ಮಕ್ಕಳ ಕೊರತೆ ಕಾರಣದಿಂದ ಸರಕಾರಿ ಶಾಲೆಗಳ ವೀಲಿನಕ್ಕೆ: ಆಮ್ ಆದ್ಮಿ ಪಕ್ಷದ ವಿರೋಧ..
ಗಂಗಾವತಿ: ಸರಕಾರಿ ಶಾಲೆಗಳಲ್ಲಿ ಮಕ್ಕಳ ಕೊರತೆಯ ಕಾರಣಕ್ಕೆ ಗಂಗಾವತಿ, ಕನಕಗಿರಿ ಹಾಗೂ ಕಾರಟಗಿ ತಾಲೂಕು ವ್ಯಾಪ್ತಿಯ ೩೨ ಸರಕಾರಿ ಶಾಲೆಗಳನ್ನು ವೀಲಿನಗೊಳಿಸಲು ಮುಂದಾಗಿರುವ ಸರಕಾರದ ಕ್ರಮಕ್ಕೆ ಆಮ್ ಆದ್ಮಿ ಪಕ್ಷವು ವಿರೋಧ ವ್ಯಕ್ತಪಡಿಸಿ, ಗಂಗಾವತಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸಿ ವೀಲಿನ ಪ್ರಕ್ರಿಯೆಯನ್ನು ಕೈಬಿಡುವಂತೆ ಒತ್ತಾಯಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಪ್ರತಿಭಟನಾ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷರಾದ ಹುಸೇನ್‌ಸಾಬ್ ಗಂಗನಾಳರವರು ಮಾತನಾಡಿ, ಕರ್ನಾಟಕದ ಸರಕಾರಿ ಶಾಲೆಗಳಲ್ಲಿನ ಮೂಲಭೂತ ಸೌಕರ್ಯಗಳ ಕೊರತೆ, ಶಿಕ್ಷಕರ ಕೊರತೆ, ಅಗತ್ಯ ಅನುದಾನದ ಕೊರತೆ ಮುಂತಾದ ಕಾರಣದಿಂದಾಗಿ ಸರಕಾರಿ ಶಾಲೆಗಳಿಗೆ ಮಕ್ಕಳ ದಾಖಲಾತಿ ಕಡಿಮೆಯಾಗುತ್ತಿದೆ. ಶಾಲಾ ಶುಲ್ಕ ಅಧಿಕವಾದರೂ ಸಹ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಲಿ ಎಂಬ ಕಾರಣಕ್ಕೆ ಹಲವು ತಂದೆ-ತಾಯಿಯರು ತಮ್ಮ ಮಕ್ಕಳನ್ನು ಅನಿವಾರ್ಯವಾಗಿ ಖಾಸಗಿ ಶಾಲೆಗಳಿಗೆ ದಾಖಲು ಮಾಡುವ ಮೂಲಕ ಹೆಚ್ಚಿನ ಆರ್ಥಿಕ ಹೊರೆ ಅನುಭವಿಸುತ್ತಿದ್ದಾರೆ. ಆದರೆ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಸರಕಾರ ಅಧಿಕಾರಕ್ಕೆ ಬಂದಾಗಿನಿAದ ಅಲ್ಲಿನ ಸರಕಾರಿ ಶಾಲೆಗಳ ಸುಧಾರಣೆಗೆ ಹಲವಾರು ಸೂಕ್ತ ಕ್ರಮಗಳನ್ನು ಕೈಗೊಂಡು ಸರಕಾರಿ ಶಾಲೆಗಳ ಗುಣಮಟ್ಟವನ್ನು ಮೇಲ್ದರ್ಜೆಗೇರಿಸಲಾಗಿದೆ. ಒಟ್ಟು ಬಜೆಟ್‌ನ ಶೇ.