ತಾವರಗೇರಾ ಪಟ್ಟಣದಲ್ಲಿ ಅಂಬೇಡ್ಕರ್ ಜಯಂತಿ ಆಚರಿಸದ ಅಧಿಕಾರಿ ಅಮಾನತಿಗೆ ಆಗ್ರಹ,,,,,,
ಡಾ ಬಿ ಆರ್ ಅಂಬೇಡ್ಕರ್ ಜಯಂತಿ ಆಚರಿಸದ ಸಮೂಹ ಸಂಪನ್ಮೂಲ ಅಧಿಕಾರಿ ಅಮಾನತಿಗೆ ಆಗ್ರಹಿಸಿ ಸಂವಿಧಾನ ಹಿತ ರಕ್ಷಣಾ ವೇದಿಕೆ, ಕುಷ್ಟಗಿ ತಾಲೂಕು ತಾವರಗೇರಾದಲ್ಲಿ ಗುರುವಾರ ಆಗ್ರಹಿಸಿತು. ಪಟ್ಟಣದ ಸಮೂಹ ಸಂಪನ್ಮೂಲ ಕಾರ್ಯಾಲಯದ ಮುಂದೆ ನಿಂತು ಅಧಿಕಾರಿ ವಿರುದ್ಧ ಸಂವಿಧಾನ ಹಿತ ರಕ್ಷಣಾ ವೇದಿಕೆ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು. ವೇದಿಕೆ ಸದಸ್ಯ ಸಂಜೀವ್ ಕುಮಾರ್ ಚಲವಾದಿ ಈದಿನ. “ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಜಯಂತಿಯಂದು ಕಚೇರಿಗೆ ಬೀಗ ಹಾಕಿದೆ. ಸಮೂಹ ಸಂಪನ್ಮೂಲ ಅಧಿಕಾರಿ ಕಾಶಿನಾಥ್ ನಾಗಲೀಕರ್ ಜಯಂತಿ ಆಚರಿಸದೇ ನಿರ್ಲಕ್ಷ್ಯ ತೋರಿದ್ದಾರೆ. ಅವರನ್ನು ಕೂಡಲೇ ಕರ್ತವ್ಯದಿಂದ ವಜಾ ಮಾಡಬೇಕು” ಎಂದು ಒತ್ತಾಯಿಸಿದರು. ಡಾ ಬಿ ಆರ್ ಅಂಬೇಡ್ಕರ್ ಜಗತ್ತು ಕಂಡ ಶ್ರೇಷ್ಠ ಮೇಧಾವಿ. ದೇಶದ ಸಂವಿಧಾನದ ಹಿಂದಿನ ದೈತ್ಯ ಶಕ್ತಿ. ಅವರ ಆದರ್ಶ ಎಲ್ಲರ ಜೀವನಕ್ಕೆ ದಾರಿದೀಪ. ಈ ಮಹಾನ್ ನಾಯಕರ ಕೊಡುಗೆ ಸ್ಮರಿಸಲು ಸರ್ಕಾರ ಏಪ್ರಿಲ್ 14ರಂದು ಪ್ರತಿ ವರ್ಷ ಅಂಬೇಡ್ಕರ್ ಜಯಂತಿ ಆಚರಿಸುತ್ತದೆ. ಆದರೆ ಅವರ ಜಯಂತಿ ಆಚರಿಸದೆ ಅಧಿಕಾರಿಗಳು ಅಗೌರವ ತೋರಿದ್ದಾರೆ. ಇವರನ್ನು ಕರ್ತವ್ಯದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು. ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳದಿದ್ದರೆ ಸಂವಿಧಾನ ಹಿತ ರಕ್ಷಣಾ ವೇದಿಕೆ, ದಲಿತ ಸಂಘರ್ಷ ಸಮಿತಿ ವೇದಿಕೆಯಿಂದ ತಾವರಗೇರಾ ಪಟ್ಟಣದಿಂದ ಕುಷ್ಟಗಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದವರೆಗೆ ಪಾದಯಾತ್ರೆ ನಡೆಸಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಸಾಗರ ಬೇರಿ, ವೀರೇಶ್ ಪೂಜಾರ್, ವಿಜಯಕುಮಾರ್ ಸಾಸ್ವಿಹಾಳ, ಸುರೇಶ್ ಬಂಡರಗಲ್, ದುರ್ಗೇಶ್ ದೇವರಮನಿ ಇದ್ದರು. ವರದಿ – ಸಂಪಾದಕೀಯ