ಲೇಖನ : ಸಮಾನತೆಯ ಹರಿಕಾರ ಶಿವಮೂರ್ತಿ ಮುರುಘಾ ಶರಣರು.

Spread the love

ಲೇಖನ : ಸಮಾನತೆಯ ಹರಿಕಾರ ಶಿವಮೂರ್ತಿ ಮುರುಘಾ ಶರಣರು.

ವಿಶ್ವ ಕಂಡ ಸರಳತೆಯ ಸೌಜನ್ಯ ಮೂರ್ತಿ,  ಸಮಾನತೆಯ ಹರಿಕಾರ, ಆಡಂಬರದ ಜೀವನಕ್ಕೆ ತೀಲಾಂಜಲಿ ಹೇಳಿ, ವೈಚಾರಿಕ ಚಿಂತನೆಗೆ ಮುನ್ನುಡಿ ಬರೆದ ಕರುನಾಡಿನ ಹೆಮ್ಮೆಯ ಶರಣರೆಂದರೆ ಅದು ಚಿತ್ರದುರ್ಗದ ಮುರುಘಾಮಠದ ಪೂಜ್ಯ ಶಿವಮೂರ್ತಿ ಶರಣರು ಎಂದು ಹೇಳುತ್ತೇವೆ. ಮುರುಘಾ ಮಠದ ಪೂಜ್ಯ ಶಿವಮೂರ್ತಿ ಶರಣರು ವಿಚಾರ ಕ್ರಾಂತಿಗೆ ಹೆಸರು ಮಾಡಿದವರು. ಗೊಡ್ಡು ಸಂಪ್ರದಾಯಗಳ ವಿರುದ್ಧ ಸದಾ ಹೋರಾಟ ಮಾಡುತ್ತಿರುವವರು , ಸಾಮಾಜಿಕ ಅನಿಷ್ಟಗಳ ಪದ್ಧತಿಗಳ ವಿರುದ್ಧ, ಅಸ್ಪೃಶ್ಯತೆಯಂಥ ಸಾಮಾಜಿಕ ಪಿಡುಗಿನ ವಿರುದ್ಧ ಸದಾಕಾಲ ಸಮರವನ್ನೇ ಸಾರಿ, ಜನಸಾಮಾನ್ಯರಿಗೆ ವೈಜ್ಞಾನಿಕ – ವೈಚಾರಿಕ ತಿಳುವಳಿಕೆಗಳ ಬಗ್ಗೆ ಅರಿವು ಮೂಡಿಸಲು ಸತತವಾಗಿ ಪರಿಶ್ರಮಿಸುತ್ತಿದ್ದಾರೆ. ಸಾಂಪ್ರದಾಯಿಕ ಆಚರಣೆ ನಿಲ್ಲಿಸಿ, ವೈಚಾರಿಕತೆ ಆಚರಣೆಗೆ ನಾಂದಿ ಹಾಡಿ, ಜನಮಾನಸದಲ್ಲಿ ನೆಲೆಯೂರಿದ್ದಾರೆ. ಇವರ ಸಮಾಜಿಕ ಚಿಂತನೆಗಳು ಇಂದಿನ ಸಮಾಜಕ್ಕೆ ಅವಶ್ಯಕ, ಪ್ರಸ್ತುತ ಮತ್ತು ದಾರಿದೀಪವಾಗಿವೆ. ವೈಚಾರಿಕ ಕ್ರಾಂತಿಯನ್ನು ಮೊಟ್ಟಮೊದಲ ಬಾರಿಗೆ ಜಾಗತಿಕ ಪ್ರಪಂಚಕ್ಕೆ ಪರಿಚಯಿಸಿ, ಪ್ರತಿಪಾದಿಸಿ,ಜಾರಿಗೆ ತಂದವರು 12ನೇ ಶತಮಾನದ ಬಸವಾದಿ ಪ್ರಮಥರು. ಇವರ ದಾರಿಯಲ್ಲಿ ಇಂದು ಸಾಗುತ್ತಿರುವ ಪರಮಪೂಜ್ಯ ಶಿವಮೂರ್ತಿ ಶರಣರ ನಿಸ್ವಾರ್ಥ ಸೇವಾ ಕಾರ್ಯಗಳು ಅನನ್ಯವಾಗಿವೆ. ಇವರ ಸಮಾನತೆಯ ವಿಚಾರ ಕ್ರಾಂತಿ ಇಂದಿನ ಆಧುನಿಕ ಸಮಾಜಕ್ಕೆ ಪೂರಕವಾಗಿವೆ. ಸಮಾಜದ ಹತ್ತು ಹಲವು ಸಮಸ್ಯೆಗಳಿಗೆ ರಾಮಬಾಣವಾಗಿವೆ. ಇನ್ನು ಸಮಾಜವನ್ನು  ಮುಖ್ಯವಾಹಿನಿಗೆ ಕರೆತರಬೇಕೆಂದು ಹಗಲಿರುಳು ಪರಿಶ್ರಮ ಪಡುತ್ತಿರುವ ಶಿವಮೂರ್ತಿ ಶರಣರ ಅಂತಃಕರಣದ ಕಳಕಳಿ ಬಹಳ ದೊಡ್ಡದು ಎಂದರೆ ತಪ್ಪಾಗಲಾರದು. ಮನುಷ್ಯನನ್ನು ಮನುಷ್ಯನಂತೆ ಕಾಣುವ ಸಂಸ್ಕೃತಿ  ನಮ್ಮೆಲ್ಲರಲ್ಲಿ ಮೂಡಬೇಕು. ಅಂದಾಗಲೇ ಮಾತ್ರ ನಾವು ಮನುಷ್ಯನಾಗಿದ್ದುಕ್ಕೂ ಸಾರ್ಥಕವಾಗುತ್ತದೆ ಎಂಬ ಅವರ ನೀತಿಯ ಮಾತುಗಳು ಜನರನ್ನು ಕಣ್ಣುತೆರೆಸುತ್ತವೆ. ಶರಣರ ಬದುಕು ನಿಂತಿರುವುದು ಕಾಯಕವೇ ಕೈಲಾಸ ಎಂಬ ತತ್ವದ ಮೇಲೆ, ಇದನ್ನು ಗಂಭೀರವಾಗಿ ಪರಿಗಣಿಸಿ, ಕಾಯಕಕ್ಕೆ  ಹೆಚ್ಚು ಒತ್ತು ಕೊಟ್ಟು, ಉನ್ನತ ಸ್ಥಾನವನ್ನು ನೀಡಿ, ದಯವೇ ಧರ್ಮದ  ಮೂಲ ಎಂದು ಎಲ್ಲರನ್ನೂ ಒಪ್ಪಿಕೊಳ್ಳುವ ಅನನ್ಯ ಸಂಸ್ಕೃತಿ  ಪರಿಚಯಿಸುವ ಕೆಲಸವನ್ನು ಸದ್ದುಗದ್ದಲವಿಲ್ಲದೆ ಶಿವಮೂರ್ತಿ ಶರಣರು ಪ್ರಮಾಣಿಕವಾಗಿ ಮಾಡುತ್ತಿದ್ದಾರೆ. ಬಸವಣ್ಣನವರ ಸಮಾನತೆಯ ಪ್ರಗತಿಪರ ಚಿಂತನೆಗಳು ಇಂದಿನ ನಾಗರಿಕ ಸಮಾಜಕ್ಕೆ ಪ್ರಸ್ತುತವಾಗಿವೆಂದು ಹೇಳುತ್ತಾರೆ. 12 ನೇ ಶತಮಾನದಲ್ಲಿ ಇದ್ದ ಅಸಮಾನತೆ, ಲಿಂಗ ಬೇಧ, ಮೌಢ್ಯಗಳು ಇಂದಿಗೂ ಪ್ರಸ್ತುತವಾಗಿರುವುದು ಕಂಡು ಶರಣರು ಬಹಳ ಮರುಗುತ್ತಿದ್ದಾರೆ.