ಸರಕಾರ ಮಾಹಿತಿ ಹಕ್ಕು ಕಾರ್ಯಕರ್ತರು, ಸಾಮಾಜಿಕ ಹೋರಾಟಗಾರರು ಹಾಗೂ ಪತ್ರಕರ್ತರಿಗೆ ವಿಶೇಷ ಭದ್ರತೆ ನೀಡಬೇಕು ಹಾಗೂ ದೌರ್ಜನ್ಯ ಪ್ರಕರಣಗಳಲ್ಲಿ ಸಿಬಿಐ ತನಿಖೆ ನಡೆಸಬೇಕು – ಕರ್ನಾಟಕ ರಾಜ್ಯ ಸರಕಾರಿ ಭೂಮಿ ಉಳಿಸಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ನಾಗರಾಜ ನಾಯ್ಕ ಆಗ್ರಹ.
ಇಂದಿನ ದಿನದಲ್ಲಿ ಸಾಮಾಜಿಕ ಹೋರಾಟಗಾರರು ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತರು, ಪ್ರಾಮಾಣಿಕ ಪತ್ರಕರ್ತರು ಭಯದಲ್ಲಿ ಜೀವಿಸುವಂತಾಗಿದೆ. ಯಾವುದೆ ಸ್ವಾರ್ಥವಿಲ್ಲದೆ ನಿಸ್ವಾರ್ಥದಿಂದ ದೇಶದಹಿತಕ್ಕಾಗಿ ತಮ್ಮ ಬದುಕನ್ನೇ ಫಣವಾಗಿಟ್ಟು, ಅನ್ಯಾಯ ಅಕ್ರಮಗಳ ವಿರುದ್ಧ ಹೋರಾಟ ನಡೆಸುವವರನ್ನು ಕೊಲೆ ಮಾಡಿ ಪ್ರಕರಣ ಮುಚ್ಚಿ ಹಾಕಲಾಗುತ್ತಿದೆ. ಹೋರಾಟಗಾರರ ಮೇಲೆ ಹಲ್ಲೆ ಮಾಡಿ ಬೆದರಿಕೆ ಹಾಕಲಾಗುತ್ತಿದೆ. ಸಾಮಾಜಿಕ ಹೋರಾಟಗಾರರ ಮೇಲೆಯೆ ಸುಳ್ಳು ಪ್ರಕರಣಗಳು ದಾಖಲಾಗಿ ಸಾಮಾಜಿಕ ಹೋರಾಟಗಾರರು ಜೈಲಿಗೆ ಹೋಗುತ್ತಿದ್ದಾರೆ. ಇಂದಿನ ದಿನಮಾನಗಳಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತರು, ಸಾಮಾಜಿಕ ಹೋರಾಟಗಾರರು ಹಾಗೂ ಪ್ರಾಮಾಣಿಕ ಪತ್ರಕರ್ತರ ಮೇಲೆ ಹಲ್ಲೆ ಪ್ರಕರಣಗಳು ಮಾಮೂಲಿನಂತೆ ಆಗಿಬಿಟ್ಟಿದೆ. ಸರಕಾರ ಕೂಡಲೆ ಮಾಹಿತಿ ಹಕ್ಕು ಕಾರ್ಯಕರ್ತರು, ಸಾಮಾಜಿಕ ಹೋರಾಟಗಾರರು ಹಾಗೂ ಪತ್ರಕರ್ತರಿಗೆ ವಿಶೇಷ ಭದ್ರತೆ ನೀಡಬೇಕು ಮತ್ತು ಇವರ ಮೇಲೆ ಹಲ್ಲೆ ಮಾಡುವ, ಬೆದರಿಕೆ ಹಾಕುವ ಅಥವಾ ಕೊಲೆಯಾದಂತಹ ಸಂದರ್ಭದಲ್ಲಿ ಸಿಬಿಐ ತನಿಖೆ ನಡೆಸಬೇಕು. ಹೋರಾಟಗಾರರು ದೇಶದ ಆಸ್ತಿಯಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ಸರಕಾರಿ ಭೂಮಿ ಉಳಿಸಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ನಾಗರಾಜ ನಾಯ್ಕ ಸರಕಾರಕ್ಕೆ ಆಗ್ರಹಿಸಿದ್ದಾರೆ. ಅವರು ಕಳೆದ ತಿಂಗಳು ಕುಂದಾಪುರದ ಹಂಗಳೂರಿನಲ್ಲಿ ಅಪರಿಚಿತರಿಂದ ಹಲ್ಲೆಗೊಳಗಾಗಿದ್ದ ಸಾಮಾಜಿಕ ಕಾರ್ಯಕರ್ತ, ಮಾಹಿತಿ ಹಕ್ಕು ಹೋರಾಟಗಾರ ಹಾಗೂ ಸರ್ಕಾರದ ಭೂಮಿಯನ್ನು ಉಳಿಸುವ ನಿಟ್ಟಿನಲ್ಲಿ ಹೋರಾಟ ನಡೆಸುತ್ತಿದ್ದ ಸದಾಶಿವ ಕೋಟೆಗಾರ್ ರವರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಭೂಮಿ ಉಳಿಸಿ ಹೋರಾಟ ಸಮಿತಿಯ ವತಿಯಿಂದ ಹಲ್ಲೆಗೊಳಗಾಗಿದ್ದ ಸದಾಶಿವ ಕೋಟೆಗಾರರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಸನ್ಮಾನಿಸಿದ ನಾಗರಾಜ ನಾಯ್ಕ ಸದಾಶಿವ ಕೋಟೆಗಾರ್ ರಂತವರು ದೇಶದ ವೀರ ಪುತ್ರರಾಗಿದ್ದರೆ. ಇಂತಹವರ ಜೊತೆ ಕರ್ನಾಟಕ ರಾಜ್ಯ ಸರಕಾರಿ ಭೂಮಿ ಉಳಿಸಿ ಹೋರಾಟ ಸಮಿತಿ ಯಾವತ್ತು ನಿಂತು ಕೊಳ್ಳಲಿದೆ. ಈ ಪ್ರಕರಣದ ತನಿಖೆ ಸಿಬಿಐ ಗೆ ನೀಡಬೇಕು ಎಂದು ಸರಕಾರಕ್ಕೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರಕಾರಿ ಭೂಮಿ ಉಳಿಸಿ ಹೋರಾಟ ಸಮಿತಿಯ ಉಡುಪಿ ಜಿಲ್ಲಾ ಸಂಚಾಲಕರಾದ ಕಿರಣ ಪೂಜಾರಿ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತರು ಹಾಗೂ ಸಾಮಾಜಿಕ ಹೋರಾಟಗಾರರಾದ ಉದಯ ದೇವಾಡಿಗ ಉಪಸ್ಥಿತರಿದ್ದರು.
ವರದಿ – ಸಂಪಾದಕೀಯ