ಪೂಜ್ಯ ಡಾ.ಬಸವಲಿಂಗ ಪಟ್ಟದೇವರನ್ನು ಕಡೆಗಣಿಸಿದ್ದು ಖಂಡನೀಯ : ಚಂದ್ರಶೇಖರ ನಾರಾಯಣಪೇಟ.
ಬಸವಕಲ್ಯಾಣ ಕ್ಷೇತ್ರ ಸಮಿತಿ, ಬಸವಕಲ್ಯಾಣ ಮತ್ತು ವಿಕಾಸ್ ಅಕಾಡೆಮಿ ಕಲಬುರಗಿ ಯವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಬಸವಕಲ್ಯಾಣ (ಐದು ವರ್ಷದ ಯೋಜನೆ) ಕರ್ನಾಟಕ ಯಾತ್ರಾ ಪರ್ವ ಕಾರ್ಯಕ್ರಮ ದಿನಾಂಕ 09-04-2022 ರಂದು ಬಸವಕಲ್ಯಾಣದಲ್ಲಿ ಜರುಗಲಿದೆ.ಆದರೆ ಈ ಕಾರ್ಯಕ್ರಮದ ಚುಟುವಟಿಕೆಗಳಿಂದ ಪೂಜ್ಯ ಡಾ.ಬಸವಲಿಂಗ ಪಟ್ಟದೇವರನ್ನು ದೂರ ಇಟ್ಟಿರುವುದು ಇದು ಬಸವ ಅಭಿಮಾನಿಗಳಿಗೆ ಮಾಡಿರುವ ಬಹುದೊಡ್ಡ ಅಪಮಾನ ಮಾಡಿ,ಕಡೆಗಣಿಸಿದ್ದು ಖಂಡನೀಯ ಎಂದು ಸಮಾಜಿಕ ಕಾರ್ಯಕರ್ತ, ಬಸವಾಭಿಮಾನಿ ಚಂದ್ರಶೇಖರ ನಾರಾಯಣಪೇಟರವರು ಹೇಳಿದ್ದಾರೆ. ಅವರು ಪತ್ರಿಕಾ ಪ್ರಕಟಣೆಯಲ್ಲಿ ನೀಡಿ, ಬಸವಕಲ್ಯಾಣವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ ಪೂಜ್ಯ ಡಾ.ಬಸವಲಿಂಗ ಪಟ್ಟದೇವರಿಗೆ ಸಲ್ಲುತ್ತದೆ. ಅನ್ಯ,ದೂರದ ಮುಖಂಡರಿಗೆ, ಸ್ವಾಮಿಜಿಗಳಿಗೆ ಖಂಡಿತಾ ಸಲ್ಲುವುದಿಲ್ಲ. ಬಸವತತ್ವವನ್ನು ಅತ್ಯಂತ ಸೇವಾ ಮನೋಭಾವದಿಂದ ಪ್ರಚಾರ ಮಾಡುತ್ತಿರುವ ಪೂಜ್ಯ ಡಾಕ್ಟರ್ ಬಸವಲಿಂಗ ಪಟ್ಟದೇವರನ್ನು ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಹೆಸರನ್ನು ಹಾಕದೇ ಇರುವುದು ಅತ್ಯಂತ ನೋವಿನ ಸಂಗತಿ. ಇದನ್ನು ನಾಡಿನ ಬಸವಾಭಿಮಾನಿಗಳ ಪರವಾಗಿ ಉಗ್ರವಾಗಿ ಖಂಡಿಸುತ್ತೇವೆ.ಪೂಜ್ಯ ಡಾ. ಬಸವಲಿಂಗ ಪಟ್ಟದೇವರು ತಮ್ಮ ಇಡೀ ಬದುಕು ಅನುಭವ ಮಂಟಪದ ಶ್ರೇಯಸ್ಸಿಗಾಗಿ,ಉನ್ನತಿಗಾಗಿ ಮಿಸಲಿಟ್ಟು ಹಗಲಿರುಳು ದುಡಿಯುತ್ತಿದ್ದಾರೆ. ಇಂಥ ನಿಸ್ವಾರ್ಥ ಸಂತರನ್ನು ಬಿಟ್ಟು ಆಮಂತ್ರಣ ಪತ್ರಿಕೆ ಮುದ್ರಿಸಿದ್ದು ಖಂಡಿತಾ ಶೋಭೆ ತರುವ ಕೆಲಸವಲ್ಲ. ಕೆಲ ವೈದಿಕರ ಕೈಗೊಂಬೆಯಾಗಿ ಮಾನ್ಯ ಬಸವರಾಜ ಪಾಟೀಲ್ ಸೇಡಂ ಜಿಯವರು ಕೆಲಸ ಮಾಡುತ್ತಿರುವುದು ಸರಿಯಲ್ಲ. ಇದು ಬಸವಾಭಿಮಾನಿಗಳಿಗೆ ಮಾಡುತ್ತಿರುವ ಬಹು ದೊಡ್ಡ ಅನ್ಯಾಯವಾಗಿದೆ. ಅಪ್ಪಟ ಬಸವ ಭಕ್ತರ, ಬಸವ ಅಭಿಮಾನಿಗಳ ಅನುಭವ ಮಂಟಪ ಇದಾಗಿದೆ, ಇಲ್ಲಿ ವೈದಿಕರಿಗೆ ಏನು ಕೆಲಸ ? ಇಲ್ಲೇನಿದ್ದರೂ ಜಾತಿ ಮತ ಪಂಥಗಳನ್ನು ಮೀರಿ,ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸಿ, ಬಸವ ತತ್ವವನ್ನು ಅಪ್ಪಿಕೊಂಡಿರುವ ಬಸವ ಅನುಯಾಯಿಗಳಿಗೆ ಮಾತ್ರ ಇಲ್ಲಿ ಅವಕಾಶ ಮತ್ತು ಹಕ್ಕು ಇದೆ ಎನ್ನುವುದು ಯಾರು ಮರೆಯಬಾರದು. ಈ ಕಾರ್ಯಕ್ರಮಕ್ಕೆ ಉದ್ದೇಶಪೂರ್ವಕವಾಗಿ ಬಸವತತ್ವ ಸ್ವಾಮಿಗಳನ್ನು ದೂರ ಇಟ್ಟು, ಬಸವ ತತ್ವವನ್ನು ತುಳಿಯುವ ಕೆಲಸಕ್ಕೆ ಕೈ ಹಾಕಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಈಗಲಾದರೂ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಪೂಜ್ಯ ಬಸವಲಿಂಗ ಪಟ್ಟದೇವರನ್ನು ಗೌರವದಿಂದ ಕಾಣಬೇಕು,ಗೌರವವನ್ನು ಕೊಡುವುದು ಕಲಿಯಬೇಕು. ಇಲ್ಲವಾದಲ್ಲಿ ಕಲ್ಯಾಣ ಕರ್ನಾಟಕ ತುಂಬೆಲ್ಲ ಉಗ್ರವಾಗಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಚಂದ್ರಶೇಖರ ನಾರಾಯಣಪೇಟ ರವರು ತಿಳಿಸಿದ್ದಾರೆ.
ವರದಿ – ಸಂಗಮೇಶ ಎನ್ ಜವಾದಿ