ಎಲ್ಲರನ್ನೂ ಸಮಾನವಾಗಿ ಕಾಣುವ, ಸರ್ವರನ್ನೂ ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರಣೆ ನೀಡುವ ಧರ್ಮ ಶರಣ ಧರ್ಮವಾಗಿದೆ ಎಂದು ಯಾವಾಗಲೂ ತಿಳಿಸುತ್ತಾರೆ. ಅದೇ ರೀತಿ ಶರಣರಲ್ಲಿ ಎಲ್ಲಾ ಜಾತಿಯ ಜನರು ಇದ್ದರು. ಮೇಲ್ವರ್ಗದ ಜನರು ಹಾಗು ಕೆಳವರ್ಗದ ಜನರು ಎಲ್ಲರೂ ಒಟ್ಟಿಗೆ ಸೇರಿ ಸಾಮಾಜಿಕ ಸಮಾನತೆಗಾಗಿ ಹೋರಾಡಿದ್ದು ನಾವ್ಯಾರೂ ಮರೆಯಬಾರದೆಂದು ತಿಳಿಸುತ್ತಾರೆ.  ಅಂತೆಯೇ 12ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣನವರು. ಶರಣ ಧರ್ಮವು ಸ್ಥಾಪನೆ ಮಾಡಿ, ವೈಚಾರಿಕ ಹಾಗೂ ಸಾಮಾಜಿಕ ಕ್ರಾಂತಿಗೆ ನಾಂದಿಹಾಡಿದವರು. ಇವರ ಮಾನವೀಯ ಮೌಲ್ಯಾಧಾರಿತ ಕಳಕಳಿಯ ಮೂಲಕ ಪ್ರತಿಯೊಬ್ಬ ಶರಣರು ವಚನ ಚಳವಳಿಯಲ್ಲಿ ಭಾಗಿಯಾಗಿ ಸಮಾನತೆಯನ್ನು ಪ್ರತಿಪಾದಿಸಿದ್ದಾರೆ. ಹೀಗೆ ಬಸವಾದಿ ಶರಣರು ಬದುಕಿ ಹೋದ ರೀತಿಯೇ ವಿಶಿಷ್ಟವಾದುದು. ಅವರ ವಿಚಾರಗಳು, ಜೀವನ ಶೈಲಿ ಎಲ್ಲವೂ ಸರಳವಾಗಿದ್ದವು. ಜೀವನದ ಎಲ್ಲಾ ಮಗ್ಗಲಿನ ಸಮಸ್ಯೆಗೆ ಸ್ಪಂದಿಸಿ, ಪರಿಹಾರ ಕಂಡುಕೊಂಡ ಅವರು, ತಮ್ಮ ದೈನಂದಿನ ಬದುಕಿನಲ್ಲೂ ಶುಚಿತ್ವ ಕಾಯ್ದುಕೊಂಡವರು. ಅತ್ಯಂತ ಕ್ಲಿಷ್ಟಮಯವಾದ ಸಾಮಾಜಿಕ ಧಾರ್ಮಿಕ ಅಧ್ಯಾತ್ಮಿಕ ಜೀವನವನ್ನು ಸರಳಗೊಳಿಸಿದ ಕೀರ್ತಿ ಶರಣರದು. ಕಾಯಕವೇ ಕೈಲಾಸ ಎಂಬ ನೀತಿಯನ್ನು ಅನುಷ್ಠಾನಕ್ಕೆ ತಂದವರು. ಮಾನವತೆಯ ಮೂಲಕ ಮನುಷ್ಯರೆಲ್ಲರೂ ಒಂದು ಎಂಬ ಮಹಾಸಿದ್ಧಿಯನ್ನು ಸಾಧಿಸಿ, ಜಾರಿಗೆ ತಂದವರು ಶರಣರು. ಅಂದು ಶರಣರು ನೀಡಿದ ಉನ್ನತ ವಿಚಾರ, ಆದರ್ಶಗಳ ತತ್ವ ಸಿದ್ಧಾಂತಗಳು ಸರ್ವಕಾಲಕ್ಕೂ ಸತ್ಯ ಹಾಗೂ ಪ್ರಸ್ತುತವಾಗಿವೆ.  ಶಿವಶರಣರು ನಿತ್ಯ ಸತ್ಯ ತತ್ವದ

