ಪತ್ರಿಕಾ ರಂಗ ಗುಲಾಮಗಿರಿಯಿಂದ ಮುಕ್ತವಾಗಬೇಕಿದೆ’ ಜಾನ್ ಬ್ರಿಟ್ಟಾಸ್..
“ದೇಶದಲ್ಲಿ ಧ್ವೇಷದ ಹಾಗೂ ಒಡೆದು ಆಳುವ ಮನೋಸ್ಥಿತಿಯನ್ನು ಬಿತ್ತರಿಸುವ ಪರಿವಾರಗಳನ್ನು ಹಿಮ್ಮೆಟ್ಟಿಸಬೇಕಾಗಿದೆ. ಪತ್ರಿಕಾ ರಂಗ ಗುಲಾಮಗಿರಿಯಿಂದ ಮುಕ್ತವಾಗಿ ನವ ರಾಷ್ಟ್ರ ನಿರ್ಮಾಣದ ಪ್ರಕ್ರಿಯೆಗೆ ಚಾಲನೆ ನೀಡಬೇಕಾಗಿದೆ” ಎಂದು ಹಿರಿಯ ಪತ್ರಕರ್ತ, ಸಂಸದ ಜಾನ್ ಬ್ರಿಟ್ಟಾಸ್ ಹೇಳಿದರು. ಮಂಗಳೂರಿನಲ್ಲಿ ನಡೆದ ಜನಶಕ್ತಿ ವಾರಪತ್ರಿಕೆಯ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಬಿಲ್ಕೀಸ್ ಬಾನು ಪ್ರಕರಣದ ನರಹಂತಕರನ್ನು ಬಿಡುಗಡೆ ಮಾಡಿದ್ದು ಮಾತ್ರವಲ್ಲದೆ ಗುಜರಾತಿನ ಬೀದಿ ಬೀದಿಗಳಲ್ಲಿ ಅವರನ್ನು ಹೂ ಹಾರ ಹಾಕಿ ಸ್ವಾಗತಿಸುವ ಮೂಲಕ ಗುಜರಾತಿನ ಬಿಜೆಪಿ ಸರಕಾರ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಭಾರತದ ಪ್ರಸ್ತುತ ಪರಿಸ್ಥಿತಿ ಹೇಗಿದೆ ಎಂದು ಮುಕ್ತವಾಗಿ ಅರ್ಥೈಸುವಂತೆ ಮಾಡಿದೆ ಎಂದರು. ಹಂತಕರು ಬ್ರಾಹ್ಮಣರು ಎಂದು ಬಿಜೆಪಿ ಶಾಸಕರು ಒಬ್ಬರ ಹಿಂದೆ ಒಬ್ಬರಂತೆ ಅವರನ್ನು ಸಮರ್ಥಿಸಲು ಮುಂದೆ ಬರುತ್ತಿರುವಾಗ ಸಾಮಾಜಿಕ ನ್ಯಾಯದ ಜೀರ್ಣಾವಸ್ಥೆಯನ್ನು ಬಯಲಿಗೆಲೆಯಬೇಕಾದ ಮುಖ್ಯಧಾರ ಮಾಧ್ಯಮಗಳು ದೇಶದ ಆಡಳಿತಕ್ಕೆ ಬಹು ಪರಾಕ್ ಹಾಡುತ್ತಿವೆ. ಇದು ದೇಶಕ್ಕೆ ಮುಂದಿನ ವರ್ಷಗಳಲ್ಲಿ ಬರಲಿರುವ ಅತೀ ದೊಡ್ಡ ಸಾಮಾಜಿಕ ಗಂಡಾಂತರದ ನೇರ ಮುನ್ಸೂಚನೆ ಎಂದು ಕಳವಳ ವ್ಯಕ್ತಪಡಿಸಿದರು. ಭಾಷೆ, ಪ್ರಾದೇಶಿಕತೆ, ಜಾತಿ, ಸಂಸ್ಕೃತಿಗೊಳಪಟ್ಟ ವಿವಿಧ ವಿಭಾಗಳ ಇಪ್ಪತ್ತು ಕೋಟಿ ಜನರಿಗೆ ಇಂದಿಗೂ ಭಾರತದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾ ರಂಗದಲ್ಲಿ ಯಾವುದೇ ಪ್ರತಿನಿಧಿತ್ವವಿಲ್ಲ. ಅಮೃತ ಮಹೋತ್ಸವದ ಸಂಭ್ರಮದಲ್ಲಿ ಮಗ್ನರಾಗಿರುವಾಗ ಈ ಬಗ್ಗೆ ತಿಳಿದುಕೊಳ್ಳುವ ಪರಿವೆಯೂ ನಮಗೆ ಬಹುತೇಕ ಮಂದಿಗೆ ಇಲ್ಲ. ಪ್ರಧಾನಿ ಮೋದಿಯವರು ಸ್ವಾತಂತ್ರ್ಯ ದಿನದ ತಮ್ಮ ಭಾಷಣದಲ್ಲಿ ಅಂಬೇಡ್ಕರ್ ಒಳಗೊಂಡಂತೆ ಹಲವು ಸ್ವಾತಂತ್ರ್ಯ ಹೊರಾಟಗಾರರ ಹೆಸರುಗಳನ್ನು ಉಲ್ಲೇಖ ಮಾಡಿದ್ದರು. ಅಂದು ಸಾವರ್ಕರ್ ಹೆಸರೂ ಉಲ್ಲೇಖವಾಗಿತ್ತು. ಅಂಬೇಡ್ಕರ್ ಹೆಸರಿಗೆ ಸಮಾನವಾಗಿ ಸಾವರ್ಕರು ಎಂದಿಗೂ ಉಲ್ಲೇಖಿಸಲ್ಪಡಬಾರದು. ಅದು ಅಂಬೇಡ್ಕರ್ ಹಾಗೂ ಅಸಂಖ್ಯಾತ ನೈಜ ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸಿ ನಿಂದಸಿದಂತೆ. ಇದೀಗ ಸಾವರ್ಕರ್ ರಾಷ್ಟ್ರಪಿತ ಎಂದು ಸಂಭೋದಿಸಲ್ಪಡುವ ದಿನಗಳು ದೂರವಿಲ್ಲ. ನೈಜ ದೇಶಪ್ರೇಮಿಗಳು ಸಾವರ್ಕರ್ ಹಿಂಬಾಲಕರನ್ನು ಸೆದೆಬಡಿಯುವ ಕೆಲಸವನ್ನು ಇಂದಿನಿಂದಲೇ ಆರಂಭಿಸಬೇಕಾಗಿದೆ ಎಂದು ಕರೆ ನೀಡಿದರು. ವೇದಿಕೆಯಲ್ಲಿ ಪ್ರೊ.ಪುರುಷೋತ್ತಮ ಬಿಳಿಮಲೆ ಸಂಸ್ಕೃತಿ ಚಿಂತಕರು ನಿವೃತ್ತ ಪ್ರಾದ್ಯಾಪಕರು, ಪ್ರೊ.ಚಂದ್ರ ಪೂಜಾರಿ ಆರ್ಥಿಕ ಚಿಂತಕರು ನಿವೃತ್ತ ಪ್ರಾದ್ಯಾಪಕರು, ಬಿ.ಎಂ.ರೋಹಿಣಿ ಹಿರಿಯ ಸಾಹಿತಿಗಳು, ಸಂಶೋದಕರು, ಎಸ್.ವೈ ಗುರುಶಾಂತ ಕಾರ್ಯನಿರ್ವಾಹಕ ಸಂಪಾದಕ, ಯು.ಬಸವರಾಜ ಪ್ರಕಾಶಕರು, ಡಾ.ಕೆ.ಪ್ರಕಾಶ್ ಸಂಪಾದಕರು, ಎನ್.ಕೆ.ವಸಂತರಾಜ್, ವಾಸುದೇವ ಉಚ್ಛಿಲ, ನಿತ್ಯಾನಂದಸ್ವಾಮಿ, ಡಾ.ಕೃಷ್ಣಪ್ಪ ಕೊಂಚಾಡಿ, ಮುನೀರ್ ಕಾಟಿಪಳ್ಳ ಇದ್ದರು. ಕಾರ್ಯಕ್ರಮದ ಅದ್ಯಕ್ಷತೆಯನ್ನು ಕೆ.ಯಾದವಶೆಟ್ಟಿ ವಹಿಸಿದ್ದರು. ಸುನೀಲ್ ಕುಮಾರ್ ಬಜಾಲ್ ಕಾರ್ಯಕ್ರಮವನ್ನು ನಿರ್ವಹಿಸಿದರು.
ವರದಿ – ಸಂಪಾದಕೀಯಾ