕರ ಹಬ್ಬ. ಯುಗಾದಿ ಎಂಬ ಹೊಸ ವರ್ಷ…

Spread the love

ಜುಮಲಾಪೂರ ಗ್ರಾಮದಲ್ಲಿ ಯುಗಾದಿ ಹಬ್ಬ ಬಣ್ಣ ಬಣ್ಣದೊಕುಳಿ ಸಂಭ್ರಮಿಸುತ್ತಿರುವ ಯುವಕರ ಹಬ್ಬ.   ಯುಗಾದಿ ಎಂಬ ಹೊಸ ವರ್ಷ

ಏನಿದರ ಮಹತ್ವ ಪಕ್ಷಿಗಳಲ್ಲಿ ನವಿಲು, ಪ್ರಾಣಿಗಳಲ್ಲಿ ಮಾನವ, ಋತುಗಳಲ್ಲಿ ವಸಂತ ಋತು ಶ್ರೇಷ್ಠವಾದಂತೆ ಎಲ್ಲ ಹಬ್ಬಗಳಲ್ಲಿ ಯುಗಾದಿಯು ಶ್ರೇಷ್ಠ. ಈ ಹಬ್ಬವನ್ನು ಭಾರತ ಪರ್ವದಲ್ಲಿ ಬೇರೆ-ಬೇರೆ ಹೆಸರಿನಿಂದ, ಸಾಮಾನ್ಯವಾಗಿ ಎಲ್ಲರೂ ಆಚರಿಸುವರು. ಹಬ್ಬಗಳಲ್ಲಿ ಶ್ರೇಷ್ಠವಾದ ಪ್ರಸಿದ್ಧವಾದ ಯುಗಾದಿ ಹಬ್ಬ ಚ್ಯೆತ್ರ ಮಾಸದ ಶುಕ್ಲ ಪಕ್ಷದ ಪಾಡ್ಯದಂದು ಬರುತ್ತದೆ. ಯುಗಾದಿ ಹಬ್ಬವು ಹಿಂದುಗಳ ದೃಷ್ಟಿಯಲ್ಲಿ ವರ್ಷಾರಂಭದ ಪವಿತ್ರ ದಿನ. ಯುಗಾದಿಯ ಅರ್ಥ ‘ಯುಗದ ಆದಿ’. ‘ಯುಗಾದಿ’ ಎಂಬ ಶಬ್ದ ಸಂಸ್ಕೃತದ ‘ಯುಗ’ ಮತ್ತು ‘ಆದಿ’ ಎಂಬ ಎರಡು ಶಬ್ದಗಳಿಂದ ಕೂಡಿದೆ. ಯುಗವೆಂದರೆ ಸೃಷ್ಟಿಯ ಕಾಲಮಾನ. ಅರ್ಥಾತ್ ಹೊಸ ವರ್ಷ; ಆದಿ ಎಂದರೆ ಆರಂಭ. ಯುಗಾದಿ ತತ್ಸಮ ಪದವಾದರೆ ಉಗಾದಿ ತದ್ಭವ, ಯುಗಾದಿ ಹಬ್ಬವು ಪೌರಾಣಿಕ ಹಾಗೂ ಐತಿಹಾಸಿಕ ವಿಶೇಷತೆಗಳ ದಿನವಾಗಿದೆ. ಇದು ಬ್ರಹ್ಮದೇವನ ಸೃಷ್ಟಿಯ ದಿನ. ಚೈತ್ರಶುದ್ಧ ಪಾಡ್ಯದಂದು ಸೂರ್ಯೋದಯವಾಗುತ್ತಿರುವಾಗ ಬ್ರಹ್ಮನು ವಿಶ್ವವನ್ನು ಸೃಷ್ಟಿಸಿದನೆಂದೂ, ಅಂದಿನಿಂದ ಕಾಲಗಣನೆಗಾಗಿ ಗ್ರಹ-ನಕ್ಷತ್ರ-ಮಾಸ-ಋತು-ವರ್ಷ ಇವುಗಳನ್ನು ಏರ್ಪಡಿಸಿದನೆಂದೂ ವ್ರತಖಂಡದಲ್ಲೂ ಪುರಾಣಗಳಲ್ಲೂ ಉಲ್ಲೇಖವಿದೆ.

