ಶರಣ ವಿಜಯೋತ್ಸವ ನಾಡಹಬ್ಬ ಮತ್ತು 43ನೇ ಹುತಾತ್ಮ ದಿನಾಚರಣೆ  ಕ್ಷಣಗಣನೆ ಆರಂಭ.

Spread the love

ಶರಣ ವಿಜಯೋತ್ಸವ ನಾಡಹಬ್ಬ ಮತ್ತು 43ನೇ ಹುತಾತ್ಮ ದಿನಾಚರಣೆ  ಕ್ಷಣಗಣನೆ ಆರಂಭ.

ವಿಶ್ವ ಗುರು ಬಸವಣ್ಣನವರ ನೇತೃತ್ವದಲ್ಲಿ ಅಂದು ಕಲ್ಯಾಣದಲ್ಲಿ ಶರಣ ಕಮ್ಮಟಗಳು ನಡೆಯುತ್ತಿದ್ದವು. ಕಲ್ಯಾಣದ ಕ್ರಾಂತಿಯ ನಂತರ  ಸಂಪೂರ್ಣವಾಗಿ ಶರಣ ಕಮ್ಮಟಗಳು ನಿಂತಿದ್ದವು. ಮತ್ತೆ 21ನೇ ಶತಮಾನದಲ್ಲಿ  ಶರಣ ವಿಜಯೋತ್ಸವ ನಾಡಹಬ್ಬ ಆಚರಣೆ ಮೂಲಕ  ಶರಣ ಕಮ್ಮಟಗಳು  ಪ್ರಾರಂಭವಾಗಿವೆ. ಈ ವಿಜಯೋತ್ಸವ ನಾಡಹಬ್ಬದ ನೇತೃತ್ವವನ್ನು ಹರಳಯ್ಯನವರ ಗವಿ ಮುಖ್ಯಸ್ಥರು, ಬಸವ ತತ್ವ ಪ್ರವಚನಕಾರರಾದ ಪೂಜ್ಯ ಡಾಕ್ಟರ್ ಗಂಗಾಂಬಿಕೆ ಅಕ್ಕನವರು ವಹಿಸಿಕೊಂಡಿದ್ದಾರೆ. ಅಚ್ಚುಕಟ್ಟಾದ ಕಾರ್ಯಕ್ರಮದ ವ್ಯವಸ್ಥೆ ಮಾಡುವ ಮೂಲಕ ಬಸವ ತತ್ವವನ್ನು ಸಾಗರದಾಚೆಗೂ ಪಸರಿಸುವ ಕಾರ್ಯ ಅಕ್ಕ ಗಂಗಾಂಬಿಕೆಯವರು ಮಾಡುತ್ತಿರುವುದು ಹೆಮ್ಮೆ ಎನಿಸುತ್ತದೆ.  ಡಾ. ಪೂಜ್ಯ ಗಂಗಾಂಬಿಕೆ ಅಕ್ಕನವರ ನೇತೃತ್ವದಲ್ಲಿ ಪ್ರಾರಂಭವಾಗಿರುವ ಈ ವಿಜಯೋತ್ಸವ ನಾಡಹಬ್ಬ ಕಾರ್ಯಕ್ರಮವು ನಾಡು ಸೇರಿದಂತೆ ದೇಶ ಎಂದೂ ಮರೆಯದ ಐತಿಹಾಸಿಕ ಕೆಲಸ ಎಂದರೆ ತಪ್ಪಾಗಲಾರದು. ಬಸವಾದಿ ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ಅನೇಕ ಸಾಮಾಜಿಕ,ಜನಪರ, ಶೈಕ್ಷಣಿಕ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳು ನಿತ್ಯ ನಿರಂತರವಾಗಿ ಮಾಡಿಕೊಂಡು ಬರುತ್ತಿರುವ ಅಕ್ಕ. ಅಕ್ಕನವರ ನಿಸ್ವಾರ್ಥ ಸೇವಾ ಕೈಂಕರ್ಯಗಳು ಅನನ್ಯ ಮತ್ತು