ಕರ್ನಾಟಕ ರೈತ ಸಂಘ (AIKKS) ಮಸ್ಕಿ ತಾಲೂಕು ಸಮಿತಿ ನೇತೃತ್ವದಲ್ಲಿ ನಡೆದ ಆಹೋ ರಾತ್ರಿ ಧರಣಿ ಸತ್ಯಾಗ್ರಹ 2ನೆ ದಿನದಲ್ಲಿ ಮುಂದುವರೆದಿದೆ.
ರಾಯಚೂರು ಜಿಲ್ಲೆಯ ನೂತನ ಮಸ್ಕಿ ತಾಲೂಕಿನಲ್ಲಿ ನಿನ್ನೆ ಬೆಳಿಗ್ಗೆ ಮಾಜಿ ಪ್ರಧಾನಿ ಬಾಬು ಜಗಜೀವನರಾವ ರವರ 115 ಜನ್ಮದಿನಾಚರಣೆ ಆಚರಿಸುವ ಮೂಲಕ ಸತ್ಯಾಗ್ರಹ ಆರಂಭಗೊಂಡಿತು. ಮೂರು ತಲೆಮಾರುಗಳಿಂದ ಸಾಗುವಳಿ ಮಾಡುವ ಭೂಮಿಗೆ ಪಟ್ಟ ಕೊಡದ ಸರ್ಕಾರದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದರು. ಶಾಸಕರು ಹೋರಾಟದ ಸ್ಥಳಕ್ಕೆ ಬರದಿದ್ದಾರೆ ಘೆರಾವ್ ಮಾಡುವುದಾಗಿ ಹೋರಾಟ ನಿರತ ಸಂಗಾತಿಗಳು ಘೋಷಣೆ ಕೂಗಿ ಅಧಿಕಾರಿಗಳಿಗೆ ಒತ್ತಾಯಿಸಿದರು. ಮದ್ಯಾಹ್ನ 3 ಗಂಟೆಗೆ ಮಸ್ಕಿ ಶಾಸಕ ಆರ್. ಬಸನಗೌಡ ಮತ್ತು ತಹಶೀಲ್ದಾರು ಧರಣಿ ಸ್ಥಳಕ್ಕೆ ಬಂದರು. ಶಾಸಕರ ಮತ್ತು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು, ಭೂ ಮಂಜೂರಾತಿ ಕೊಡೋದಕ್ಕೆ ಏನು ಸಮಸ್ಯೆ ಎಂದು ಪ್ರಶ್ನೆ ಮಾಡಿದರು. ರೈತರ ಮತ್ತು ಬಡವರ ಪರವಾಗಿ ಕೆಲಸ ಮಾಡಲು ಸಾಧ್ಯವಾಗದಿದ್ದರೆ ಅಧಿಕಾರದಲ್ಲಿ ಮುಂದುವರೆಯಲು ನಿಮಗೆ ಯೋಗ್ಯತೆ ಇಲ್ಲವೆಂದರು. ಜನವರಿ 1 ರಂದು ಭೂ ಮಂಜೂರಾತಿ ಕಮಿಟಿ ರಚನೆಯಾಗಿದೆ ಮತ್ತು ದಿನಾಂಕ 09-03-2022 ರಂದು ತಹಶೀಲ್ದಾರ್ ರಿಗೆ ಆದೇಶ ಪತ್ರ ತಲುಪಿದೆ. ಆದರೆ ತಹಶೀಲ್ದಾರರು ತಮಗೆ ಅಧಿಕೃತ ಆದೇಶ ಬಂದಿಲ್ಲವೆನ್ನುತ್ತಿದ್ದಾರೆ. ಈ ಕುರಿತು ಶಾಸಕರಿಗೆ ಪ್ರಶ್ನೆ ಮಾಡಿದರೆ, ಮಾಜಿ ಶಾಸಕರಾದ ಪ್ರತಾಪ್ ಪಾಟಿಲ್ ರು ಕಮಿಟಿ ರಚನೆಗೆ ಅಡ್ಡಗಾಲು ಹಾಕಿದ್ದಾರೆಂದು ಅಸಹಾಯಕತೆ ವ್ಯಕ್ತಪಡಿಸಿದರು.
ಈ ವಿಷಯವನ್ನು ವಿಧಾನ ಸಭೆಯಲ್ಲಿ ಪ್ರಶ್ನೆ ಮಾಡಬಹುದಾಗಿತ್ತು ಎಂದರೆ, ಸರಿಯಾದ ಉತ್ತರ ಸಿಗಲಿಲ್ಲ. ಅಭಿವೃದ್ಧಿ ಹೆಸರಿನ ಕೋಟಿ ಕೋಟಿ ಕಾಮಗಾರಿಯ ವಿಷಯದಲ್ಲಿ ಹೆಚ್ಚಿನ ಗಮನ ಕೊಡುತ್ತಿರಿ, ರೈತರ ಮತ್ತು ಬಡವರ ಸಮಸ್ಯೆ ಸ್ಪಂದಿಸುತ್ತಿಲ್ಲವೆಂದು ಕಾರ್ಯಕರ್ತರು ನೇರ ಆರೋಪ ಮಾಡಿದಿರು. ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾಡಳಿತ ಜಿಲ್ಲೆಯ ಜನರ ಭೂ ಸಮಸ್ಯೆಯನ್ನು ಶಿಘ್ರಗತಿಯಲ್ಲಿ ಪರಿಹರಿಸಲು ಮುಂದಾಗದಿದ್ದರೆ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ಕೊಡಲಾಯಿತು.
ವರದಿ – ಸಂಪಾದಕೀಯ