ವೇದಗಳ ಕಾಲದಿಂದಲೂ ಯುಗಾದಿಯ ಮಹಿಮೆ ಇವೆ. ಎಲ್ಲ ಶಾಸ್ತ್ರ, ಗ್ರಂಥಗಳಲ್ಲಿ ಯುಗಾದಿಯನ್ನು ಕುರಿತು ಹೇಳಲಾಗಿದೆ. ಶ್ರೀರಾಮನು ರಾವಣನನ್ನು ಸಂಹರಿಸಿ ಬಂದಾಗ ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಪಟ್ಟಾಭಿಷೇಕವಾದ ದಿನ. ಅಲ್ಲದೆ ಮಹಾಭಾರತದಲ್ಲಿ ಬರುವ ಚೀದಿರಾಜ್ಯದ ಅರಸು ವಸುವಿನ ಉಗ್ರ ತಪಸ್ಸಿಗೆ ಮೆಚ್ಚಿದ ಇಂದ್ರನು ವೈಜಯಂತಿ ಮಾಲೆಯನ್ನು ಅವನಿಗೆ ಕೊಟ್ಟು, ಚಿನ್ನದ ಕಲಶವುಳ್ಳ ಚಕ್ರಾಧಿಪತ್ಯದ ಧ್ವಜವನ್ನು ರಾಜನ ತಲೆಯ ಮೇಲೆ ಇಟ್ಟಿರುವ ದಿನ.

