ಭಾರತ ದೇಶ ಜಾನಪದ ಸಂಸ್ಕೃತಿಯಿಂದ ಅತ್ಯಂತ ಶ್ರೀಮಂತವಾಗಿದೆ : ಬಸವರಾಜ ಪಾಟೀಲ ಸೇಡಂ.
ಚಿಟಗುಪ್ಪಾ : ಭಾರತ ದೇಶ ಜಾನಪದ ಸಂಸ್ಕೃತಿಯಿಂದ ಅತ್ಯಂತ ಶ್ರೀಮಂತವಾಗಿದೆ. ಜಾನಪದ ಕಲೆ ಸಂಸ್ಕೃತಿಯ ಪ್ರತಿಬಿಂಬವಾಗಿದ್ದು ಅದು ನಾಡಿನ ಘನತೆ ಗೌರವಗಳನ್ನು ಹೆಚ್ಚಿಸಿದೆ. ಕಲೆ, ಸಾಹಿತ್ಯ, ಡೊಳ್ಳು ಕುಣಿತ, ಕಂಸಾಳೆ, ಕರಡಿ ಮಜಲು, ವೀರಗಾಸೆ, ನಂದಿಕೋಲು ಕುಣಿತ, ನಾಟಕ ಬಯಲಾಟ, ದೊಡ್ಡಾಟ, ವಿವಿಧ ಬಗೆಯ ನೃತ್ಯ, ಯಕ್ಷಗಾನ ಮುಂತಾದ ವಿವಿಧ ಪ್ರಕಾರಗಳನ್ನು ನಮ್ಮ ಜಾನಪದ ಸಂಸ್ಕೃತಿಯಲ್ಲಿ ಕಾಣುತ್ತೇವೆ ಎಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ರವರು ನುಡಿದರು. ನಗರದ ನಾಂದೇಡಿ ಕಲ್ಯಾಣ ಮಂಟಪದಲ್ಲಿ ಜರುಗಿದ ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಚಿಟಗುಪ್ಪಾ ಘಟಕದ ಉದ್ಘಾಟನಾ ಸಮಾರಂಭ ಹಾಗೂ ರಾಷ್ಟ್ರೀಯ ಲೋಕ ನೃತ್ಯ ಭಾರತ್ ಭಾರತಿ ಕಾರ್ಯಕ್ರಮದಲ್ಲಿ ಸಮಾರಂಭವನ್ನು ಉದ್ಘಾಟಿಸಿ (ಡೊಳ್ಳು ಬಾರಿಸಿ ಚಾಲನೆ ನೀಡಿ) ಮಾತನಾಡಿದ ಅವರು ಜಾನಪದ ಗೀತೆ,ನೃತ್ಯಗಳು ಅತ್ಯಂತ ವೈವಿಧ್ಯಮಯವಾಗಿ ಭಾರತದ ವಿವಿಧ ಪ್ರದೇಶಗಳ ಪ್ರಾದೇಶಿಕ ಸೊಗಡುಗಳನ್ನು ನಮ್ಮ ಮುಂದಿನ ಪೀಳಿಗೆಗೆ ಜೋಪಾನ ಮಾಡಿವೆ ಎಂದರೆ ತಪ್ಪಲ್ಲ. ಇಂದಿನ ಪಾಶ್ಚಾತ್ಯ ಶೈಲಿಯ ಸಂಗೀತದ ಮಧ್ಯೆ ಜಾನಪದ ಸಂಸ್ಕೃತಿ ತನ್ನ ಹಿಂದಿನ ವೈಭವವನ್ನು ಸ್ವಲ್ಪಮಟ್ಟಿಗೆ ಕಳೆದುಕೊಂಡಿವೆ ಎಂದೆನಿಸಿದರೂ ತನ್ನ ಮೂಲನೆಲೆಯಾದ ಹಳ್ಳಿಗಳಲ್ಲಿ ಇನ್ನೂ ತನ್ನ ನೆಲೆಯನ್ನು ಬದ್ರವಾಗಿ ಊಳಿಸಿಕೊಂಡಿರುವುದು ಸಮಾಧಾನ ತರುವ ಸಂಗತಿಯಾಗಿದೆ. ಜಾನಪದ ಕಲಾ ಲೋಕ ಸಂಸ್ಕೃತಿ ಆಯಾ ಪ್ರದೇಶದ ಜನರ ದೈನಂದಿನ ಚಟುವಟಿಕೆಗಳನ್ನು, ಕೌಟುಂಬಿಕ ಜೀವನವನ್ನು, ಸಂಬಂಧಗಳನ್ನು, ಧಾರ್ಮಿಕ ಆಚರಣೆಗಳನ್ನು ನಮ್ಮ ಮುಂದೆ ತೆರೆದಿಡುತ್ತವೆ. ಈ ಜಾನಪದ ಸಂಪ್ರದಾಯ ಸೃಷ್ಟಿಸಿದವರು ಯಾರೆಂದು ಹೇಳುವುದಕ್ಕೆ ಸಾಧ್ಯವಿಲ್ಲ. ಇವು ಹಳ್ಳಿಯು ಸಾಮಾನ್ಯ ಜನರ ನಡುವೆ ಹುಟ್ಟಿ ಬೆಳೆದು ಬಂದ ಜನಸಾಮಾನ್ಯರ ಸಂಸ್ಕೃತಿ. ಸಧ್ಯ ಇಲ್ಲಿನ ದೃಶ್ಯವನ್ನು ಕಂಡರೆ ದೇಶದ ಎಲ್ಲ ರಾಜ್ಯಗಳ ಸಂಸ್ಕೃತಿ, ಸಂಪ್ರದಾಯ ಎದ್ದು ಕಾಣುತ್ತದೆ, ಎಲ್ಲಾ ಭಾಷೆಗಳ ಮೂಲ ನೆಲೆ ಜಾನಪದ ಸಂಸ್ಕೃತಿಯ ಜೀವನಾಡಿಯಾದಾಗಿದೆ, ಚಿಟಗುಪ್ಪಾ ತಾಲೂಕಿನ ವತಿಯಿಂದ ಆಯೋಜಿಸಿದ್ದ ಈ ಕಾರ್ಯಕ್ರಮ ನಾಡಿಗೆ ಮಾದರಿ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಬಿಜೆಪಿಯ ಅಧ್ಯಕ್ಷ ಶಿವಾನಂದ ಮಂಠಳಾಕರ್ ಮಾತನಾಡಿ
ನಮ್ಮ ಜಾನಪದ ಲೋಕ ಕಲೋಪಾಸಕತ್ವವನ್ನು,ಸೃಜನಶೀಲತೆಯನ್ನು, ಮತ್ತು ಮಾಧುರ್ಯವನ್ನು ಹಿರಿಯರಿಗೆ ತಿಳಿಯದಂತೆ ಅವರ ಜೀವನ ವಿಧಾನವನ್ನಾಗಿ ಪರಿವರ್ತಿಸಿದ ಸಂಸ್ಕೃತಿಯೊಂದರ ಹೆಜ್ಜೆಗುರುತುಗಳು ಇದಾಗಿದೆ. ಪ್ರಾಯಶಃ ಸಹಸ್ರಾರು ವರ್ಷದ ಹಿಂದೆ ಜಗತ್ತಿನಲ್ಲೆಲ್ಲ ಇದ್ದುದ್ದು ಜಾನಪದವೊಂದೇ, ಮಾನವನು ತಾನು ಮಾಡುವ ಕೆಲಸಗಳಲ್ಲೆಲ್ಲಾ ತನ್ಮಯತೆಯನ್ನು ತುಂಬಲು ಮಾಡಿದ ಪ್ರಯತ್ನಗಳ ಸರಮಾಲೆಯೇ ಜಾನಪದವಾಗಿದೆ. ಜಾನಪದ ಸಾಮಾಜಿಕ ವ್ಯವಸ್ಥೆಯನ್ನು ಸೂಚಿಸುತ್ತದೆ. ಪ್ರತಿಯೊಂದು ಸಾಮಾಜವೂ ತನ್ನ ಪುರಾತನರ ಸಾರವನ್ನು ಹೀರಿ ತನ್ನ ಸದ್ಯದ ಬದುಕಿಗೊಂದು ಅರ್ಥವನ್ನೂ,ತನ್ನ ಸದ್ಯದ ಸಮಸ್ಯೆಗಳಿಗೊಂದು ಪರಿಹಾರವನ್ನೂ,ತನ್ನ ಭಕ್ತಿಗೊಂದು ರೂಪವನ್ನೂ -ಕಲೆ,ತಂತ್ರಜ್ಞಾನ ಇತ್ಯಾದಿಗಳ ಬೆಳವಣಿಗೆಯನ್ನೂ ಸಾಮುದಾಯಿಕವಾಗಿ ನಿರ್ವಹಿಸುತ್ತದೆ. ಇದು ಯಾವುದೇ ಅಧಿಕಾರದ, ಸಂಪ್ರದಾಯದ ಪೋಷಣೆಯಿಲ್ಲದೇ ತನ್ನಿಂದ ತಾನೇ ಹರಿದು ಬಂದು ಮಣ್ಣಿನ ಸಂಸ್ಕೃತಿಯ ಸಾರವಾಗಿ ಜಾನಪದ ಬೆಳೆದಿದೆ. ಈ ದಿಸೆಯಲ್ಲಿ ಚಿಟಗುಪ್ಪಾ ತಾಲೂಕು ಜಾನಪದ ಪರಿಷತ್ತು ಒಂದು ಅತ್ಯುತ್ತಮ ಜಾನಪದ ಲೋಕ ನೃತ್ಯ ಕಾರ್ಯಕ್ರಮ ಹಮ್ಮಿಕೊಂಡಿದ್ದು ಶ್ರೇಷ್ಠ ಬೆಳವಣಿಗೆ ಸಾಕ್ಷಿಯಾಗಿದೆ ಎಂದರು. ದಕ್ಷಿಣ ಮಧ್ಯ ವಲಯ ಸಾಂಸ್ಕೃತಿಕ ಕೇಂದ್ರ ನಾಗಪುರದ ಮುಖ್ಯ ಆಡಳಿತಾಧಿಕಾರಿ ದೀಪಕ್ ಪಾಟೀಲ ಮಾತನಾಡಿ ಬದುಕಿನ ಸೂಕ್ಷ್ಮ ಸಂಗತಿಗಳನ್ನು ಜಾನಪದ ಒಳಗೊಂಡಿರುತ್ತದೆ. ಜನತೆಯ ಸರ್ವತೋಮ ಅಭವೃದ್ದಿಗೆ ಜಾನಪದ ಸಂಸ್ಕೃತಿ ಆಸರೆಯಾಗುತ್ತದೆ. ಜನಪದರ ಬದುಕಿನ ಸಾವಿರಾರು ಸಂಗತಿಗಳು ಜಾನಪದದಲ್ಲಿ ಹಾಸು ಹೊಕ್ಕಾಗಿ ಸೇರುತ್ತದೆ. ಪ್ರಾಯಶಃ ಜಾನಪದದಲ್ಲಿ ವ್ಯಾಪಕ ಮತ್ತು ವಿಶಾಲವಾದ್ದು ಮತೊಂದಿಲ್ಲ. ದೇವರಲ್ಲಿ ಭಕ್ತಿ ಪ್ರೇಮ ಮನೆಯ ಕುರಿತಾದ ಹೆಮ್ಮೆ, ತಾಯಿಯ ವಾತ್ಸಲ್ಯ ತವರಿನ ಹಂಬಲ ಹೀಗೆ ನೂರೆಂಟು ಬಗೆ ವಿಸ್ವಾಸಲೋಕದ ಚಿತ್ತಾರವೇ ಜಾನಪದದ ಭಾಗವಾಗಿದೆ. ಈ ನಿಟ್ಟಿನಲ್ಲಿ ಮಹಾರಾಷ್ಟ್ರದ ಲಾವಣಿ ಜನಪದ ನೃತ್ಯ , ಮಧ್ಯಪ್ರದೇಶದ ಬದಾಯಿ ಜನಪದ ನೃತ್ಯ, ಓಡಿಸ್ಸಾ ರಾಜ್ಯದ ಶಂಕವಾದನ ಜನಪದ ನೃತ್ಯ, ಪಂಜಾಬಿನ ಭಾಂಗಡಾ ಜನಪದ ನೃತ್ಯ, ಜಮ್ಮು-ಕಾಶ್ಮೀರ ರಾಜ್ಯದ ರೂಪ್ ಜನಪದ ನೃತ್ಯ, ಛತ್ತೀಸ್ಗಢ ರಾಜ್ಯದ ಕಕ್ಷರ ಜನಪದ ನೃತ್ಯ,