೨೪ರಷ್ಟು ಮೊತ್ತದ ಅನುದಾನವನ್ನು ಶಿಕ್ಷಣ ಕ್ಷೇತ್ರಕ್ಕೆ ಖರ್ಚು ಮಾಡಲಾಗುತ್ತಿದೆ. ಇದರಿಂದಾಗಿ ದೆಹಲಿಯ ಪ್ರತಿ ಸರಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗಿದೆ. ದೆಹಲಿ ಸರಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಸ್ವಚ್ಛ ಸುಂದರ ಶಾಲಾ ವಾತಾವರಣ, ಕುಡಿಯುವ ನೀರು, ಶೌಚಾಲಯ, ಉತ್ತಮ ಆಟದ ಮೈದಾನ, ಗ್ರಂಥಾಲಯ, ಸ್ಮಾರ್ಟ್ಕ್ಲಾಸ್ ಸೌಲಭ್ಯ, ಗುಣಮಟ್ಟದ ತರಬೇತಿ ಪಡೆದ ಶಿಕ್ಷಕರು, ಪ್ರತಿ ಮಗುವಿಗೆ ಸಮಾನ ಗಮನ, ಸರಕಾರಿ ಶಾಲೆಗಳಲ್ಲಿ ಈಜುಕೊಳ ನಿರ್ಮಾಣ ಮುಂತಾದ ಕ್ರಮಗಳಿಂದಾಗಿ ದೆಹಲಿ ಸರಕಾರಿ ಶಾಲೆಗಳ ಶಿಕ್ಷಣದ ಗುಣಮಟ್ಟ ಹೆಚ್ಚಾಗಿದ್ದು, ದೆಹಲಿಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಂದ ಸರಕಾರಿ ಶಾಲೆಗಳಿಗೆ ದಾಖಲಿಸುತ್ತಿದ್ದಾರೆ. ಇದರಿಂದಾಗಿ ಸಾಮಾನ್ಯ ಜನರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಖರ್ಚು ಮಾಡುತ್ತಿದ್ದ ಮೊತ್ತ ಪಾಲಕರಿಗೆ ಉಳಿತಾಯವಾಗುತ್ತಿದೆ. ಇಲ್ಲಿಯವರೆಗೆ ಸುಮಾರು ೮ ಲಕ್ಷ ಮಕ್ಕಳು ಖಾಸಗಿ ಶಾಲೆ ತೊರೆದು ಸರಕಾರಿ ಶಾಲೆಗಳಲ್ಲಿ ದಾಖಲಾತಿ ಪಡೆದುಕೊಂಡಿದ್ದಾರೆ. ಇಂದು ದೆಹಲಿಯಲ್ಲಿ ಸರಕಾರಿ ಶಾಲೆಗಳ ಫಲಿತಾಂಶದಲ್ಲಿ ಗಣನೀಯ ಹೆಚ್ಚಳವಾಗಿದ್ದು, ಶೇ.೯೮ ರಿಂದ ೯೯ರಷ್ಟು ಮಕ್ಕಳು ಉತ್ತೀರ್ಣರಾಗುತ್ತಿದ್ದಾರೆ. ದೆಹಲಿಯಲ್ಲಿ ನಡೆಯುತ್ತಿರುವ ಈ ಶಿಕ್ಷಣ ಕ್ರಾಂತಿಯ ಬಗ್ಗೆ ದೇಶ-ವಿದೇಶಗಳಲ್ಲಿ ಚರ್ಚೆ ನಡೆಯುತ್ತಿದೆ. ದೆಹಲಿಯಲ್ಲಿ ಆಮ್ ಆದ್ಮಿ ಸರಕಾರ ಮಾಡಿದಂತೆ ಕರ್ನಾಟಕದಲ್ಲಿ ಅಭಿವೃದ್ದಿ ಮಾಡಲು ಏಕೆ ಸಾಧ್ಯವಾಗುತ್ತಿಲ್ಲ ಎಂದು ಸರ್ಕಾರವನ್ನು ಪ್ರಶ್ನಿಸಿದರು. ನಂತರ ಮಾತನಾಡಿದ ಆಮ್ ಆದ್ಮಿ ಪಕ್ಷ ತಾಲೂಕು ಅಧ್ಯಕ್ಷರಾದ ಶರಣಪ್ಪ ಸಜ್ಜಿಹೊಲ ವಕೀಲರು, ಕರ್ನಾಟಕದಲ್ಲಿ ಸರಕಾರಿ ಶಾಲೆಗಳ ಸ್ಥಿತಿ ಶೋಚನಿಯವಾಗಿದೆ. ಶಿಕ್ಷಣಕ್ಕೆ ಹೆಚ್ಚಿನ ಅನುದಾನ ನೀಡದೆ ಇರುವುದರಿಂದ ಸರಕಾರಿ ಶಾಲೆಗಳಲ್ಲಿ ಕುಡಿಯುವ ನೀರು, ಶೌಚಾಲಯ, ಶುದ್ದ ಶಾಲಾ ವಾತಾವರಣದ ಕೊರತೆ, ಅಗತ್ಯ ಶಿಕ್ಷಕರ ನೇಮಕಾತಿಗೆ ಕ್ರಮ ಕೈಗೊಳ್ಳದಿರುವ ಕಾರಣದಿಂದಾಗಿ ಇಂದು ಸರಕಾರಿ ಶಾಲೆಗಳಿಗೆ ಮಕ್ಕಳ ದಾಖಲಾತಿಯ ಕೊರತೆ ಉಂಟಾಗುತ್ತಿದೆ. ಸರಕಾರವು ಸರಕಾರಿ ಶಾಲಾ ಸುಧಾರಣೆಗೆ ಅಗತ್ಯ ಕ್ರಮ ಕೈಗೊಂಡಲ್ಲಿ ಸರಕಾರಿ ಶಾಲೆಗಳಿಗೆ ಮಕ್ಕಳು ತಾವಾಗಿಯೇ ಬರುತ್ತಾರೆ. ಆದರೆ ಇದನ್ನಾವುದನ್ನು ಮಾಡದ ಸರಕಾರ ನೆಗಡಿಯಾದರೆ ಮೂಗನ್ನೆ ಕತ್ತರಿಸಿಕೊಳ್ಳಬೇಕೆಂಬ ಸರಕಾರದ ಧೋರಣೆಯು ಮಕ್ಕಳ ಕೊರತೆ ಕಾರಣಕ್ಕೆ ಸರಕಾರಿ ಶಾಲೆಗಳನ್ನು ವೀಲಿನಗೊಳಿಸುವ ನೆಪ ಮಾಡಿ ಸರಕಾರಿ ಶಾಲೆಗಳನ್ನು ಮುಚ್ಚುವ ಮೂಲಕ ಬಡ ಮಕ್ಕಳ ಶಿಕ್ಷಣದ ಹಕ್ಕನ್ನು ಕಸಿದುಕೊಳ್ಳಲು ಮುಂದಾಗಿರುವ ಸರಕಾರದ ನಡೆಯನ್ನು ಆಮ್ ಆದ್ಮಿ ಪಕ್ಷವು ಬಲವಾಗಿ ಖಂಡಿಸುತ್ತದೆ ಎಂದು ಹೇಳಿದರು. ನಂತರ ಆಮ್ ಆದ್ಮಿ ಪಕ್ಷದ ಗಂಗಾವತಿ ತಾಲೂಕು ಗ್ರಾಮೀಣ ಘಟಕದ ಅಧ್ಯಕ್ಷರಾದ ಬಸವರಾಜ ಮ್ಯಾಗಳಮನಿಯವರು ಮಾತನಾಡಿ, ಸರಕಾರವು ಸರಕಾರಿ ಶಾಲೆಗಳಲ್ಲಿ ಉತ್ತಮ ಸೌಲಭ್ಯಗಳನ್ನು ಒದಗಿಸಿಕೊಡುವ ಮೂಲಕ ಸರಕಾರಿ ಶಾಲೆಗಳ ಉನ್ನತೀಕರಣಕ್ಕೆ ಇನ್ನು ಅಧಿಕ ಮೊತ್ತದ ಅನುದಾನವನ್ನು ಬಿಡುಗಡೆಗೊಳಸಬೇಕು ಮತ್ತು ಆ ಮೂಲಕ ಮಕ್ಕಳ ದಾಖಲಾತಿ ಕೊರತೆ ಎದುರಿಸುತ್ತಿರುವ ಸರಕಾರಿ ಶಾಲೆಗಳಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ದಾಖಲಾತಿ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕೆ ಹೊರತು ಶಾಲೆಗಳ ವೀಲಿನ ಕ್ರಮಕ್ಕೆ ಮುಂದಾಗಬಾರದು. ಒಂದು ವೇಳೆ ಸರಕಾರವು ವೀಲಿನ ಕ್ರಮಕ್ಕೆ ಮುಂದಾದಲ್ಲಿ ಆಮ್ ಆದ್ಮಿ ಪಕ್ಷವು ಸರಕಾರದ ವಿರುದ್ದ ಉಗ್ರವಾದ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ನಗರ ಘಟಕದ ಅಧ್ಯಕ್ಷ ಪರಶುರಾಮ ವಡೆಯರ್, ಜಿಲ್ಲಾ ಖಜಾಂಚಿ ದೊಡ್ಡಬಸಪ್ಪ, ಗ್ರಾಮೀಣ ಘಟಕ ಜಂಟಿ ಕಾರ್ಯದರ್ಶಿ ಭೋಗೇಶ ಆನೆಗುಂದಿ, ರಾಘವೇಂದ್ರ ಕಡೆಬಾಗಿಲು, ವೆಂಕಟೇಶ ಕೋರಮ್ ಕ್ಯಾಂಪ್, ವಿರುಪಣ್ಣ, ಶ್ರೀರಾಮುಲು ಮುಂತಾದವರು ಹಾಜರಿದ್ದರು ಮಾಹಿತಿಗಾಗಿ ಹುಸೇನಸಾಬ್ ಗಂಗನಾಳ ಕೊಪ್ಪಳ ಜಿಲ್ಲಾಅಧ್ಯಕ್ಷರು, ಮೊ: ೮೮೮೪೪೩೧೨೦
ವರದಿ – ಸಂಪಾದಕೀಯ