ವಿಶ್ವ ಪರಿಸರ ದಿನಾಚರಣೆಯ ಹಾರ್ದಿಕ ಶುಭಾಶಯಗಳು,,,,,,
ಪಿಪಾಸುವಾಗುತ್ತಿರುವೆ ಏಕೆ..?
ಸೂರ್ಯರಶ್ಮಿಯ ಹೊಂಗಿರಣಗಳ
ಆಹ್ಲಾದದ ಪುಳಕದಲಿ..
ಚಿಗುರಿನಿಂತ ಪಚ್ಚೆ ವನ..!
ಸ್ವಚ್ಛಂದದಿ ಬಾನಾಡಿಗಳಾಗಿ ಹಾರಿಹಾರಿ
ಮತ್ತೆ ವನಸಿರಿಯ ಅರಸಿ ಬರುವ ಬೆಳ್ಳಕ್ಕಿ ವಲ..
ಹಸಿರು ಮರ ಪಕ್ಷಿಗಳ ಅರಮನೆ ಸಗ್ಗದ ಸಿರಿ
ಜಿಂಕೆ ಚಿರತೆ ಸಾರಂಗ ಹುಲಿ
ವನ್ಯ ಜೀವಸಂಕುಲ..
ಸ್ವೇಚ್ಛೆಯಲಿ ಜಿಗಿದು ಕುಣಿದು
ಝೇಂಕರಿಸುತ ಸಿಂಗರಿಸುತ ವನ..
ಜುಳು ಜುಳು ಹರಿವ ಜಲದಿ ಮಿಂದು
ಹಸಿರು ವನರಾಶಿಯಲಿ ನಿಂದು
ಅಂದು-ಇಂದು ಎಂದೆಂದೂ ನಕ್ಕು ನಲಿದು
ಮನೋಜ್ಞವಾಗಿ ಕೆಲಿದು
ಜೀವಹೃನ್ಮನಗಳ ಪುಳಕದಲ್ಲಿ ಮೈಮರೆಯುತಿಹ
ಜೀವಸಂಕುಲ ಪ್ರಕೃತಿ ಮಡಿಲಲಿ..!
ಹೇ ಮನುಜ ನೀನೊಂದು ಸಣ್ಣ ಜೀವಕಣ ಪ್ರಕೃತಿಯಲಿ..!
ನಿಸರ್ಗದೆಲ್ಲವ ಬಳಸುತ, ಬಾಚುತ..
ಸ್ವಾರ್ಥದಲ್ಲಿ ಮೈಮರೆದು
ನಿನ್ನ ರಕ್ಷಣೆಯ ಮಡಿಲು..
ಜೀವದೊಡಲು ಪ್ರಕೃತಿಯ,
ವಿಕೃತ ಮನದಿ ಸ್ವೇಚ್ಛೆಯಲಿ
ವಿಕಾರಗೊಳಿಸುತಿರುವಿ..!
ನಿನ್ನ ಬೊಗಸೆಯಲಿ ಎಲ್ಲವ ಬಾಚಿ
ನಿನ್ನುಸಿರಿಗೆ ಕುತ್ತು ತಂದಿರುವಿ..!
ಮರದ ಟೊಂಗೆಯ ಮೇಲೆ ನಿಂತು
ಮರವನೆ ಕಡಿದರೆ ಬೀಳದಿರುವಿ ಏನು..?
ಅವಸಾನವಲ್ಲದೇ ಮತ್ತೇನು..?
ನೀನೊಂದು ಕುಬ್ಜ ಕಣ..!
ಪ್ರಕೃತಿ ಜಗದ ಅಂಕಣ..!!
ನೀನಿಲ್ಲದೆಯೂ ಬಾಳಬಲ್ಲದು ಪ್ರಕೃತಿ ಸ್ವಚ್ಛಂದದಿ..
ನಿಸರ್ಗದ ಆಸರೆಯಿಲ್ಲದೇ ಜೀವಜಲ, ಆಮ್ಲಜನಕವಿಲ್ಲದೇ ನಿನ್ನ ಬದುಕು ಸಾಧ್ಯವೇ..?
ನಿನಗಿದು ವೇದ್ಯವೇ..?
ನಿಲ್ಲಿಸು ಹುಚ್ಚಾಟ..
ನೀನೇ ಶ್ರೇಷ್ಠನೆಂಬ ಅರಚಾಟ..
ಕೂಸು ನೀ ಧರಣಿಯಲಿ..!
ಪಿಪಾಸುವಾಗುವೆ ಏಕೆ ಅತಿ ಆಸೆಯಲಿ..?
ಬೆಳೆಸುತ ಮರಗಳ
ಆಸ್ವಾದಿಸುತ ಹೂ ಪರಿಮಳ..
ಹಕ್ಕಿಗಳಿಂಚರ ಖಗಮೃಗಳ ಝೆಂಕಾರ
ಪಚ್ಚೆ ಪೈರು ವನರಾಶಿಯಲಿ ವಿಹರಿಸುತ..
ಹಾಡುತ ಕುಣಿಯುತ
ಜುಳುಜುಳು ನೀರಲಿ ಮಿಂದೇಳು..!
ಪ್ರಕೃತಿಯೊಡನೆ ಒಂದಾಗಿ ಬಾಳು..!!
✍️ ಶ್ರೀಮತಿ ಮೈತ್ರಾದೇವಿ ರಾಚಯ್ಯ ಹಿರೇಮಠ ಶಿಕ್ಷಕಿ-81050 62623