ಹೈದರಬಾದ ನ ರಾಷ್ಟ್ರೀಯ ಗಣಿಗಾರಿಕೆ ಮಂತ್ರಿಗಳ ಸಮಾವೇಶದಲ್ಲಿ ಭಾಗಿಯಾಗಲಿರುವ ಗಣಿ ಸಚಿವ ಹಾಲಪ್ಪ ಆಚಾರ್….
ಸೆಪ್ಟೆಂಬರ್ 8, ಬೆಂಗಳೂರು: ದೇಶದ ಗಣಿ ಕ್ಷೇತ್ರದ ಸುಧಾರಣೆಯತ್ತ ಚಿಂತನೆ ನಡೆಸುವ ನಿಟ್ಟಿನಲ್ಲಿ ಗಣಿ ಸಚಿವಾಲಯವು ಸೆಪ್ಟೆಂಬರ್ 09 ಮತ್ತು 10 ರಂದು ಹೈದರಾಬಾದ್‌ನಲ್ಲಿ ಆಯೋಜಿಸಿರುವ “ರಾಷ್ಟ್ರೀಯ ಗಣಿಗಾರಿಕೆ ಮಂತ್ರಿಗಳ ಸಮಾವೇಶ” ದಲ್ಲಿ ಕರ್ನಾಟಕದ ಗಣಿ ಮತ್ತು ಭೂವಿಜ್ಞಾನ ಸಚಿವರಾದ ಶ್ರೀ ಆಚಾರ್ ಹಾಲಪ್ಪ ಅವರು ಭಾಗವಹಿಸಲಿದ್ದಾರೆ. ಭಾರತ ಸರಕಾರವು ದೇಶದ ಗಣಿಗಾರಿಕೆ ಕ್ಷೇತ್ರದ ನಿಜವಾದ ಸವಾಲುಗಳನ್ನು ಹಾಗೂ ಸಾಮರ್ಥ್ಯಗಳನ್ನು ಅರಿಯಲು ನಿರಂತರ ಪ್ರಯತ್ನಗಳನ್ನು ನಡೆಸುತ್ತಿದೆ. ಮುಂದಿನ 25 ವರ್ಷಗಳಲ್ಲಿ ಖನಿಜಗಳ ಜಾಗತಿಕ ಬೇಡಿಕೆಯು ಉತ್ಪಾದನೆಯನ್ನು ಮೀರಿಸಲಿದೆ. ಹಾಗಾಗಿ ಈ ಕ್ಷೇತ್ರದ ಸುಧಾರಣೆಯತ್ತ ಗಮನ ಹರಿಸುವುದು ಸದ್ಯದ ಅನಿವಾರ್ಯತೆಯೂ ಹೌದು. ಹಾಗಾಗಿ ಸೆಪ್ಟೆಂಬರ್ 9 ಮತ್ತು 10 ರಂದು ಹೈದರಾಬಾದ್ ನಲ್ಲಿ ರಾಷ್ಟ್ರೀಯ ಗಣಿಗಾರಿಕೆ ಮಂತ್ರಿಗಳ ಸಮಾವೇಶವನ್ನು ಆಯೋಜಿಸಲಾಗಿದೆ. ಎರಡು ದಿನಗಳ ಕಾಲ ನಡೆಯಲಿರುವ ಈ ಸಮಾವೇಶದಲ್ಲಿ ಗಣಿಗಾರಿಕೆ ಕುರಿತಾದ ಸೆಷನ್ ಗಳು ನಡೆಯಲಿದ್ದು, ಸಚಿವ ಆಚಾರ್ ಹಾಲಪ್ಪ ಅವರು ರಾಜ್ಯದ ಗಣಿ ಇಲಾಖೆಗೆ ಸಂಬಂಧಿಸಿದ ಮಾಹಿತಿಗಳನ್ನು ಹಂಚಿಕೊಳ್ಳಲಿದ್ದಾರೆ. ಕರ್ನಾಟಕ ರಾಜ್ಯದ ಗಣಿ ಇಲಾಖೆ ಮತ್ತು ರಾಜ್ಯದ ಗಣಿ ಕ್ಷೇತ್ರದಲ್ಲಿರುವ ಅವಕಾಶಗಳ ಬಗ್ಗೆ ಸಚಿವರು ಪ್ರಾತ್ಯಕ್ಷಿಕೆ ನೀಡಲಿದ್ದಾರೆ. ರಾಜ್ಯ ಗಣಿ ಇಲಾಖೆಯ ನಿರ್ದೇಶಕರಾದ ಡಿ ಎಸ್ ರಮೇಶ್ ಅವರು ಸಚಿವರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಗಣಿ ಸಚಿವಾಲಯ ಮತ್ತು ವಿವಿಧ ರಾಜ್ಯ ಸರ್ಕಾರಗಳ ನಡುವಿನ ಸಂಬಂಧವನ್ನು ಬಲಪಡಿಸುವ ಉದ್ದೇಶದಿಂದ ಈ ಸಮಾವೇಶ ನಡೆಯುತ್ತಿದೆ. ಗಣಿಗಾರಿಕೆ ವಲಯದಲ್ಲಿ ಸದ್ಯ ನಡೆಯುತ್ತಿರುವ ಪ್ರಯತ್ನಗಳು ಮತ್ತು ರಾಜ್ಯ ಸರಕಾರಗಳು ಎನ್ಎಂಇಟಿ ನಿಧಿಯ ಪರಿಣಾಮಕಾರಿ ಬಳಕೆ ಕುರಿತು ಚರ್ಚೆಗಳು ನಡೆಯಲಿವೆ.
ವರದಿ – ಹರೀಶ ಶೇಟ್ಟಿ ಬೆಂಗಳೂರು