ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ ಭಾರತೀಯ ಸೇನೆಯ ಯೋಧ,,,,,

Spread the love

ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ ಭಾರತೀಯ ಸೇನೆಯ ಯೋಧ,,,,,

ಭಾರತೀಯ ಸೇನೆಯ ಸೀಮಾ ಸೇನಾ ಬಲ ವಿಭಾಗದಲ್ಲಿ ಯೋಧನಾಗಿದ್ದ ಮುದ್ದೇಬಿಹಾಳ ತಾಲೂಕು ಗೆದ್ದಲಮರಿ ಗ್ರಾಮದ ಸುನೀಲ ಆನಂದ ವಿಭೂತಿ (23) ಸೋಮವಾರ ಮಧ್ಯಾಹ್ನ  ತಂಗಡಗಿ ಹತ್ತಿರ ಕೃಷ್ಣಾ ನದಿಯ ಆಚೆ ಕಡೆ ಧನ್ನೂರ ಬಳಿ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

2020ರಲ್ಲಿ ಸೇನೆಗೆ ಆಯ್ಕೆಯಾಗಿ ಬೆಂಗಳೂರಿನ ತರಬೇತಿ ಕೇಂದ್ರದಲ್ಲಿ 14 ತಿಂಗಳ ತರಬೇತಿ ಮುಗಿಸಿ ಪ್ರಸ್ತುತ ಬಿಹಾರ ರಾಜ್ಯದಲ್ಲಿ ಕರ್ತವ್ಯದಲ್ಲಿದ್ದ ಸುನೀಲ ಅಕ್ಕನ ಮದುವೆಗಾಗಿ ರಜೆಯ ಮೇಲೆ ಸ್ವಗ್ರಾಮಕ್ಕೆ ಆಗಮಿಸಿದ್ದರು. ಮೇ 14 ರಂದು ಅಕ್ಕನ ಮದುವೆಯಲ್ಲಿ ಸಂಭ್ರಮದಿಂದ ಪಾಲ್ಗೊಂಡಿದ್ದರು. ಸೋಮವಾರ ಬಾಗಲಕೋಟೆ ಜಿಲ್ಲೆ ಹುನಗುಂದದಲ್ಲಿರುವ ಅಜ್ಜಿಯ ಆರೋಗ್ಯ ವಿಚಾರಿಸಲು ಸಹೋದರನೊಂದಿಗೆ ಬೈಕ್ ಮೇಲೆ ಹೋಗಿ ಮರಳಿ ಬರುವಾಗ ಈ ದುರಂತ ಸಂಭವಿಸಿದೆ. ದುರ್ಘಟನೆಯಲ್ಲಿ ಸುನೀಲನ ಸಹೋದರನಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಇನ್ನೂ ಅವಿವಾಹಿತನಾಗಿದ್ದ ಸುನೀಲನಿಗೆ ತಂದೆ, ತಾಯಿ, ನಾಲ್ವರು ಸಹೋದರಿಯರು, ಓರ್ವ ಸಹೋದರ ಇದ್ದಾರೆ. ಸುನೀಲನ ಪಾರ್ಥೀವ ಶರೀರವನ್ನು ಮರಣೋತ್ತರ ಪರೀಕ್ಷೆಗಾಗಿ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ತರಲಾಗಿತ್ತು.ನಂತರ ಮಂಗಳವಾರ ರಂದು ಮಧ್ಯಾಹ್ನ 11ಗಂಟೆಗೆ ಹಳೆ ತಹಶಿಲ್ದಾರ ಕಛೇರಿ ಮುಂದೆ ಇರುವ ಸೈನಿಕ ಮೈದಾನದಲ್ಲಿ ಮುದ್ದೇಬಿಹಾಳ ತಾಲ್ಲೂಕಿನ  ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ಮೃತ ಯೋಧ ಸುನೀಲನಿಗೆ ಅಂತಿಮ ಕ್ರಿಯಾವಿಧಿಗಳಿಗೆ ನೆರವಾಗಿದ್ದಾರೆ. ಮೃತ ಯೋಧನ ಕುಟುಂಬ ಶೋಕ ಸಾಗರದಲ್ಲಿ ಮುಳುಗಿತ್ತು.ಸಂಜೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ  ಅಂತ್ಯಕ್ರಿಯೆ ನೇರೆವೇರಿತು.

ವರದಿ:- ಮುತ್ತು ಎನ್ ಬೀರಗೊಂಡ ಮುದ್ದೇಬಿಹಾಳ

Leave a Reply

Your email address will not be published. Required fields are marked *