ಜಲಜೀವನ್ ಮಿಷನ್ ನಿಯಮ ಉಲ್ಲಂಘನೆ ಒತ್ತಾಯದಿಂದ ಜೆಜೆ ಮಿಷನ್ ಅಳವಡಿಕೆ, ಕೈಬಿಡಲು:ಗ್ರಾಪಂ ಸದಸ್ಯರ ಒಕ್ಕೂಟ ಆಗ್ರಹ.
ಕೊಟ್ಟೂರು : ಕೇಂದ್ರ ಮತ್ತು ರಾಜ್ಯ ಸರ್ಕಾರದ ಜಲಜೀವನ್ ಮಿಷನ್ ಯೋಜನೆ ಅನುಷ್ಠಾನ ಗೊಳಿಸುವಲ್ಲಿ,ವಿಜಯನಗರ ಜಿಲ್ಲಾ ಮತ್ತು ತಾಪಂ ಅಧಿಕಾರಿಗಳು ನಿಯಮಗಳನ್ನು ಗಾಳಿಗೆ ತೂರಿ ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಒತ್ತಾಯ ಪೂರ್ವಕವಾಗಿ ಜೆಜೆ ಮಿಷನ್ ಅಳವಡಿಕೆಗೆ ಮುಂದಾಗಿದ್ದಾರೆ ಈ ನಡೆಯನ್ನು ಶೀಘ್ರ ಕೈಬಿಡಬೇಕೆಂದು ಆಗ್ರಹಿಸಿ ಕ.ರಾ.ಗ್ರಾಮ ಪಂಚಾಯತಿ ಸದಸ್ಯರ ಒಕ್ಕೂಟ, ಕೊಟ್ಟೂರು ತಾಲೂಕು ಘಟಕದ ಪದಾಧಿಕಾರಿಗಳು, ಸದಸ್ಯರು ಪ್ರತಿಭಟನೆ ಎಚ್ಚರಿಕೆ ನೀಡಿದ್ದರು. ಬುಧವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗ್ರಾಪಂ ಸದಸ್ಯರ ಒಕ್ಕೂಟ ಕೊಟ್ಟೂರು ತಾಲೂಕು ಘಟಕ ಪದಾಧಿಕಾರಿಗಳು ಮತ್ತು ಸದಸ್ಯರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಮೊದಲು ಗ್ರಾಮ ಸಭೆ ನಡೆಸಿ ಸರ್ವರ ಅನುಮತಿ ಮೇರಿಗೆ ಜೆಜೆ ಮಿಷನ್ ಅನುಷ್ಠಾನ ಗೊಳಿಸಬೇಕು,ಸಭೆಯಲ್ಲಿ ತಿರಸ್ಕರಿಸಿದರೆ ಅಳವಡಿಸುವಂತಿಲ್ಲ ಇದು ಜೆಜೆ ಮಿಷನ್ ನಿಯಮ. ಆದರೆ ಇಲ್ಲಿ ಈ ನಿಯಮ ಪಾಲನೆ ಆಗದೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹೊಸೂರು ಗ್ರಾಮದಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಬಹುಗ್ರಾಮ ಶುದ್ಧ ಕುಡಿಯುವ ನೀರಿನ ಯೋಜನೆ ಒಂದೇ ಸಾಕು, ಜೆಜೆ ಮಿಷನ್ ಹೊಸ ಯೋಜನೆ ಬೇಡವೆಂದು ಜನವರಿ-28 ರಂದು ಗ್ರಾಮ ಸಭೆಯಲ್ಲಿ ಚರ್ಚಿಸಿ ಗ್ರಾಮಸ್ಥರು ತಿರಸ್ಕರಿಸಿರುತ್ತಾರೆ. ಸಭೆಯಲ್ಲಿ ತಿರಸ್ಕರಿಸಿ ನಡಾವಳಿ ಮಾಡಿರುವ ದಾಖಲೆಗಳನ್ನು ಜಿಪಂ ಮುಖ್ಯ ಸಿಒ ಮತ್ತು ತಾಪಂ ಇಒ ಹಾಗೂ ಅಧ್ಯಕ್ಷರು ಸುರಭಿ ಸಮಗ್ರ ಮಾನವ ಕಲ್ಯಾಣ ಅಭಿವೃದ್ಧಿ ಸಂಸ್ಥೆ ಕೂಡ್ಲಿಗಿ ಇವರಿಗೆ ಮಾಹಿತಿ ನೀಡಿದ್ದರು, ಇದಕ್ಕೆ ಸ್ಪಂದಿಸದ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಕ್ರಿಯಾಯೋಜನೆ ತಯಾರಿಸಲು ಮುಂದಾಗಿದ್ದಾರೆ. ಇಲ್ಲಿನ ಜಿಲ್ಲಾ ಮತ್ತು ತಾಪಂ ಅಧಿಕಾರಿಗಳು ಯಾರದೋ ಒತ್ತಡಕ್ಕೆ ಮಣಿದು ಹೊಸೂರು ಗ್ರಾಮದಲ್ಲಿ ಮತ್ತು ಇತರೆ ಕಡೆ ಒತ್ತಾಯ ಪೂರ್ವಕವಾಗಿ ಜೆಜೆ ಮಿಷನ್ ಅಳವಡಿಕೆಗೆ ಸೂಚಿಸಿದ್ದಾರೆ, ಜೆಜೆ ಮಿಷನ್ ಅಳವಡಿಸಿ ಕೊಳ್ಳದಿದ್ದರೆ,ಕುಡಿಯುವ ನೀರಿಗೆ ಮತ್ತು ಇನ್ನಿತರ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಬಿಲ್ ಮಾಡದೆ ಅನುದಾನ ತಡೆಹಿಡಿಯಲಾಗುತ್ತೆ ಎಂದು ಪಿಡಿಒಗಳಿಂದ ಬೆದರಿಕೆ ಹಾಕಿಸುತ್ತಿದ್ದಾರೆ ಎಂದು ದೂರಿದರು. ಇವೆಲ್ಲವನ್ನೂ ನೋಡುತ್ತಿದ್ದರೆ ಇಲ್ಲಿ ಅಧಿಕಾರಿಗಳ ತೀರ್ಮಾನವೇ ಅಂತಿಮ, ಗ್ರಾಮಸಭೆ ಮತ್ತು ಗ್ರಾಮಸ್ಥರ ತೀರ್ಮಾನ ಹಾಗೂ ಸದಸ್ಯರ ಮಾತಿಗೆ ಕವಡೆ ಖಾಸಿನ ಕಿಮ್ಮತ್ತಿಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಮಂಜುನಾಥ, ಹೆಚ್.ಸೋಮಶೇಖರ್ ಗೌಡ್ರ,ಎ.ಬಿ ತೇಜಸ್ ಹಾಗೂ ಸರಸ.ಬಿ ಮಠದ,ಬಿ.ಮಲ್ಲೇಶ್ ಎಸ್.ಅಂಜಿನಪ್ಪ ಎಸ್.ಜಿ ಕೊಟ್ರೇಶ್ ಸೇರಿದಂತೆ ಇತರರು ಇದ್ದರು. ಜನರ ತೆರಿಗೆ ಹಣವನ್ನು ಯೋಜನೆ ಹೆಸರಲ್ಲಿ ಪೋಲು ಮಾಡುವುದು ಬಿಟ್ಟು ಬೇರಾವ ಸಾಧನೆಯಾಗು ವುದಿಲ್ಲ ಎಂಬುದು ಗ್ರಾಮಸ್ಥರ ದೂರಾಗಿದೆ,ಅಲ್ಲದೆ ಈಗಾಗಲೇ ಸಬ್ಸಿಡಿ ಗ್ಯಾಸ್ ಯೋಜನೆ ಮತ್ತು ಸ್ವಚ್ಛ ಭಾರತ ಯೋಜನೆಯಿಂದ ಗ್ರಾಮೀಣ ಜನರಿಗೆ ಆರ್ಥಿಕ ಹೊರೆ ಹೆಚ್ಚಾಗಿದ್ದು, ಇದರ ಜೊತೆಗೆ ಜೆಜೆ ಮಿಷನ್ ಅಳವಡಿಸಿ ಮೀಟರ್ ಅಳವಡಿಸಿದರೆ ಇನ್ನೂ ಆರ್ಥಿಕ ಹೊರೆ ಜನರಿಗೆ ಬೀಳಲಿದೆ. ಕ.ರಾ.ಗ್ರಾಪಂ ಸದಸ್ಯರ ಒಕ್ಕೂಟ ಕೊಟ್ಟೂರು ತಾಲೂಕು ಘಟಕದ ಪದಾಧಿಕಾರಿಗಳು ಭಾಗಿಯಾಗಿದ್ದರು.
ವರದಿ – ಬಾಲರಾಜ ಯಾದವ್