ಕರ್ನಾಟಕ ರಾಜ್ಯದಿಂದ ಲಂಬಾಣಿ ಜನಪದ ನೃತ್ಯ ಮತ್ತು ಹಲಗೆ ಜನಪದ ನೃತ್ಯ ಕಲಾವಿದರು ಆಗಮಿಸಿದಾರೆ.ಅವರ ಕಲಾ
ನೃತ್ಯವನ್ನು ನೋಡಿ ತಾವೆಲ್ಲರೂ ಆನಂದಿಸಬೇಕು. ಜನಪದ ಕಲಾವಿದರಿಗೆ ಸ್ಪೂರ್ತಿ ನೀಡಿ, ಜಾನಪದ ಸಂಸ್ಕೃತಿ ಉಳಿಸಿ, ಬೆಳೆಸುವ ಕೆಲಸ ನಾವೆಲ್ಲರೂ ಸೇರಿ ಮಾಡೋಣ, ಈ ಕಾರ್ಯಕ್ರಮ ಆಯೋಜನೆಗೆ ಕಾರಣಭೂತರಾದ ಚಿಟಗುಪ್ಪಾ ತಾಲೂಕಿನ ಜಾನಪದ ಪರಿಷತ್ತಿನ ಪದಾಧಿಕಾರಿಗಳಿಗೆ ತುಂಬು ಹೃದಯದ ಧನ್ಯವಾದಗಳು ಎಂದು ತಿಳಿಸಿದರು. ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷ ಡಾ.ಜಗನ್ನಾಥ ಹೆಬ್ಬಾಳೆ ಮಾತನಾಡಿ ಜಾನಪದ ಸಾಮಾನ್ಯವಾಗಿ ಅನಕ್ಷರ ಜ್ಞಾನವಾಗಿದೆ. ಇದು ಆಡುಮಾತಿನಲ್ಲಿ ಇರುವಂತಹದು. ಹೀಗಾಗಿ ಜಾನಪದ ಸರಳತೆ ಹಾಗೂ ಸ್ಪಷ್ಟತೆಯಿಂದ ಕೂಡಿದೆ. ತಮಗೆ ಅನಿಸಿದ ಭಾವನೆಗಳನ್ನು ನೇರವಾಗಿ ಬಿಚ್ಚು ಮನಸ್ಸಿನಿಂದ ಹೇಳುವ ಕಲೆಗಾರಿಕೆ ಜನಪದರಾಗಿದ್ದಾರೆ. ಜನಪದರ ಮಾತು ಸರಳವಾಗಿದ್ದರೂ ಸಹ ಅದರ ಅರ್ಥ ನಿಗೂಢತೆಯಿಂದ ಕೂಡಿರುತ್ತದೆ.ಜಾನಪದ ಎಲ್ಲ ವರ್ಗಗಳಲ್ಲಿ ಕಂಡು ಬಂದರೂ ಅದು ಯಾವುದೇ ವರ್ಗಕ್ಕೆ, ಜಾತಿಗೆ, ಸೀಮಿತವಾದುದಲ್ಲ ಅದು ಎಲ್ಲರ ಮಧ್ಯ ಸರ್ವ ಸಾಧಾರಣವಾಗಿ ಇರುವಂತಹದು. ಕೆಲವು ಸಾಂಧರ್ಭಿಕ ವ್ಯತ್ಯಾಸಗಳನ್ನು ಬಿಟ್ಟರೆ ಮಾನವರಲ್ಲಿ ಒಟ್ಟಾಗಿ ಅನುಸರಿಸುವ ಆಚರಿಸುವ, ನಡುವಳಿಕೆ ವಿಚಾರ ಆಚಾರಗಳಿವೆ. ಇವು ಜಾನಪದ ಒಳಗೊಂಡಿರುವ ಸರ್ವಸಾಮಾನ್ಯ ಅಂಶಗಳಾಗಿವೆ. ಜಾನಪದ ಸರ್ವಸಾಧಾರಣಾಗಿ ಎಲ್ಲರೂ ಬಳಕೆ ಮಾಡುತ್ತಾರೆ. ವಿವಿಧ ರಾಜ್ಯಗಳ ಜಾನಪದ ಕಲಾವಿದರು ಅವರ ಅದ್ಭುತವಾದ ಕಲಾ ಸೇವೆಯನ್ನು ನೀಡಿ ಅವರ ಸಂಸ್ಕೃತಿಯನ್ನು ಪರಿಚಯಿಸುವ ಕೆಲಸ ಮಾಡುತ್ತಿರುವುದು ಹೆಮ್ಮೆಯ ಬೆಳವಣಿಗೆ ಎಂದರು. ರಾಷ್ಟ್ರೀಯ ಬುಡಕಟ್ಟು ಪರಿಷತ್ತಿನ ಕಾರ್ಯದರ್ಶಿ ಡಾ.ರಾಜಕುಮಾರ ಹೆಬ್ಬಾಳೆ ಮಾತನಾಡಿ ಜಾನಪದ ಜನರ ಜೀವನದಲ್ಲಿ ಹಾಸು ಹೊಕ್ಕಾಗಿದೆ. ಪ್ರಸ್ತುತ ಸಂದರ್ಭದಲ್ಲಿ ಜಾನಪದ ಕಲೆ,ನೃತ್ಯ ಅವಶ್ಯವಾಗಿದೆ. ಎಲೆಮರೆಯ ಕಾಯಿಯಂತಿರುವ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ವೇದಿಕೆ ಕಲ್ಪಿಸಿಕೊಡುವ ಕಾರ್ಯ ಜನಪದ ಕಲೆಯ ಬೆಳವಣಿಗೆಗೆ ಸಾಕ್ಷಿಯಾಗಿದ್ದು, ಜಾನಪದ ಸಂಸ್ಕೃತಿ ಜನಸಾಮಾನ್ಯರಿಗೆ ದಿನದ ದುಡಿಮೆಯ ಬೇಸರವನ್ನು ಮನಸ್ಸಿನ ಭಾರವನ್ನು ನೀಗಿಸುವಲ್ಲಿ ಕಲೆ ಮನೋಲ್ಲಾಸವನ್ನು ಕೊಡುತ್ತದೆ. ವಿವಿಧ ರಾಜ್ಯಗಳ ಜಾನಪದದ ಸಾಂಸ್ಕೃತಿಕ ನೃತ್ಯಗಳು ಉತ್ತಮ ಸಂದೇಶ ಬೀರುತ್ತಾ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಪ್ರೇರಣೆ ನೀಡುತ್ತವೆ ಎಂದರು. ತಾಲೂಕು ಜಾನಪದ ಪರಿಷತ್ತಿನ ಅಧ್ಯಕ್ಷ ಸಂಗಮೇಶ ಎನ್ ಜವಾದಿಯವರು ವೇದಿಕೆ ಮೇಲಿದ್ದ ಗಣ್ಯರನ್ನು ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಾನಪದ ಪರಿಷತ್ತಿನ ಜಿಲ್ಲಾ ಸಂಚಾಲಕ ಡಾ.