ಜನಪರ ಚಳುವಳಿಯ ವಿಠಲ ಭಂಡಾರಿಯವರಿಗೆ ಭಾವಪೂರ್ಣ ಶ್ರಾಧ್ಧಾಜಂಲಿ.
ವಿದ್ಯಾರ್ಥಿ ಜೀವನದಿಂದಲೇ ದಶಕಗಳ ಕಾಲ ಚಳುವಳಿಯೊಂದಿಗೆ ಸದಾಕಾಲ ಗುರುತಿಸಿಕೊಂಡಿದ್ದ ವಿಠ್ಠಲ ಭಂಡಾರಿ ಅವರು ನಮ್ಮನ್ನಗಲಿದ್ದಾರೆ. ವಿಠಲ ಭಂಡಾರಿ ನಿಧನಕ್ಕೆ ಪ್ರಗತಿಪರ ವರ್ಗ ಕಂಬನಿ ಮಿಡಿದಿದೆ.
ವಿಠಲ ಭಂಡಾರಿ ನಿಧನಕ್ಕೆ ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್ ಕಂಬನಿ ಮಿಡಿದಿದ್ದಾರೆ. ‘ಸಂವಿಧಾನ ಓದು ಪುಸ್ತಕವನ್ನು ಬರೆಯಬೇಕು ಎಂದು ನನ್ನನ್ನು ಪ್ರೇರೇಪಿಸಿದವರೇ ವಿಠಲ ಭಂಡಾರಿಯವರು. ಆ ಪುಸ್ತಕವನ್ನು ಸಹಯಾನ ಸಂಸ್ಥೆಯೇ ಪ್ರಕಟಿಸಿತು. ರಾಜ್ಯದಾದ್ಯಂತ ಅಭಿಯಾನಕ್ಕಾಗಿ ಜೊತೆಯಾಗಿ ಉತ್ಸುಕತೆಯಿಂದ ನನ್ನ ಜೊತೆ ಸುತ್ತಾಡಿದರು. ಅವರ ನಿಧನ ರಾಜ್ಯದ ಪ್ರಜಾಪ್ರಭುತ್ವ ಚಳವಳಿಗೆ ದೊಡ್ಡ ನಷ್ಟ..’‘2018ರ ಫೆಬ್ರುವರಿಯಲ್ಲಿ ಪುಸ್ತಕದ ವಿಚಾರನ್ನು ಅವರು ನನ್ನ ತಲೆಗೆ ತುಂಬಿದರು. ಅದೇ ವರ್ಷ ಆ.15ರಂದು ಪುಸ್ತಕ ಬಿಡುಗಡೆಯಾಯಿತು. ಸುಪ್ರಿಂಕೋರ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನನ್ನನ್ನು ಅಭಿಯಾನದ ಸಲುವಾಗಿಯೇ ಕರೆದುಕೊಂಡು ಬಂದರು’ ಎಂದು ಹೇಳಿದರು. ‘ಅವರ ಆರೋಗ್ಯ ಕುರಿತು ದಿನವೂ ಸಂಪರ್ಕದಲ್ಲಿದ್ದೆ. ಕೆಮ್ಮಿನ ಸಮಸ್ಯೆ ಹೊರತು ಮತ್ತೇನಿಲ್ಲ ಎಂದು ಹೇಳಿದ್ದರು. ಆದರೆ, ಅವರ ನಿಧನದ ಸುದ್ದಿಯನ್ನು ನಂಬಲಾಗುತ್ತಿಲ್ಲ. ಕೆರೆಕೋಣದಲ್ಲಿ ಸಹಯಾನದ ಉದ್ಘಾಟನೆಗೆ, ಅದರ ದಶಮಾನೋತ್ಸವ ಸಮಾರಂಭದ ಉದ್ಘಾಟನೆಗೆ ನನ್ನನ್ನೇ ಕರೆಸಿದ್ದರು’ ಎಂದು ನೆನಪಿಸಿಕೊಂಡಿದ್ದಾರೆ. ವಿಠ್ಠಲ ಭಂಡಾರಿ ವೇದಿಕೆಯಲ್ಲಷ್ಟೇ ಕಾಣಿಸಿಕೊಳ್ಳುತ್ತಿದ್ದ ಚಿಂತಕರಾಗಿರಲಿಲ್ಲ, ನೇಪಥ್ಯದಲ್ಲಿ ದುಡಿಯುತ್ತಿದ್ದ ಸಂಘಟಕರಾಗಿದ್ದರು. ಈ ಕಾರಣದಿಂದಾಗಿ ಅವರ ಅಗಲಿಕೆ ತುಂಬಲಾರದ ನಷ್ಟ, ಅವರ ಸ್ಥಾನವನ್ನು ತುಂಬುವುದು ಕೂಡಾ ಕಷ್ಟ. ನೀವು ಸದಾ ಸ್ಮರಣೀಯ –ದಿನೇಶ್ ಅಮೀನ್ ಮಟ್ಟು ಹಿರಿಯ ಪತ್ರಕರ್ತರು ಕನಸುಗಳನ್ನು ಹೊತ್ತು ನಾಡಿನಾದ್ಯಂತ ಜನಜಾಗೃತಿಗಾಗಿ ತನ್ನ ಆರೋಗ್ಯವನ್ನೂ ಲೆಕ್ಕಿಸದೇ ತಿರುಗಾಡುತ್ತಿದ್ದ ವಿಠ್ಠಲ ಇಷ್ಟು ಬೇಗ ನಮ್ಮನ್ನಗಲಬಾರದಿತ್ತು. ದೇಶದ ಕಟ್ಟ ಕಡೆಯ ಪ್ರಜೆಗೂ ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ನೀಡಿದ ಸಂವಿಧಾನವನ್ನು ದುರ್ಬಲಗೊಳಿಸುವ ಪ್ರಯತ್ನಗಳು ಶುರುವಾದಾಗ, “ಸಮುದಾಯ ಕರ್ನಾಟಕ” ಕೈಗೊಂಡ ‘ಸಮುದಾಯ ಓದು ಅಭಿಯಾನ’ದ ಭಾಗವಾಗಿ ಕರ್ನಾಟಕದ ವಿಶ್ರಾಂತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ಅವರು ಬರೆದ ಸಂವಿಧಾನ ಕುರಿತ ಸರಳ ಪುಸ್ತಕಗಳನ್ನು ಹೊತ್ತು ಕರ್ನಾಟಕದಾದ್ಯಂತ ನೂರಾರು ಸಭೆಗಳನ್ನು, ಬಹಳ ಮುಖ್ಯವಾಗಿ ಕಾಲೇಜುಗಳ ಯುವಜನರಿಗೆ, ನಡೆಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದ ಗೆಳೆಯ ವಿಠ್ಠಲ ಭಂಡಾರಿ ಸಾಮಾಜಿಕ ಚಳುವಳಿಗಾರರೆಲ್ಲರಿಗೂ ಮಾದರಿಯಾಗಿದ್ದರು.
ಅದು ಸಾಲದೆಂಬಂತೆ, ತನ್ನ ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಎಲ್ಲರ ಮನಸ್ಸನ್ನೂ ಸೂರೆಗೊಂಡಿದ್ದರು. ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದ ಮಹಾತ್ಮಾ ಗಾಂಧಿ ಶತಾಬ್ಧಿ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ತಮ್ಮ ಸೇವೆ ಸಲ್ಲಿಸುತ್ತಿದ್ದರು ಡಾ.ವಿಠ್ಠಲ ಭಂಡಾರಿ. ವಿಠ್ಠಲ ಅವರ ಕನಸುಗಳನ್ನು ನನಸು ಮಾಡುವುದರ ಮೂಲಕ ನಮ್ಮ ಶ್ರದ್ಧಾಂಜಲಿ ಸಲ್ಲಿಸೋಣ. – ಟಿ.ಸುರೇಂದ್ರರಾವ್, ಸಮುದಾಯ ಕರ್ನಾಟಕ