ಇತಿಹಾಸದಲ್ಲಿ ಯುಗಾದಿ… ದಕ್ಷಿಣ ಭಾರತವನ್ನು ಆಳಿದ ಶಾಲಿವಾಹನನು ಚೈತ್ರಶುದ್ಧ ಪಾಡ್ಯಮಿಯಂದು ಶಾಲಿವಾಹನ ರಾಜ ಸಿಂಹಾಸನಾರೂಢನಾದನೆಂದೂ, ಆಗಿನಿಂದ ಶಾಲಿವಾಹನ ಶಕೆ ಆರಂಭವಾಯಿತೆಂದೂ ಹೇಳಲಾಗುತ್ತದೆ. ಹಿಂದುಗಳು ಶಾಲಿವಾಹನ ಶಕೆಯ ಸಂವತ್ಸರಗಳನ್ನಾಧರಿಸಿ ಆಯಾ ಸಂವತ್ಸರವನ್ನು ಚೈತ್ರ ಮಾಸದ ಪ್ರತಿಪದೆಯಿಂದ ಆರಂಭಿಸುವರು. ಯುಗಾದಿಯು ಚಂದ್ರಮಾನದ ಸಂವತ್ಸರದ ಆರಂಭದ ದಿನ. ವರಾಹಮಿಹಿರಾಚಾರ್ಯನು ವರ್ಷಾರಂಭವನ್ನು ಚೈತ್ರ ಮಾಸವೆಂದು ಹೇಳಿರುವನು. ಪಂಚಾಂಗ ಮತ್ತು ಶಾಸ್ತ್ರದ ಪ್ರಕಾರ ಶುಭದಿನ ಹಾಗೂ ಅತ್ಯಂತ ಶುಭ ಮೂಹೂರ್ತದ ಮೂರುವರೆ ದಿನಗಳೆಂದರೆ ಯುಗಾದಿ, ವಿಜಯದಶಮಿ, ಬಲಿಪಾಡ್ಯಮಿ ಮತ್ತು ಅಕ್ಷಯ ತದಿಗೆ. ಅದರಲ್ಲಿ ಯುಗಾದಿ ಅತೀಶ್ರೇಷ್ಠ ಮೂಹೂರ್ತ ಎಂದು ಭಾರತಿಯರು ನಂಬುತ್ತಾರೆ. ವರ್ಷದ ಶುಭ ದಿನವಾದ ಯುಗಾದಿ ಮಂಗಳ ಕಾರ್ಯವನ್ನು ಮಾಡಲು ಯೋಗ್ಯ ದಿನವೆಂದು ಹೇಳುವರು. ಯುಗಾದಿಯನ್ನು ಚಂದ್ರಮಾನ-ಸೌರಮಾನ ಹೀಗೆ ಎರಡು ಬಗೆಯಲ್ಲಿ ಆಚರಿಸುವ ಪದ್ಧತಿ ಇದೆ. ಚಂದ್ರನ ಚಲನೆಯನ್ನು ಗುರುತಿಸಿ ಮಾಡುವ ಪದ್ಧತಿಗೆ ಚಂದ್ರಮಾನ ಯುಗಾದಿ ಎನ್ನುವರು. ಹಾಗೂ ಸೂರ್ಯ ಮೇಷರಾಶಿಗೆ ಬಂದಾಗ ಸೌರಮಾನ ಯುಗಾದಿಯನ್ನು ಆಚರಿಸುವರು. ದಕ್ಷಿಣ ಭಾರತೀಯರು ಚಾಂದ್ರಮಾನವನ್ನು ಅನುಸರಿಸಿ ಚೈತ್ರಶುದ್ಧ ಪಾಡ್ಯಮಿಯಂದು ಯುಗಾದಿ ಆಚರಿಸುತ್ತಿರುವರು. ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ಗುಜರಾತ್ ಗಳಲ್ಲಿ ಚಂದ್ರಮಾನ ಯುಗಾದಿ ಆಚರಿಸಿದರೆ ತಮಿಳುನಾಡು, ಕೇರಳ ಮತ್ತು ಉತ್ತರ ಭಾರತದ ಕೆಲವು ಸ್ಥಳಗಳಲ್ಲಿ ಸೌರಮಾನ ಯುಗಾದಿ ಆಚರಿಸುತ್ತಾರೆ. ಉತ್ತರಭಾರತದಲ್ಲಿ ಕಾರ್ತಿಕ ಶುದ್ಧ ಪಾಡ್ಯಮಿಯನ್ನು ಯುಗಾದಿಯೆನ್ನುವರು. ಈ ಹಬ್ಬವನ್ನು ಭಾರತದಲ್ಲಿ ಬೇರೆ-ಬೇರೆ ಹೆಸರಿನಿಂದ ಆಚರಿಸುವರು. ಕರ್ನಾಟಕದಲ್ಲಿ ‘ಯುಗಾದಿ’, ಮಹಾರಾಷ್ಟ್ರದಲ್ಲಿ ‘ಗುಢಿಪಾಡವಾ’, ಆಂಧ್ರ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ‘ಹೊಸ ವರ್ಷದ ಹಬ್ಬ’ವೆಂದು, ಉತ್ತರ ಭಾರತದಲ್ಲಿ ‘ಬೈಸಾಖಿ’ ಎಂದು ಇದು ಆಚರಿಸಲ್ಪಡುತ್ತದೆ. ಹೊಸ ವರ್ಷದ ಪ್ರಾರಂಭದ ಸಂಕೇತವಾದ ಯುಗಾದಿಯನ್ನು ಬಡವ-ಬಲ್ಲಿದರೆಂಬ ತಾರತಮ್ಯವಿಲ್ಲದೇ ಎಲ್ಲಾ ಹಿಂದೂಗಳೂ ಆಚರಿಸುತ್ತಾರೆ. ರೈತರು ಎತ್ತುಗಳನ್ನು ಶೃಂಗರಿಸಿ ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಾರೆ. ವ್ಯಾಪಾರಿಗಳು ಹಾಗೂ ಇನ್ನಿತರರು ಕೂಡ ಅಂದಿನ ದಿನವೇ ಶುಭ ಕಾರ್ಯವನ್ನು ಮಾಡುತ್ತಾರೆ.