ರಾಜಕುಮಾರ ಹೆಬ್ಬಾಳೆ, ಜಿಲ್ಲಾ ಗಾನಯೋಗಿ ಪಂಚಾಕ್ಷರಿ ಗವಾಯಿ ಸೇವಾ ಸಂಘದ ಅಧ್ಯಕ್ಷ ಸಂಗಯ್ಯ ಕಲ್ಮಠ,ವಿಕಾಸ ಅಕಡಾಮಿಯ ಪ್ರಮುಖರಾದ ಶಿವಶಂಕರ ತರನ್ನಳ್ಳಿ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಜಪ್ಪಾ ಜಮಾದರ,ಬಿಜೆಪಿಯ ಮುಖಂಡರಾದ ಸೂರ್ಯಕಾಂತ ಮಠಪತಿ, ಜೆಡಿಎಸ್ ಮುಖಂಡರಾದ ಶಿವರಾಜ ಹುಲಿ, ಕಜಾಪ ಬೀದರ ಘಟಕದ ಅಧ್ಯಕ್ಷ ಎಸ್ ಬಿ ಕೊಚಬಾಳ, ಕಜಾಪ ಹುಮನಾಬಾದ ಘಟಕದ ಅಧ್ಯಕ್ಷ ಶರದಕುಮಾರ್ ನಾರಾಯಣಪೇಟಕರ್, ಹಾಸ್ಯ ಕಲಾವಿದ ನವಲಿಂಗ ಪಾಟೀಲ, ಕಜಾಪ ಜಿಲ್ಲಾ ಪ್ರಧಾನಕಾರ್ಯದರ್ಶಿ ನಿಜಲಿಂಗಪ್ಪ ತಗಾರೆ, ಪರಿಷತ್ತಿನ ಪದಾಧಿಕಾರಿಗಳಾದ ಡಾ.ದಯಾನಂದ ಕಾರಬಾರಿ,ದಯಾನಂದ ಕಾಂಬ್ಳೆ, ವಿಜಯಕುಮಾರ್ ಚಿಟಗುಪ್ಪಾಕರ್, ಪರಿಷತ್ತಿನ ಗೌರವಾಧ್ಯಕ್ಷರಾದ ಮಾಹಾರುದ್ರಪ್ಪಾ ಅಣದೂರ, ನೀಲಕಂಠರಾವ ಇಸ್ಲಾಂಪೂರ, ಸಂಚಾಲಕರಾದ ಬಾಬುರಾವ ಅಂಬ್ಲೆ, ಶ್ರೀಮತಿ ಸವಿತಾ ಪಾಟೀಲ, ಕಾರ್ಯದರ್ಶಿ ಶಿವದೇವ ಸ್ವಾಮಿ, ಸಹ ಕಾರ್ಯದರ್ಶಿ ಸತ್ಯನಾರಾಯಣ ಮಾಳಾ, ಶಾಂತಕುಮಾರ್ ಪಾಟೀಲ, ಆರ್. ಎಸ್. ಪಾಟೀಲ, ಅನಿಲಕುಮಾರ ಶೀರಮುಂಡಿ,ವಿಜಯಕುಮಾರ್ ಬೂಮ್ಮಣಿ,ಅಮಿತ್ ತೊಗಲೂರ್,ಆನಂದಯ್ಯ ಮಠಪತಿ, ಪಂಡರಿ ಮಾನೆ, ರಾಮದಾಸ್ ಮಂಕಲ್, ಸಲೀಂ ಖುರೇಷಿ, ವೆಂಕಟ್ ಮದರಾಂವ,ರಮೇಶ ಪಾರಾ,ನಾಗೇಶ ಚಕಡಿ,ತುಕರಾಮ ಅಂಬೆಗಾರ, ರಾಘವೇಂದ್ರ ಕುಲಕರ್ಣಿ, ಸಚೀನ ಮಠಪತಿ, ಅರವಿಂದ್ ಕುಕಡಾಲ್, ಅಜಮತ್, ಓಂಕಾರ ರಡ್ಡಿ, ಮಲ್ಲಿಕಾರ್ಜುನ ಸಂಗಿ,ಸಿದ್ದಾರ್ಥ ಮಿತ್ರಾ, ಶ್ರೀನಿವಾಸ ಕುಲಕರ್ಣಿ, ಸಂತೋಷ ಕೊಡ್ಲಿ, ಸಂತೋಷ ಹಂದಿಕೇರಾ, ಶಿಕ್ಷಕರು, ಪೊಲೀಸ್ ಇಲಾಖೆ ಸಿಬ್ಬಂದಿ, ಮಕ್ಕಳು ಸೇರಿದಂತೆ ಅಪಾರ ಪ್ರಮಾಣದಲ್ಲಿ ಜಾನಪದ ಕಲಾಭಿಮಾನಿಗಳು ಹಾಜರಿದ್ದರು.
ವರದಿ – ಸಂಗಮೇಶ ಎನ್ ಜಾವದಿ