ವಿಠಲ್ ಭಂಡಾರಿ ಸರ್ ಇನ್ನಿಲ್ಲ ಅನ್ನೋದನ್ನ ನಂಬಲಿಕ್ಕೆ ಆಗ್ತಿಲ್ಲ. ನಾನು ಕಾರವಾರದ ವಿಜಯ ಕರ್ನಾಟಕದಲ್ಲಿ ಕೆಲಸ ಮಾಡುತ್ತಿದ್ದಾಗ ನನಗೆ ದೊಡ ದೈರ್ಯ ಅಂತ ಇದ್ದವರು ವಿಠಲ್ ಭಂಡಾರಿ ಮತ್ತು ಯಮುನಾ ಗಾಂವ್ಕರ್. ಯಾವುದೇ ವಿಷಯದ ತುಂಬಾ ಅಥೆಂಟಿಕ್ ಆಗಿ ಮಾತನಾಡಬಲ್ಲ ಮೇಷ್ಟ್ರು, ಸಾವಿರಾರು ವಿದ್ಯಾರ್ಥಿಗಳಿಗೆ ಸಾಹಿತ್ಯ, ಚಳವಳಿಗಳ ಹುಚ್ಚು ಹಿಡಿಸುತ್ತಿದ್ದವರು. ಎಲ್ಲೆಲ್ಲಿಂದಲೋ ಉತ್ತರ ಕನ್ನಡ ಜಿಲ್ಲೆಯ ಡೈವರ್ಸಿಟಿಯನ್ನು ನೋಡಲು ಬರುತ್ತಿದ್ದವರಿಗೆಲ್ಲ ತಮ್ಮ ಮನೆಯಲ್ಲಿ ಉಳಿಸಿಕೊಂಡು ಜಿಲ್ಲೆಯಾದ್ಯಂತ ಓಡಾಡಿ ತೋರಿಸುತ್ತಿದ್ದವರು. ಜನನುಡಿ, ಮೇ ಸಾಹಿತ್ಯ ಮೇಳಗಳಂಥ ಎಲ್ಲ ಜೀವಪರ ಕಾರ್ಯಕ್ರಮಗಳೆಲ್ಲಲ್ಲ ಕಾಣಿಸಿಕೊಳ್ಳುತ್ತಿದ್ದವರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಜೀವಪರ ಕಾಳಜಿಗಳಿಗೆ ಧಕ್ಕೆ ಬಂದಾಗ ಮೊದಲು ದನಿ ಎತ್ತುತ್ತಿದ್ದವರು… ವಿಠಲ್ ಸರ್ ಇನ್ನಿಲ್ಲ ವೆಂದರೆ ನಂಬಲಿಕ್ಕಾಗುತ್ತಿಲ್ಲ- ಹನುಮಂತ ಹಾಲಗೇರಿ, ಯುವ ಸಾಹಿತಿ
ವಿಠಲ ಭಂಡಾರಿ ಖ್ಯಾತ ವಿಚಾರವಾದಿ, ಸಂಘಟಕ, ಹಲವು ಚಳುವಳಿಗಳ ಮುಂದಾಳು, ಸಿದ್ದಾಪುರ ಎಂ.ಜಿ.ಸಿ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದರು. ವಿದ್ಯಾರ್ಥಿ ದೆಸೆಯಿಂದಲೇ ಎಸ್.ಎಫ್.ಐ ನ ಜೊತೆ ಗುರುತಿಸಿಕೊಂಡ ವಿಠ್ಠಲ ಭಂಡಾರಿಯವರು ಚಳುವಳಿಯ ಜೊತೆಗೇ ಬೆಳೆದು ಬಂದವರು.
ಸಾಹಿತ್ಯ, ಸಂಸ್ಕೃತಿ ಚಿಂತಕರಾಗಿದ್ದ ಅವರು ‘ ಚಿಂತನ ಉತ್ತರ ಕನ್ನಡ’ ದ ಸಂಚಾಲಕರಲ್ಲೊಬ್ಬರು. ನಿರಂತರವಾಗಿ ಪ್ರಗತಿಪರ ಚಳುವಳಿಗಳ ಮುಂಚೂಣಿಯಲ್ಲಿರುತ್ತಿದ್ದ ವಿಠ್ಠಲ ಭಂಡಾರಿ ಅತ್ಯುತ್ತಮ ಸಂಘಟಕರಾಗಿದ್ದರು. ಆರ್. ವಿ. ಭಂಡಾರಿ ನೆನಪಿನ ಸಂಸ್ಕ್ರತಿ ಅಧ್ಯಯನ ಕೇಂದ್ರದ ಕಾರ್ಯದರ್ಶಿಗಳಾಗಿದ್ದ ಅವರು ಪ್ರತಿವರ್ಷ ನಡೆಸುತ್ತಿದ್ದ ‘ ಸಹಯಾನ ಸಾಹಿತ್ಯೋತ್ಸವ’ ನಾಡಿನ ಗಮನ ಸೆಳೆದಿದೆ. ‘ಬಂಡಾಯ ಪ್ರಕಾಶನ’ ‘ಸಹಯಾನ’ ದಿಂದ ಹಲವಾರು ಪುಸ್ತಕಗಳನ್ನ ಪ್ರಕಾಶಿಸಿದ್ದರು. ‘ ಸಮುದಾಯ’ ಸಾಂಸ್ಕ್ರತಿಕ ಸಂಘಟನೆಯ ಕ್ರಿಯಾಶೀಲ ಮುಂದಾಳುವಾಗಿದ್ದರು. ಇತ್ತೀಚೆಗೆ ‘ ಸಂವಿಧಾನ ಓದು’ ಕಾರ್ಯಕ್ರಮದೊಂದಿಗೆ ರಾಜ್ಯದ ತುಂಬ ಸುತ್ತುತ್ತಿದ್ದ ಅವರು ಯುವಜನತೆಯ ಜೊತೆ ಓಡಾಡುತ್ತ ಸಂವಿಧಾನ ದ ಮಹತ್ವದ ಅರಿವು ಮೂಡಿಸುವಲ್ಲಿ ಸಫಲರಾಗಿದ್ದರು. ವಿಠ್ಠಲ ಭಂಡಾರಿ ಯವರ ನಿಧನ ನಿಜಕ್ಕೂ ಸಾಂಸ್ಕೃತಿಕ ಲೋಕದ ನಷ್ಟ – ಕಿರಣ ಭಟ್ ಹೊನ್ನಾವರ, ರಂಗನಿರ್ದೇಶಕರು
ಎಂಟೊಂಬತ್ತು ವರ್ಷಗಳ ಹಿಂದೆ ಪರಿಚಯ ಆದಾಗಿನಿಂದಲೂ ವಿಠ್ಠಲ್ ಭಂಡಾರಿ ಬಗ್ಗೆ ನನಗೆ ಒಂದು ರೀತಿಯ ಅಭಿಮಾನ ಮತ್ತು ಮೆಚ್ಚುಗೆ ಇತ್ತು. ಸದಾ ನಗುಮುಖದ ಕನ್ನಡ ಅಧ್ಯಾಪಕರು ಮತ್ತು ಲೇಖಕರು. ಬಹಳ ಚೆನ್ನಾಗಿ ಭಾಷಣ ಮಾಡುತ್ತಿದ್ದರು ಮತ್ತು ವಿಚಾರ ಮಂಡಿಸುತ್ತಿದ್ದರು. ಅವರ ತಂದೆಯವರ ನೆನಪಿನಲ್ಲಿ ಹೊನ್ನಾವರದ ಬಳಿಯ ಅವರ ಹುಟ್ಟೂರಿನಲ್ಲಿ ಅವರ ಕುಟುಂಬ ಪ್ರತಿವರ್ಷ ನಡೆಸುತ್ತಿದ್ದ ಕಾರ್ಯಕ್ರಮಕ್ಕೆ ಒಮ್ಮೆ ನನ್ನನ್ನೂ ಆಹ್ವಾನಿಸಿದ್ದರು. ಸಜ್ಜನ, ಸಂಭಾವಿತ. ಇಂದು ಕೋವಿಡ್‌ಗೆ ಬಲಿಯಾಗಿದ್ದಾರೆ. ವಿಠ್ಠಲ್ ಭಂಡಾರಿಯವರಿಗೆ ಭಾವಪೂರ್ಣ ಶ್ರದ್ಧಾಂಜಲಿ. – ರವಿ ಕೃಷ್ಣಾರೆಡ್ಡಿ, KRS ರಾಜ್ಯಾಧ್ಯಕ್ಷರು
ಉತ್ತರಕನ್ನಡದ ಚಿಕ್ಕ ಹಳ್ಳಿ ಕೆರೆಕೋಣದಲ್ಲಿ ವಿಚಾರವಾದಿ ಕುಟುಂಬದಲ್ಲಿ ಹುಟ್ಟಿದ ವಿಠಲ ಭಂಡಾರಿ ಆರಂಭದಿಂದಲೂ ತಮ್ಮ ತಂದೆ ಆರ್ ವಿ ಭಂಡಾರಿಯವರ ಮಾರ್ಗದರ್ಶನದಲ್ಲಿ ವೈಜ್ಞಾನಿಕ ಚಿಂತನೆ ಮತ್ತು ಸಾಹಿತ್ಯದಲ್ಲಿ ಆಸಕ್ತಿಯನ್ನು ರೂಢಿಸಿಕೊಂಡಿದ್ದವರು. ಕಾಲದೊಂದಿಗೆ ಹೆಜ್ಜೆಯಿಡುತ್ತಾ ಯುವಜನರನ್ನು ತಲುಪುವ ಹೊಸ ಪರಿಭಾಷೆಗಳನ್ನು ರೂಢಿಸಿಕೊಂಡು ಸದಾ ಯುವಜನರ ಜೊತೆಗೆ ಒಡನಾಡುತ್ತಾ ಅವರಿಗೆ ಮಾರ್ಗದರ್ಶನ ಮಾಡುತ್ತಿದ್ದವರು. ತಮ್ಮ ಮನೆಯಲ್ಲೇ ಒಂದು ಪುಟ್ಟ ಗ್ರಂಥಾಲಯವನ್ನು ಹೊಂದಿದ್ದ ವಿಠಲ ಭಂಡಾರಿಯವರು ವಿಶೇಷವಾಗಿ ಯುವಜನರಲ್ಲಿ ಓದಿನ ಆಸಕ್ತಿ ಬಿತ್ತುತ್ತಿದ್ದರು, ತಾವೇ ಪುಸ್ತಕಗಳನ್ನು ಕೊಟ್ಟು ಓದಿಸುತ್ತಿದ್ದರು ಕೂಡಾ. ಬಂಡಾಯ ಪ್ರಕಾಶನದ ಮೂಲಕ ಹಲವಾರು ಪುಸ್ತಕಗಳನ್ನು ಪ್ರಕಟಿಸಿದ್ದ ವಿಠಲ್, ತಮ್ಮ ತಂದೆ ಆರ್ ವಿ ಭಂಡಾರಿಯವರ ಎಲ್ಲ ಪುಸ್ತಕಗಳನ್ನೂ ಕಾಪಿರೈಟ್ ಮುಕ್ತಗೊಳಿಸಿ ಡಿಜಿಟಲ್ ಮಾಧ್ಯಮದಲ್ಲಿ ಪ್ರಕಟಿಸಲು ಸಂಚಿ ಫೌಂಡೇಶನ್`ಗೆ ನೀಡಿದ್ದರು. ಜಸ್ಟಿಸ್ ನಾಗಮೋಹನ ದಾಸ್ ಅವರ “ಸಂವಿಧಾನ ಓದು” ಪುಸ್ತಕವನ್ನು ಪ್ರಕಟಿಸಿ ಸಾವಿರಾರು ಸಂಖ್ಯೆಯಲ್ಲಿ ರಾಜ್ಯದ ಉದ್ದಗಲ ತಲುಪಿಸಿ ಒಂದು ಬೃಹತ್ ಅಭಿಯಾನವನ್ನೆ ನಡೆಸಿದ್ದರು. BGVS ರಾಜ್ಯ ಸಮಿತಿಯ ಸಂಸ್ಥಾಪಕ ಜಂಟಿ ಕಾರ್ಯದರ್ಶಿಯಾಗಿ ಜನವಿಜ್ಞಾನ ಚಳವಳಿಯನ್ನ ಕಟ್ಟಲು ರಾಜ್ಯಾದ್ಯಂತ ದುಡಿದಿದ್ದ ವಿಠಲ ಭಂಡಾರಿ, “ಸಹಯಾನ” ಕಾರ್ಯಕ್ರಮಗಳ ಮೂಲಕ ಯುವ ಜನರನ್ನು ಒಂದೆಡೆ ಒಗ್ಗೂಡಿಸಿ ಕಲೆ, ಸಾಹಿತ್ಯ, ವೈಚಾರಿಕ ಚರ್ಚೆಗಳಿಗೆ ಚಾಲನೆ ನೀಡುತ್ತಿದ್ದರು. ಐಕ್ಯತಾ ರ್‍ಯಾಲಿ, ಸೋಶಿಯಲ್ ಮೀಡಿಯಾ ಬರಹ ಕಮ್ಮಟ, ಕೋಶ ಓದು ದೇಶ ನೋಡು ವಾರ್ಷಿಕ ಅಭಿಯಾನಗಳು, ಮಹಿಳಾ ಸಮ್ಮೇಳನ, ಹೀಗೆ ರಾಜ್ಯದ ಯಾವ ಭಾಗದಲ್ಲಿ ಯಾವುದೇ ಜೀವಪರ ಮತ್ತು ವೈಚಾರಿಕ ಕಾರ್ಯಕ್ರಮಗಳು ನಡೆದರೂ ಅಲ್ಲಿ ಹಾಜರಿದ್ದು ಕೈಜೋಡಿಸುತ್ತಿದ್ದ, ಮಾರ್ಗದರ್ಶನ ಮಾಡುತ್ತಿದ್ದ ವಿಠಲ ಭಂಡಾರಿ ಇನ್ನು ನೆನಪು ಮಾತ್ರ. ಕೋವಿಡ್ ಸೋಂಕಿಗೆ ಬಲಿಯಾಗಿ ನೆನ್ನೆ (ಮೇ 7ರ ಸಂಜೆ) ನಮ್ಮನ್ನು ಅಗಲಿದ ವಿಠಲ ಭಂಡಾರಿಯವರನ್ನು ತಾವರಗೇರಾ ನ್ಯೂ್ ಪತ್ರಿಕೆ ಹಾಗೂ ವೆಬ್ ಬಳಗದವತಿಯಿಂದ . ವರದಿ – ಸಂಪಾದಕೀಯ