ನಿಸರ್ಗದ ಮೈತುಂಬಿ…’ಯುಗಾದಿ’ ಬಂದಿತೆಂದರೆ ಎಲ್ಲಡೆಯಲ್ಲಿ ಸಂತೋಷ, ಸಂಭ್ರಮ ತುಂಬಿ ತುಳುಕುತ್ತಿರುತ್ತದೆ. ಚೈತ್ರಮಾಸದಿಂದ ವಸಂತ ಋತು ಶುರುವಾಗುತ್ತದೆ. ವನಗಳೆಲ್ಲ್ಲ ಚಿಗುರಿ ಹೂ ಬಿಟ್ಟು ಯುಗಾದಿಯ ಹರ್ಷವನ್ನು ಬೀರುವವು. ಎಲ್ಲಿ ನೋಡಿದರೂ ಮರಗಿಡಬಳ್ಳಿಗಳು ಹಸಿರಾಗಿ ನಳನಳಿಸುತ್ತಿರುವುದು. ಯುಗಾದಿಯ ದಿನ ಮುಂಜಾನೆ ಬೇವು ಮಿಶ್ರಿತ ನೀರಿನಿಂದ ಸ್ನಾನ ಮಾಡಿ, ಹೊಸಬಟ್ಟೆ ಧರಿಸಿ ತಂತಮ್ಮ ದೇವರನ್ನು ಪೂಜಿಸಿ, ಬೇವು ಬೆಲ್ಲವನ್ನು ಸೇವನೆ ಮಾಡುತ್ತಾರೆ. ಬೇವು-ಬೆಲ್ಲವು ಸುಖ-ದುಃಖ, ರಾತ್ರಿ-ಹಗಲು ಇವುಗಳ ಸಂಕೇತಗಳಾಗಿವೆ. ಮಾನವರ ಬದುಕಿನಲ್ಲಿ ಸುಖ-ದುಃಖಗಳು ಅವಿಭಾಜ್ಯ ಅಂಶಗಳು. ಇವೆಲ್ಲವುಗಳೊಂದಿಗೆ ಸಮತೋಲನ ಕಾಯ್ದುಕೊಂಡೇ ಮನುಷ್ಯ ಬದುಕಬೇಕು. ಜೀವನ ಕಷ್ಟ-ಸುಖ. ನೋವು ನಲಿವುಗಳ ಸಮ್ಮಿಶ್ರಣವಾಗಿದೆ. ಇವೆರಡೂ ಒಟ್ಟಿಗೆ ಇರುವವು. ಎರಡನ್ನೂ ಸಮದೃಷ್ಟಿಯಿಂದ ಸವಿಯುವುದನ್ನು ಕಲಿಯಲೆಂದೇ ಯುಗಾದಿಯಂದು ಬೇವು-ಬೆಲ್ಲವನ್ನು ತಿನ್ನಿಸುವರು.

ನೋವು ನಲಿವು ಎರಡಕ್ಕೂ ನಾವು ಸ್ವಾಗತ ನೀಡಬೇಕು. ನಾವು ಬೇವಿನ ಸಮಾನವಾದ ದು:ಖ, ಅಶಾಂತಿಯ, ಪ್ರಪಂಚದಲ್ಲಿದ್ದರೂ ಬೆಲ್ಲದ ಸಮಾನವಾದ ಶಾಂತಿ, ಅತೀಂದ್ರಿಯ ಸುಖ, ಆತ್ಮೀಯತೆ, ಸ್ನೇಹ, ಮಧುರತೆಯ ಅನುಭವ ಮಾಡುವುದು ಎಂಬ ನಿಜ ಅರ್ಥವಾಗಿದೆ. ಆರೋಗ್ಯದ ಮಹತ್ವ ಬೇವಿನ ಎಲೆಯೂ ಮಾನವನ ಆರೋಗ್ಯಕ್ಕೆ ಸಹಕಾರಿಯಾಗುವುದು. ‘ಶತಾಯುರ್ವಜ್ರ ದೇಹಾಯ ಸರ್ವಸಂಪತ್ಕರಾಯಚ// ಸರ್ವಾರಿಷ್ಟವಿನಾಶಾಯ ನಿಂಬಕಂ ದಳ ಭಕ್ಷಣಂ//’ ಎಂದು ಆಯುರ್ವೇದವು ಬೇವಿನ ಮಹಿಮೆಯನ್ನು ಸಾರಿದೆ.  ಯುಗಾದಿಯಂದು ಇಷ್ಟದೇವತೆಯ ಪೂಜೆ ಮಾಡುವರು. ಆ ದಿನ ಎಲ್ಲ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಕೆಲವು ಊರುಗಳಲ್ಲಿ ಪಂಚಾಂಗ ಶ್ರವಣವನ್ನು ಏರ್ಪಡಿಸುವರು ಪ್ರತಿವರ್ಷದಲ್ಲೂ ಬರುವ ಕಷ್ಟ-ನಷ್ಟ, ಮಳೆ-ಬೆಳೆ ವಿಚಾರವನ್ನು ಜನರು ವರ್ಷದ ಪ್ರಾರಂಭದಲ್ಲೇ ತಿಳಿದುಕೊಳ್ಳಬಹುದು. ಪಂಚಾಂಗ ಕೇಳುವುದರಿಂದ ಮಾನವನ ಆಯುಷ್ಯ ಹೆಚ್ಚಾಗುತ್ತದೆ. ರೋಗ-ಪಾಪಗಳು ನಾಶವಾಗಿ ಗಂಗಾ ಸ್ನಾನ ಮಾಡಿದಷ್ಟು ಫಲ ಸಿಗುತ್ತದೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೇ ನವಗ್ರಹ ಪೂಜೆಗಳನ್ನು ಮಾಡುವರು ಹಾಗೂ ದಾನ ಮಾಡುವ ಸಂಪ್ರದಾಯಗಳೂ ಇರುವವು.

ಯುಗಾದಿಯ ಮಾರನೆಯ ದಿನವೂ ಹಬ್ಬದ ವಾತಾವರಣವೇ ಇರುತ್ತದೆ. ಮುಂಜಾನೆ ಎದ್ದು ಸ್ನಾನ ಮಾಡಿ ಮಡಿಯುಟ್ಟು ದೇವರನ್ನು ಪೂಜಿಸಿ ಗುರುಹಿರಿಯರಿಗೆ ನಮಸ್ಕ್ರಿಸುವರು.

ಬಿದಿಗೆ ಚಂದ್ರ ದರ್ಶನ ಅಂದು ‘ವರ್ಷ ತೊಡಕು’ ಎಂದು ಆಚರಿಸಲಾಗುತ್ತದೆ. ಅಂದರೆ ಸತ್ಕಾರ್ಯಗಳಿಗೋಸ್ಕರ ನಮ್ಮನ್ನು ತೊಡಗಿಸಿಕೊಳ್ಳುವ ದಿನ. ವರ್ಷವಿಡೀ ಸುಖ ನೀಡುವಂತೆ, ಕಷ್ಟ ನಿವಾರಿಸುವಂತೆ ದೇವರಲ್ಲಿ ಕೇಳಿಕೊಳ್ಳುವ ದಿವಸ. ಈ ದಿನ ಯಾರಿಗೆ ಏನನ್ನು ಪಡೆಯುವರೋ ಅದು ಇಡೀ ವರ್ಷದವರೆಗೆ ಇರುತ್ತದೆ ಎಂಬ ನಂಬಿಕೆ ಇದೆ. ಅಷ್ಟೇ ಅಲ್ಲದೇ ಅಂದು ಬಿದಿಗೆಯ ದಿನ ಚಂದ್ರದರ್ಶನ ಮಾಡುವರು. ‘ಆದಿ’ ಎಂಬ ಎರಡು ಶಬ್ದಗಳಿಂದ ಕೂಡಿದೆ. ಸೃಷ್ಟಿ ನಾಟಕದಲ್ಲಿ ನಾಲ್ಕು ಯುಗಗಳು ಇವೆ. ಸತ್ಯಯುಗ, ತ್ರೇತಾಯುಗ, ದ್ವಾಪರಯುಗ, ಮತ್ತು ಕಲಿಯುಗ. ಆದಿ’ ಎಂದರೆ ಪ್ರಾರಂಭ, ಪೂರ್ವಕಾಲ ಎಂದಾಗುತ್ತದೆ.

