ಗಜಲ್.
ನೋವಿದ್ದರೂ ಎದೆಯಲ್ಲಿ ನಗುವುದನ್ನು ಕಲಿತಿದ್ದೇನೆ.
ಈ ಪ್ರೀತಿ ಸೋತಿದ್ದರೂ ಗೆಲ್ಲಿಸುವುದನ್ನು ಕಲಿತಿದ್ದೇನೆ.
ಕನಸು ಕಾಣುವುದನ್ನು ಬಿಟ್ಟು ಬಹಳ ದಿನವೇ ಆಯ್ತು
ನಿರಾಸೆಗಳಿದ್ದರೂ ಭರವಸೆಯಿಡುವುದನ್ನು ಕಲಿತಿದ್ದೇನೆ.
ಉಳಿದುಹೋಗುವುದೇನಿದೆಯಿಲ್ಲಿ ಎಲ್ಲ ಗತಿಸಲೇಬೇಕು
ಗಮ್ಯಗಟ್ಟಿ ಇರುವಾಗ ಗುರಿ ತಲುಪುವುದನ್ನು ಕಲಿತಿದ್ದೇನೆ.
ನಿಂದಕರು ಸಿಕ್ಕೇ ಸಿಗುತ್ತಾರೆ ಜೀವನದ ಹೆಜ್ಜೆಗಳ ನಡುವೆ
ನೆನಪಿಗೆ ಬರುತ್ತಾರಿವರು ಕ್ಷಮಿಸುವುದನ್ನು ಕಲಿತಿದ್ದೇನೆ.
ಹಾದಿಯೆಂದಮೇಲೆ ಹಲವು ಗುಂಡಿಗಳು ಇರಲೇಬೇಕು
ಎಡವಿಬಿದ್ದರೂ ಮೇಲೆದ್ದು ಮುನ್ನುಗ್ಗುವುದನ್ನು ಕಲಿತಿದ್ದೇನೆ.
ಮೋಡದ ಪರದೆ ಹಾಕಿಸಿಕೊಂಡ ಮುಗಿಲೂ ಕಣ್ಣೀರಿಡುತ್ತದೆ
ಕಣ್ಣೀರಿಡುವ ಕಣ್ಣಿಗೆ ಸಮಾಧಾನ ಹೇಳುವುದನ್ನು ಕಲಿತಿದ್ದೇನೆ.
ರವೀ ಉಸಿರು ನಿಂತು ಹೋಗುವ ಮೊದಲು ನಗುತ್ತಲೇ ಇರು
ಇತಿಶ್ರೀಯೆದುರು ವಿಜಯಪತಾಕೆ ಹಾರಿಸುವುದನ್ನು ಕಲಿತಿದ್ದೇನೆ.
ರವಿ.ವಿಠ್ಠಲ. ಆಲಬಾಳ. (ಕನ್ನಡಿಗ ರವಿ)