ಪ್ರಜಾಪ್ರಭುತ್ವದಲ್ಲಿ ಪತ್ರಿಕೆಗಳಿಗೆ ತುಂಬಾ ಮಹತ್ವವಿದೆ……
ಚಿಟಗುಪ್ಪ – ಪ್ರಜಾಪ್ರಭುತ್ವದಲ್ಲಿ ಪತ್ರಿಕೆಗಳ ಮೂಲಕ ಪತ್ರಕರ್ತರು ರೂಪಿಸುವ ಸಾಮಾಜಿಕ ಅಭಿಪ್ರಾಯಗಳಿಗೆ ತುಂಬಾ ಮಹತ್ವವಿದೆ ಎಂದು ವೀರಶೇಟ್ಟಿ ಮೈಲೂರಕರ್ ಹೇಳಿದರು. ನಗರದಲ್ಲಿ ತಾಲೂಕು ಕಸಾಪ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು ಪ್ರಜೆಗಳು ಮತ್ತು ಪ್ರಭುತ್ವದ ನಡುವಿನ ಕೊಂಡಿಯಂತೆ ಕೆಲಸ ಮಾಡುವ ಪತ್ರಿಕಾರಂಗ, ಪ್ರಜಾಪ್ರಭುತ್ವವನ್ನು ಬಲಗೊಳಿಸುವ ವಿಚಾರಗಳ ಮೂಲಕ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವ ಮಹತ್ತರ ಜವಾಬ್ದಾರಿಯನ್ನು ಹೊತ್ತಿದೆ.ಜನಸಾಮಾನ್ಯರ ನೋವಿಗೆ ಸ್ಪಂದಿಸುವ ಕೆಲಸ ಪತ್ರಿಕಾ ಧರ್ಮ ಮಾಡುತ್ತಿದೆ. ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಒದಗಿಸುವ ಕೆಲಸದ ಜೊತೆಗೆ ಪ್ರಜಾಪ್ರಭುತ್ವ ಉಳಿವಿಗಾಗಿ ಪತ್ರಕರ್ತರು ಪ್ರಾಮಾಣಿಕವಾಗಿ ಶ್ರಮಿಸಬೇಕೆಂದು ತಿಳಿಸಿದರು. ಮಾಜಿ ಪುರಸಭೆ ಸದಸ್ಯರು ಹಾಗೂ ಬಿಜೆಪಿ ಮುಖಂಡರಾದ ರೇವಣ್ಣಪ್ಪಾ ಹೂಗಾರ ಮಾತನಾಡಿ ಇದ್ದಿದ್ದು ಇದ್ದಂಗೆ ಹಾಗೆ ಹೇಳಿ ಸಮಾಜ ತಿದ್ದುವ ಕೆಲಸ ಪತ್ರಕರ್ತರು ಮಾಡುತ್ತಿರುವುದು ಹೆಮ್ಮೆ ಇದೆ ಎಂದರು. ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ನವೀನ್ ಗಂಜಿ ಮತ್ತು ಸುರೇಶ ಚೌಧರಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ಪರಿಷತ್ತಿನ ಅಧ್ಯಕ್ಷ ರಮೇಶ ಸಲಗರ್ ಮಾತನಾಡಿ ಜನಸಾಮಾನ್ಯರ ನಡುವಿನ ಸಂಪರ್ಕ ಸೇತುವೆಯಾಗಿ, ಸಮಾಜದ ಅಂಕುಡೊಂಕುಗಳ ಚಿಕಿತ್ಸಕರಾಗಿ ದುಡಿಯುತ್ತಿರುವ ಪತ್ರಕರ್ತರ ಸೇವೆ ದೊಡ್ಡದು,ವರ್ತಮಾನದ ದಿನಗಳಲ್ಲಿ ಸತ್ಯಶೋಧಿಸುವ, ಧೈರ್ಯದಿಂದ ಅಭಿವ್ಯಕ್ತಿಸುವ ಮಾಧ್ಯಮದ ಶಕ್ತಿ ಪ್ರಜ್ವಲವಾಗಿ ಬೆಳಗಲಿ ಎಂದರು. ಈ ಸಂದರ್ಭದಲ್ಲಿ ಎಲ್ಲಾ ಪತ್ರಕರ್ತ ಬಂಧುಗಳಿಗೆ ಗೌರವ ಸನ್ಮಾನ ಮಾಡಲಾಯಿತು. ಶಿಕ್ಷಕ ರಾಜಶೇಖರ ಉಪ್ಪಿನ ಸ್ವಾಗತಿಸಿದರು,ಸವಿತಾ ಪಾಟೀಲ ನಿರೂಪಿಸಿದರು. ಕಾರ್ಯಕ್ರಮದಲ್ಲಿ ರೇವಶೆಟ್ಟಿ ತಂಗಾ, ಶಾಂತಕುಮಾರ್ ಪಾಟೀಲ, ತುಕಾರಾಮ ಅಂಬೆಗಾರ, ಪಂಡಿತ ಕಲ್ಯಾಣಿ, ಆಸ್ಲಾಂಮೀಯಾ, ಶಿವಕುಮಾರ ಸೇರಿದಂತೆ ಪರಿಷತ್ತಿನ ಪದಾಧಿಕಾರಿಗಳು ಹಾಗೂ ಪತ್ರಕರ್ತರು ಹಾಜರಿದ್ದರು.
ವರದಿ –ಸಂಗಮೇಶ ಎನ್ ಜವಾದಿ.