ಶೋಧಕರಾಗಿದವರು. ಅವರು ಕಂಡ ತಾತ್ವಿಕ ನಿಲುವನ್ನು ಇನ್ನೊಬ್ಬರಿಗೂ ಉಣಬಡಿಸಿದವರು. ಪ್ರಸಾದವಿದ್ದಲ್ಲಿ ಎಂಜಲವಿಲ್ಲ, ಜಾತಿಯಿಲ್ಲ, ಭೇದವಿಲ್ಲ. ಅದು ಸಮತೆ ಸಾಮರಸ್ಯ ಕಂಡುಕೊಳ್ಳುವ ಸೂತ್ರ. ಕಾಯಕ, ದಾಸೋಹ, ಪ್ರಸಾದ ಸೇರಿದಂತೆ  ಸಕಲ ಜೀವತ್ಮಾರಿಗು ಶ್ರೇಯಸ್ಸು ಬಯಸಿದ ಮೇಧಾವಿಗಳು ಶರಣರು. ಇವು ಇವರು ಜಗತ್ತಿಗೆ ನೀಡಿದ ಉತ್ಕೃಷ್ಟ ವಿಚಾರಗಳಾಗಿವೆ ಬಂಧುಗಳೆ. ಇನ್ನು ಶರಣರ ದೃಷ್ಟಿಯಲ್ಲಿ ಮಾನವನ ಅಸ್ತಿತ್ವದ ಕೇಂದ್ರ ಬಿಂದು ಜೀವನವೇ ಹೊರತು, ದೇವರಲ್ಲ ಎಂಬುದು ಎಂದು ಘಂಟಾಘೋಷವಾಗಿ ಹೇಳಿದ್ದಾರೆ. ಹೀಗೆ ವಚನಗಳು ಶರಣರ ಜೀವನಕ್ಕೆ  ಹಿಡಿದ ಕೈಗನ್ನಡಿ, ಶರಣರ ಅನುಭಾವದ ಅಕ್ಷರರೂಪ. ಶರಣ ಪಥದಲ್ಲಿ ಸಾಗ ಬಯಸುವ ಪ್ರತಿಯೊಬ್ಬ ಪಥಿಕನ ದಾರಿ ದೀಪಗಳು. ಮೌಢ್ಯದ ಕೊಳೆಯನ್ನು ತೊಳೆಯುವ, ಸಾಧನೆಗಳು ಎಂದರೆ ತಪ್ಪಾಗಲಿಕ್ಕಿಲ್ಲ. ಕಾರಣ ವಚನ ಸಾಹಿತ್ಯ ಇಂದಿನ ಆಧುನಿಕ ಸಮಾಜಕ್ಕೆ ಬಹಳ ಉಪಯುಕ್ತ ಯವಾಗಿದೆ. ಇದನ್ನು ನಾವೆಲ್ಲರೂ ಅರಿತುಕೊಂಡು ಸಾಗಬೇಕಾಗಿದೆ ಅಷ್ಟೇ,  ದ್ವೇಷ ಮದ ಮತ್ಸರಗಳಿಗೆ ತಿಲಾಂಜಲಿ ಹೇಳಿ, ಸ್ನೇಹಕ್ಕೆ ಆಹ್ವಾನ ನೀಡಿ, ಮಾನವರೆಲ್ಲರೂ ಸಮಾನರು, ಒಂದೇ ಎಂಬ ನೀತಿಯಡಿಯಲ್ಲಿ ನಮ್ಮೆಲ್ಲರ ಬದುಕು ಸಾಗುವುದು ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಶಿವಮೂರ್ತಿ ಶರಣರು