ಅಥಣಿ:ತಳವಾರ ಸಮಾಜಕ್ಕೆ ಸಿಹಿ ಸುದ್ದಿ ನೀಡಿದ ಕೋಟ ಶ್ರೀನಿವಾಸ ಪೂಜಾರಿ, ಶೀಘ್ರದಲ್ಲೇ ಎಸ್ ಟಿ ಸೇರ್ಪಡೆ..
ಅಥಣಿ : ತಾಂತ್ರಿಕ ಅಡಚಣೆಗಳಿಂದ ಇಲ್ಲಿಯವರೆಗೆ ತಳವಾರ ಸಮಾಜಕ್ಕೆ ಎಸ್ ಟಿ ಪ್ರಮಾಣ ಪತ್ರ ನೀಡಲು ಸಾಧ್ಯವಾಗಿಲ್ಲ ಈಗಾಗಲೇ ಹಿಂದುಳಿದ ವರ್ಗಗಳ ಆಯೋಗವು ಸಮಾಜ ಕಲ್ಯಾಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ ಶೀಘ್ರದಲ್ಲೇ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದು ಸಮಾಜಕ್ಕೆ ಪ್ರಮಾಣ ಪತ್ರ ನೀಡುವ ಮೂಲಕ ತಳವಾರರಿಗೆ ನ್ಯಾಯ ಒದಗಿಸುತ್ತೇವೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಸಮಾಜ ಬಾಂಧವರಿಗೆ ಸಿಹಿ ಸುದ್ದಿ ನೀಡಿದರು. ಶುಕ್ರವಾರ ಅಥಣಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವರು ತಳವಾರ ಸಮಾಜಕ್ಕೆ ಎಸ್ ಟಿ ಸೇರ್ಪಡೆ ಕುರಿತು ಕೇಂದ್ರ ಸರ್ಕಾರದ ನಿರ್ದೇಶನವೂ ಇದೆ ಆದರೆ ಆಡಳಿತಾತ್ಮಕ ಸಮಸ್ಯೆಗಳಿಂದ ಸ್ವಲ್ಪ ಹಿನ್ನಡೆಯಾಗಿದೆ ಎಂದು ತಿಳಿಸಿದರು. ಅಲ್ಲದೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಪರಿಷತ್ ಸದಸ್ಯರಾದ ರವಿಕುಮಾರ್ ಸೇರಿದಂತೆ ಎಲ್ಲ ನಾಯಕರ ಶ್ರಮದಿಂದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪ್ರವರ್ಗ ಒಂದರಿಂದ ತೆಗೆದು ತಳವಾರ ಸಮಾಜವನ್ನು ಎಸ್ ಟಿ ಗೆ ಸೇರಿಸುವುದಕ್ಕೆ ಕಾಲಾವಕಾಶ ಬೇಕು ಹೀಗಾಗಿ ಶೀಘ್ರದಲ್ಲೇ ಸಮಾಜವನ್ನು ಎಸ್ ಟಿ ಗೆ ಸೇರ್ಪಡೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು. ಅಲ್ಲದೆ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವ ಕುರಿತ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಚಿವರು ಬೇರೆ ಬೇರೆ ಸಮುದಾಯದ ತಮ್ಮ ಬೇಡಿಕೆಗಳ ಕುರಿತು ಮನವಿ ಮಾಡಿದ್ದಾರೆ ಕಾಲಾನುಕ್ರಮದಲ್ಲಿ ಎಲ್ಲ ಮನವಿಗಳಿಗೆ ಸ್ಪಂದಿಸುವ ಕೆಲಸವಾಗುತ್ತದೆ ಎಂದು ತಿಳಿಸಿದರು.
ವರದಿ – ಮಹೇಶ ಶರ್ಮಾ