ಬೆಳೆ, ಮನೆಹಾನಿ ಸಮೀಕ್ಷೆ ನಡೆಸಿ ತಕ್ಷಣ ಪರಿಹಾರ ನೀಡಲು ಸಚಿವ ಗೋವಿಂದ ಕಾರಜೋಳ ಸೂಚನೆ……
ಬೆಳಗಾವಿ : ಇತ್ತೀಚಿನ ಮಳೆಯಿಂದ ಜಿಲ್ಲೆಯಲ್ಲಿ ಉಂಟಾಗಿರುವ ಬೆಳೆ ಹಾಗೂ ಮನೆಹಾನಿಯನ್ನು ನಿಖರವಾಗಿ ಸಮೀಕ್ಷೆ ನಡೆಸಿ ತಕ್ಷಣವೇ ಪರಿಹಾರವನ್ನು ನೀಡಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಅತಿವೃಷ್ಟಿ ಹಾಗೂ ಪ್ರವಾಹ ಮುಂಜಾಗ್ರತೆ ಕುರಿತು ಚಿಕ್ಕೋಡಿಯಲ್ಲಿ ಸೋಮವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಾ ಇತ್ತೀಚಿನ ಮಳೆಯಿಂದ 877 ಹೆಕ್ಟೇರ್ ಪ್ರದೇಶ ಜಲಾವೃತಹೊಂಡಿರುವುದರಿಂದ ನೀರು ಸರಿದ ಬಳಿಕ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡಬೇಕು. ಇದಲ್ಲದೇ ಹಾನಿಗೊಳಗಾಗಿರುವ ಒಟ್ಟಾರೆ 775 ಮನೆಗಳಿಗೂ ಕೂಡ ಮಾರ್ಗಸೂಚಿ ಪ್ರಕಾರ ತಕ್ಷಣವೇ ಪರಿಹಾರವನ್ನು ನೀಡಬೇಕು ಎಂದು ಹೇಳಿದರು. ಮನೆಹಾನಿಗಳಿಗಾಗಿ ಜಿಲ್ಲೆಯಲ್ಲಿ 924 ಕೋಟಿ ರೂಪಾಯಿ ಪರಿಹಾರ ವಿತರಣೆ ಮಾಡಲಾಗಿದೆ, ಸಧ್ಯ ಸಂಭವಿಸುವ ಮನೆಹಾನಿ ವಸ್ತುನಿಷ್ಠ ಸಮೀಕ್ಷೆಗೆ ಸೂಚನೆ ನೀಡಿದರು, ಬೆಳೆಹಾನಿ ಡ್ರೋಣ್ ಸಮೀಕ್ಷೆ ಮಾಡಬೇಕು, ರಸ್ತೆಗಳು ಹಾಳಾಗಿದ್ದರೆ ಎನ್.ಆರ್.ಇ.ಜಿ. ಯೋಜನೆಯಡಿ ದುರಸ್ತಿ ಕಾರ್ಯ ಕೈಗೊಳ್ಳಬೇಕು ಹಾಗೂ ಚಿಕ್ಕೋಡಿ ಉಪ ವಿಭಾಗದಲ್ಲಿ 88 ಗ್ರಾಮಗಳು ಪ್ರವಾಹದಿಂದ ಬಾಧಿತ ಸಾಧ್ಯತೆಗಳಿವೆ ಎಂದರು. ಈ ವೇಳೆ ಚಿಕ್ಕೋಡಿ-ಸದಲಗಾ ಶಾಸಕ ಗಣೇಶ್ ಹುಕ್ಕೇರಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್.ವಿ., ಪೊಲೀಸ್ ವರಿಷ್ಢಾಧಿಕಾರಿ ಡಾ.ಸಂಜೀವ ಪಾಟೀಲ, ಕೃಷಿ, ತೋಟಗಾರಿಕೆ, ಕಂದಾಯ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ವರದಿ – ಮಹೇಶ ಶರ್ಮಾ