ಸದಾಕಾಲ ಜನಸಾಮಾನ್ಯರ ನೋವಿಗೆ ಮಿಡಿವ ಕೆಲಸ ಮಾಡುತ್ತಾ, ನಮ್ಮೆಲ್ಲರ ಕಲ್ಯಾಣವನ್ನು ಬಯಸಿ, ಅವರ ಆಸೆ-ಆಕಾಂಕ್ಷೆಗಳನ್ನು ಬದಿಗೊತ್ತಿ, ಸಮಾಜದ ಉನ್ನತಿಗಾಗಿ ದುಡಿಯುತ್ತಿದ್ದಾರೆ. ಹೀಗಾಗಿ ಶಿವಮೂರ್ತಿ ಶರಣರ  ಜನ್ಮದಿನವಾದ ಏಪ್ರಿಲ್ 11ರ ದಿನವನ್ನು ಸಮಾನತೆಯ ದಿನವನ್ನಾಗಿ ಆಚರಣೆ ಮಾಡೋಣ, ಮಾಡುವ ಮೂಲಕ ಬಸವಾದಿ ಶರಣರ ಹಾಗೂ ಶಿವಮೂರ್ತಿ ಮುರುಘಾ ಶರಣರ ವೈಚಾರಿಕ ಚಿಂತನೆಗಳು ಪ್ರತಿಯೊಬ್ಬರಿಗೂ ತಲುಪುವಂತೆ ನೋಡಿಕೊಳ್ಳೋಣ.

ಕೊನೆಯ ಮಾತು : ಬಸವಣ್ಣನವರು ಕಂಡ ಆದರ್ಶ ಕಲ್ಪನೆಯ ಸಮಾಸಮಾಜದ ಕನಸು ಇನ್ನೂ ನಿರ್ಮಾಣವಾಗದಿರುವುದಕ್ಕೆ ಶಿವಮೂರ್ತಿ ಶರಣರು ಬಹಳ ಬೇಸರ ವ್ಯಕ್ತಪಡಿಸುತ್ತಾರೆ. ಅಪೂರ್ಣ ಕೆಲಸವನ್ನು ಪೂರ್ಣ ಮಾಡುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಒಟ್ಟಿನಲ್ಲಿ ಹೇಳಬೇಕೆಂದರೆ ಜನಸಾಮಾನ್ಯರ ಸ್ಪೂರ್ತಿಯಾಗಿ, ಮಮತೆಯ ಸ್ನೇಹಜೀವಿಯಾಗಿ, ನುಡಿದಂತೆ ನಡೆದು, ಬಸವಾದಿ ಶರಣರ  ಸದಾಶಯಗಳ ಚಿಂತನೆಗಳು ಸಮಾಜದಲ್ಲಿ ಬಿತ್ತುತ್ತಿದ್ದಾರೆ.ಜೊತೆಗೆ ಮೌಢ್ಯಗಳ ವಿರುದ್ದದ ಹೋರಾಟ, ದೀನದಲಿತರ ಮೇಲಿನ ಅವರ ಪ್ರೀತಿ ಅನನ್ಯ, ಹೀಗೆ ಇವರ ಮಾನವೀಯತೆಯ ಅನುಭವದ ಬುತ್ತಿ ಸಮಾಜಕ್ಕೆ ಸಿಗಲಿ ಎಂಬುದೇ ಲಕ್ಷಾಂತರ ಅಭಿಮಾನಿಗಳ ಹೆಬ್ಬಯಕೆ.

ಲೇಖಕರುಸಂಗಮೇಶ ಎನ್ ಜವಾದಿ.ಬೀದರ ಜಿಲ್ಲೆ.

Leave a Reply

Your email address will not be published. Required fields are marked *