ಒಳ್ಳೆಯ ಮಾರ್ಗದಲ್ಲಿ ಸಂಪಾದಿಸಿದ ಹಣ ಎಂದಿಗೂ ಸುರಕ್ಷಿತ: ಶೃಂಗೇರಿ ವಿಧುಶೇಖರ ಭಾರತೀ ಸ್ವಾಮೀಜಿ..

Spread the love

ಒಳ್ಳೆಯ ಮಾರ್ಗದಲ್ಲಿ ಸಂಪಾದಿಸಿದ ಹಣ ಎಂದಿಗೂ ಸುರಕ್ಷಿತ: ಶೃಂಗೇರಿ ವಿಧುಶೇಖರ ಭಾರತೀ ಸ್ವಾಮೀಜಿ..

ಶ್ರೀ ಚರಣ್‌ ಸೌಹಾರ್ದ್‌ ಕೋ-ಆಪರೇಟೀವ್‌ ಬ್ಯಾಂಕ್‌ ನ ರಜತ ಮಹೋತ್ಸವದಲ್ಲಿ ಆಶೀರ್ವಚನ. ಬೆಂಗಳೂರು ಜೂನ್‌ 13: ಒಳ್ಳೆಯ ಮಾರ್ಗದಲ್ಲಿ ಸಂಪಾದಿಸಿರುವ ಹಣ ಎಂದಿಗೂ ಸುರಕ್ಷಿತವಾಗಿರುತ್ತದೆ. ಇಂತಹ ನ್ಯಾಯ ಮಾರ್ಗ ಅನುಸರಿಸಿಕೊಂಡು ಚರಣ್‌ ಬ್ಯಾಂಕ್‌ ಮುಂದುವರೆಯುತ್ತಿದೆ ಎಂದು ಶೃಂಗೇರಿಯ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳು ಅಭಿಪ್ರಾಯಪಟ್ಟರು. ಶಂಕರ ಮಠದ ಶ್ರೀ ಭಾರತೀ ತೀರ್ಥ ಸಭಾಭವನದಲ್ಲಿ ಭಾನುವಾರ ನಡೆದ ಬ್ಯಾಂಕಿನ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಗುರುಗಳ ಪರಮ ಅನುಗ್ರಹದಿಂದ ಶ್ರೀ ಚರಣ್‌ ಸೌಹಾರ್ದ ಕೋ-ಆಪರೇಟಿವ್‌ ಬ್ಯಾಂಕ್‌ ಎಲ್ಲಾ ರೀತಿಯಲ್ಲಿ ಅಭಿವೃದ್ದಿ ಹೊಂದುವ ಮೂಲಕ ಗ್ರಾಹಕರ ವಿಶ್ವಾಸವನ್ನು ಗಳಿಸಿದೆ. ಈ ಪ್ರಪಂಚದಲ್ಲಿ ದೇವಸ್ಥಾನಕ್ಕೆ ಹೋಗದಿರುವ ಮನುಷ್ಯರನ್ನು ನೋಡಬಹುದು. ಆದರೆ, ಬ್ಯಾಂಕಿಗೆ ಹೋಗದಿರುವವರನ್ನು ನೋಡುವುದು ಕಷ್ಟ. ಹಣ ಸುರಕ್ಷಿತವಾಗಿ ಇರುತ್ತೆ ಮತ್ತು ಅದು ವೃದ್ದಿಯಾಗಿ ನನಗೆ ಉಪಯೋಗಕ್ಕೆ  ಬರುತ್ತದೆ ಎಂಬ ಆಶಯದಿಂದ ಬ್ಯಾಂಕಿನಲ್ಲಿ ಜನರು ಹಣ ಇಡುತ್ತಾರೆ. ಪ್ರತಿನಿತ್ಯ ತುಂಬ ಕಷ್ಟಪಟ್ಟು ಜನರು ಒಂದೊಂದು ರೂಪಾಯಿ ಸಂಗ್ರಹಿಸಿದ ಹಣವನ್ನು ಸಾವಿರಾರು ಗ್ರಾಹಕರು ನಮ್ಮ ಚರಣ್‌ ಬ್ಯಾಂಕಿನಲ್ಲಿ ಠೇವಣಿ ಇಟ್ಟಿದ್ದಾರೆ. ಗ್ರಾಹಕರು ಇಟ್ಟಿರುವ ಕೋಟ್ಯಾಂತರ ಹಣ ಬ್ಯಾಂಕಿನಲ್ಲಿ ಸುರಕ್ಷಿತವಾಗಿದೆ. ಎಲ್ಲಾ ಸಿಬ್ಬಂದಿ ಮುತುವರ್ಜಿ ವಹಿಸಿ ಕಾರ್ಯನಿರ್ವಹಿಸುತ್ತಿರುವ ಹಿನ್ನಲೆಯಲ್ಲಿ ಈ ಬ್ಯಾಂಕ್‌ ವಿಶೇಷವಾಗಿ ಬೆಳೆಯುತ್ತಿದೆ ಎಂದು ಶ್ರೀಗಳು ತಿಳಿಸಿದರು. ನ್ಯಾಯಮಾರ್ಗದಲ್ಲಿ ಸಂಪಾದಿಸುವಂತಹ ಹಣ ಎಂದಿಗೂ ಸುರಕ್ಷಿತವಾಗಿರುತ್ತದೆ. ನ್ಯಾಯಯುತ ಮಾರ್ಗದಲ್ಲಿ ನಡೆಸುವಂತಹ ಸಂಸ್ಥೆಗಳು ತಮ್ಮ ಗ್ರಾಹಕರಿಗೂ ಉತ್ತಮ ಲಾಭ ತಂದುಕೊಡುತ್ತವೆ. ಅಂತಹ ಬ್ಯಾಂಕುಗಳಲ್ಲಿ ಇಟ್ಟಿರುವಂತಹ ಹಣವೂ ಸುರಕ್ಷಿತವಾಗಿರುತ್ತದೆ. ಚರಣ್‌ ಬ್ಯಾಂಕ್‌ ನ್ಯಾಯಯುತವಾದ ಮಾರ್ಗ ಅನುಸರಿಸಿಕೊಂಡು ಮುನ್ನಡೆಯುತ್ತಿದ್ದು ಅಭಿವೃದ್ದಿ ಹೊಂದುತ್ತಿದೆ ಎಂದು ಹೇಳಿದರು. ಶೃಂಗೇರಿ ಮಠದ ಆಡಳಿತಾಧಿಕಾರಿ ಹಾಗೂ ಪದ್ಮಶ್ರೀ ಪುರಸ್ಕೃತ ಡಾ.ವಿ.ಆರ್‌ ಗೌರಿಶಂಕರ್‌ ಮಾತನಾಡಿ, ಯಾವುದೇ ಬ್ಯಾಂಕುಗಳು ಚೆನ್ನಾಗಿ ನಡೆಯಬೇಕಾದರೆ ಗ್ರಾಹಕರ ಪಾತ್ರ ಅತಿ ಮುಖ್ಯ. ಇದೇ ನಿಟ್ಟಿನಲ್ಲಿ ಶ್ರೀ ಚರಣ್‌ ಸೌಹಾರ್ದ ಕೋ-ಆಪರೇಟಿವ್‌ ಬ್ಯಾಂಕ್‌ ಸಾವಿರಾರು ಗ್ರಾಹಕರು ವಿಶ್ವಾಸ ಗಳಿಸುವ ಮೂಲಕ ವೇಗವಾಗಿ ಅಭಿವೃದ್ದಿಯಾಗಿದೆ. ಬ್ಯಾಂಕ್‌ ಆರಂಭವಾಗಿ 25 ವರ್ಷವಾಗಿದೆ. ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಇನ್ನೂ ಎತ್ತರಕ್ಕೆ ಬೆಳೆಯುವ ಮೂಲಕ ನೂರಾರು ವರ್ಷಗಳ ಗ್ರಾಹಕರ ಉತ್ತಮ ಸೇವೆಗೆ ಚರಣ್‌ ಬ್ಯಾಂಕ್ ಸದಾ ಸಿದ್ದವಿದೆ ಎಂದು ತಿಳಿಸಿದರು. ಚರಣ್‌ ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷ ಶ್ರೀ ಬಿ.ವಿ ದ್ವಾರಕಾನಾಥ್‌, ಉಪಾಧ್ಯಕ್ಷೆ ಶ್ರೀಮತಿ ಶುಭಪ್ರದಾ ಮತ್ತು ಬ್ಯಾಂಕಿನ ನಿರ್ದೇಶಕರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವರದಿ – ಹರೀಶ ಶೇಟ್ಟಿ ಬೆಂಗಳೂರು.

Leave a Reply

Your email address will not be published. Required fields are marked *