ತಮಸೋಮಾ ಜ್ಯೋತಿರ್ಗಮಯಾ…ವರ್ತಮಾನ ಸಮಯ ಕಲಿಯುಗದ ಕೊನೆಯ ಹಾಗೂ ಸತ್ಯಯುಗದ ಸಂಗಮಸಮಯ, ಸಂಗಮಯುಗವಾಗಿದೆ. ಹೀಗೆ ಕಲಿಯುಗದ ಅಂಧಕಾರದ ರಾತ್ರಿಯನ್ನು ಸತ್ಯಯುಗದ ಸುಜ್ಞಾನದ ಬೆಳಕನ್ನಾಗಿ ಪರಿವರ್ತಿಸುವ ಉದಯ ಕಾಲವೇ ಯುಗಾದಿ’. ಈ ಯುಗಾದಿಯ ಸಮಯದಲ್ಲಿ ನಿರಾಕಾರ ಶಿವನು ಪ್ರಜಾಪಿತ ಬ್ರಹ್ಮಾರವರ ಶರೀರದಲ್ಲಿ ಪ್ರವೇಶ ಮಾಡಿ, ಹೊಸ ಸೃಷ್ಟಿಯ ಸ್ಥಾಪನೆ ಮಾಡುವನು. ಕಲಿಯುಗದ ತಮೋಪ್ರಧಾನ ಮನುಷ್ಯಾತ್ಮರಿಗೆ ಸತ್ಯ ಜ್ಞಾನವನ್ನು ನೀಡಿ, ಅವರಿಗೆ ಸಹಜ ರಾಜಯೋಗವನ್ನು ಕಲಿಸಿ, ಅವರನ್ನು ಸ್ವರ್ಗ ಅಥವಾ ರಾಮರಾಜ್ಯಕ್ಕಾಗಿ ಬೇಕಾಗುವ ಶ್ರೀ ಲಕ್ಷ್ಮೀ-ನಾರಾಯಣ, ಶ್ರೀರಾಮ-ಸೀತೆಯರ ಸಮಾನ ದೇವಾತ್ಮರನ್ನಾಗಿ ಮಾಡುತ್ತಾನೆ. ಅದಕ್ಕಾಗಿಯೇ ರಾಮಾಯಣದಲ್ಲಿ ಇಂದ್ರನು ವ್ಶೆಜಯಂತಿ ಮಾಲೆಯನ್ನು ಹಾಗೂ ಚಿನ್ನದ ಕಲಶವನ್ನು ವಸುವಿಗೆ ನೀಡಿದ ದಿನವೆಂದು ಹೇಳಲಾಗುತ್ತದೆ.

ಯುಗಾದಿಯ ಶುಭಾಶಯ ಈ ರೀತಿಯಾಗಿ ಯುಗಾದಿಯು ನಾಡಿಗೆ ಮಾತ್ರವಲ್ಲದೆ, ಇಡೀ ವಿಶ್ವಕ್ಕೇ ಉಜ್ವಲತೆಯನ್ನು, ಜನತೆಗೆ ಸುಖ ಶಾಂತಿಯನ್ನು ನೀಡುವ ವಜ್ರಸಮಾನ ಸಮಯ. ಹೀಗೆ ಯುಗಾದಿಯು ಭಕ್ತರಿಗಾಗಿ, ವಿಶಾಲ ಹೃದಯದ ಶಿವ ಶರಣೆಯರಿಗಾಗಿ, ಮುಕ್ತಿ ಬಯಸುವ ಆರಾಧಕರಿಗಾಗಿ, ಶಿವನು ಭಕ್ತರ ಕರೆಗೆ ಓಗೊಟ್ಟು, ಅವರ ಭಕ್ತಿಯ ಫಲವನ್ನು ನೀಡಲು ಧರೆಗೆ ಬಂದಿದ್ದಾನೆ’ ಎಂಬ ಪರಮ ಸಂದೇಶವನ್ನು ನೀಡುವ ಮಹಾನ್ ಪರ್ವವಾಗಿದೆ.

‘ಯುಗ ಯುಗಾದಿ ಕಳೆದರೂ

ಯುಗಾದಿ ಮರಳಿ ಬರುತಿದೆ

ಹೊಸ ವರುಷಕೆ ಹೊಸ ಹರುಷದ

ಹೊಸತು ಹೊಸತು ತರುತಿದೆ’

ಎಂದು ಹೇಳುತ್ತಾ ನಾವು ಎಲ್ಲರೂ ಯುಗಾದಿಯ ನಿಜ ಅರ್ಥ ತಿಳಿದು ಆಚರಿಸೋಣ.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *