ಮಾಜಿ ಸಿಎಂ ಸಿದ್ದರಾಮಯ್ಯ ಸಹೋದರ ರಾಮೇಗೌಡ ವಿಧಿವಶ.
ಮೈಸೂರು , ಆಗಸ್ಟ್ 26 : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಕಿರಿಯ ಸಹೋದರ ರಾಮೇಗೌಡ ವಿಧಿವಶರಾಗಿದ್ದಾರೆ . ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಕಿಡ್ನಿ ವೈಫಲ್ಯದ ಸಮಸ್ಯೆಯಿಂದ ದಾಖಲಾಗಿದ್ದ ರಾಮೇಗೌಡ ಚಿಕಿತ್ಸೆ ಫಲಕಾರಿಯಾಗದೇ ಕೂನಯುಸಿರೆಳೆದಿದ್ದಾರೆ . ಸಿದ್ದರಾಮಯ್ಯನವರ ಕೊನೆಯ ತಮ್ಮನಾಗಿರುವ ರಾಮೇಗೌಡರಿಗೆ 64 ವರ್ಷ ವಯಸ್ಸಾಗಿತ್ತು . ಕಳೆದ ಕೆಲವು ದಿನಗಳಿಂದಲೂ ಕಿಡ್ನಿ ವೈಫಲ್ಯದ ಸಮಸ್ಯೆಯಿಂದ ಬಳಲುತ್ತಿದ್ದ ರಾಮೇಗೌಡರು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು . ಗುರುವಾರವಷ್ಟೇ ಮೈಸೂರಿಗೆ ತೆರಳಿದ್ದ ಸಿದ್ದರಾಮಯ್ಯ ಆಸ್ಪತ್ರೆಗೆ ತೆರಳಿ ತಮ್ಮ ಸಹೋದರನ ಆರೋಗ್ಯ ವಿಚಾರಿಸಿದ್ದರು.ಶುಕ್ರವಾರ ರಾಮೇಗೌಡರ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿತ್ತು . ಸಂಜೆ ಆರೋಗ್ಯ ಸಮಸ್ಯೆ ಉಲ್ಬಣಿಸುತ್ತಿದ್ದಂತೆ ಹೆಚ್ಚಿನ ನಿಗಾ ವಹಿಸಲಾಗಿತ್ತು . ಆದರೆ ಅಂತಿಮವಾಗಿ ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ 9 ಗಂಟೆ ಸುಮಾರಿಗೆ ರಾಮೇಗೌಡರು ವಿಧಿವಶರಾಗಿದ್ದಾರೆ ಎಂದು ತಿಳಿದು ಬಂದಿದೆ . ಅಂತಿಮ ದರ್ಶನಕ್ಕೆ ವ್ಯವಸ್ಥೆ : ಮೈಸೂರು ಜಿಲ್ಲೆಯ ಸ್ವಗ್ರಾಮ ಸಿದ್ದರಾಮನಹುಂಡಿಯಲ್ಲಿ ಶನಿವಾರ ರಾಮೇಗೌಡರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ . ತದನಂತರ ಸ್ವಗ್ರಾಮದಲ್ಲಿಯೇ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ತಿಳಿದು ಬಂದಿದೆ . ವರದಿ – ಸೋಮನಾಥ ಹೆಚ್ ಎಮ್