ಅಜರಾಮರವಾದದ್ದು. ಹೀಗೆ  ಅನೇಕ ಸಾಮಾಜಿಕ ಕಳಕಳಿ ಕಾರ್ಯಕ್ರಮಗಳು ಮಾಡಿಕೊಂಡು ಸೈ ಎನಿಸಿಕೊಂಡಿದ್ದಾರೆ. ಅಂತಹ ಸಾಲಿನಲ್ಲಿ ನಿಲ್ಲುವ ಕಾರ್ಯಕ್ರಮವೇ ಶರಣ ವಿಜಯೋತ್ಸವ ನಾಡಹಬ್ಬ ಎಂದರೆ ಅಶೋಕ್ತಿಯಂತೂ ಖಂಡಿತ ಅಲ್ಲವೇ ಅಲ್ಲ. ಹಾಗಾಗಿ ಅಕ್ಕನವರ ನೇತೃತ್ವದಲ್ಲಿ ಇಂತಹ ಅದ್ಭುತವಾದಂತಹ ವೈಚಾರಿಕ ಕಾರ್ಯಕ್ರಮ ಸಾಗಿ ಬರುತ್ತಿರುವುದು ಬಸವ ಅಭಿಮಾನಿಗಳಿಗೆ  ಎಲ್ಲಿಲ್ಲದ ಖುಷಿ ಕೊಡುವ ವಿಚಾರವಾಗಿದೆ. ಕ್ಷಣಗಣನೆ ಆರಂಭ : ಮನುಕುಲದ ಉದ್ಧಾರಕ,ಸತ್ಯ ತತ್ವದ ಪ್ರತಿಪಾದಕ,ಶರಣ ಗಣಮೇಳದ ರೂವಾರಿ ಅಣ್ಣ ಬಸವಣ್ಣನವರು ಹಾಗೂ ಶರಣರು ಮೆಟ್ಟಿದ ಧರೆ ಪಾವನ ಭೂಮಿ ಬಸವಕಲ್ಯಾಣದ ಭವ್ಯವಾದ ಹರಳಯ್ಯನವರ ಗವಿ  ಮಹಾಮನೆಯ ಆವರಣದಲ್ಲಿ ವಿಜಯೋತ್ಸವ ನಾಡಹಬ್ಬ ಕಾರ್ಯಕ್ರಮ ಕ್ಷಣಗಣನೆ ಆರಂಭವಾಗಲಿದೆ. ಸೆಪ್ಟೆಂಬರ್ 25 ರಿಂದ ಪ್ರಾರಂಭವಾಗಿ ಅಕ್ಟೋಬರ್ 5 ವರೆಗೆ ನಿರಂತರವಾಗಿ ಸಾಗಿ ಬರಲಿದೆ. ಈ ಹನ್ನೊಂದು ದಿವಸಗಳ ಕಾಲ ಅತ್ಯಂತ ಶಿಸ್ತು ಬದ್ಧ, ಅರ್ಥಪೂರ್ಣ, ವೈಜ್ಞಾನಿಕ, ವೈಚಾರಿಕ ನೆಲೆಗಟ್ಟಿನ ಬಸವ ತತ್ವದ ಮೇಲೆ ಕಾರ್ಯಕ್ರಮವು ಜರುಗಲಿದೆ. ಶರಣ ವಿಜಯೋತ್ಸವ ನಾಡಹಬ್ಬ ಮತ್ತು 43ನೇ ಹುತಾತ್ಮ ದಿನಾಚರಣೆ ಕಾರ್ಯಕ್ರಮಕ್ಕೆ ಕರ್ನಾಟಕ, ತೆಲಂಗಾಣ ಮಹಾರಾಷ್ಟ್ರ, ಮೊದಲಾದ ಭಾಗಗಳಿಂದ ಸಾವಿರಾರು ಶರಣ ಬಂಧುಗಳು ಭಾವಹಿಸಲಿದ್ದಾರೆ. ಹನ್ನೊಂದು ದಿವಸಗಳ ಕಾಲ ನಡೆಯಲಿರುವ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಶರಣ ವಿಜಯೋತ್ಸವ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ಕೊಡುವದೊಂದಿಗೆ ಕಾರ್ಯಕ್ರಮ ಅಧಿಕೃತವಾಗಿ ಆರಂಭವಾಗುತ್ತದೆ. ಅನುಭವ ಮಂಟಪ ಜಗತ್ತಿನ ಮೊದಲ ಪಾರ್ಲಿಮೆಂಟ್ ಎನ್ನುವ ವಿಚಾರಗೋಷ್ಠಿ, ಲಿಂಗಾಯತ್ ಧರ್ಮದ ಸದ್ಯದ ಸ್ಥಿತಿಗತಿಗಳು ಮತ್ತು ಮುಂದಿನ ಯೋಜನೆಗಳ ಕುರಿತು ಉಪನ್ಯಾಸ, ಶರಣ ಸಮಾಜದ ಮೇಲೆ ವಿಶೇಷ ಉಪನ್ಯಾಸ ಅದೇ ರೀತಿ ಕಲ್ಯಾಣ ಕ್ರಾಂತಿಯಲ್ಲಿ ಶರಣರ ಕೊಡುಗೆ ಕುರಿತು ಗೋಷ್ಠಿ ಜೊತೆಗೆ ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡೇ ಎನ್ನುವ ವಿಚಾರಮಂಥನ, ಮಕ್ಕಳ ಗೋಷ್ಠಿ ,ವಚನ ಗಾಯನ,ವಚನ ನೃತ್ಯ ಪ್ರದರ್ಶನ. ಬಸವಣ್ಣ ಹಾಗೂ ಗಾಂಧಿ ಕುರಿತ ಉಪನ್ಯಾಸಿಕ ಮಾಲೆ, ಮೂರನೇ ಶೂನ್ಯ ಪೀಠಾಧಿಪತಿ ಶಿವಯೋಗಿ ಸಿದ್ದರಾಮೇಶ್ವರ ಕುರಿತು ಐತಿಹಾಸಿಕ ಉಪನ್ಯಾಸ, ಸಾಮೂಹಿಕ ಇಷ್ಟಲಿಂಗ ಯೋಗ, ಮರಣವೇ ಮಹಾನವಮಿ ಕಲ್ಯಾಣ ಕ್ರಾಂತಿ ವಿಶೇಷ ಗೋಷ್ಠಿ, ಸಾಮಾಜಿಕ ಕ್ಷೇತ್ರದಲ್ಲಿ ವಿಶೇಷ ಸೇವೆ ಸಲ್ಲಿಸಿದ್ದ ಗಣ್ಯರಿಗೆ ಪ್ರಶಸ್ತಿ ಪ್ರದಾನ ಸಮಾರಂಭ, ಶರಣ ವಿಜಯ ವಚನ ಪಠಣ ಕೊನೆಯದಾಗಿ  ಹುತಾತ್ಮ ಶರಣರ ಎಳೆಹೊಟ್ಟೆಯ ಮೆರವಣಿಗೆ ಇದು ಬಸವಕಲ್ಯಾಣದ ಐತಿಹಾಸಿಕ ಕೋಟೆಯಿಂದ ಪ್ರಾರಂಭವಾಗಿ ಹರಳಯ್ಯನವರ ಗವಿಯವರೆಗೆ ಸಾಗಿ ಬರಲಿರುವ ಮೆರವಣಿಗೆಯಾಗಲಿದೆ. ಈ ಮೆರವಣಿಗೆಯಲ್ಲಿ ಸಾವಿರಾರು ಬಸವ ಅಭಿಮಾನಿಗಳು, ಕಲಾತಂಡಗಳು, ಜನಪದ ಕಲಾವಿದರು, ವಚನ ಗಾಯಕರು, ಸ್ವಾಮೀಜಿಗಳು ,ಬಸ್ವತತ್ವ ನಿಷ್ಠರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಯನ್ನು ಗೊಳಿಸಲಿದ್ದಾರೆ. ಹೀಗೆ ಈ ಹನ್ನೊಂದು ದಿನಗಳಲ್ಲಿ ಇಷ್ಟಲಿಂಗ ಪೂಜೆ, ಪ್ರಾರ್ಥನೆ,ಶರಣ ಸ್ಮರಣೆ, ಧರ್ಮಚಿಂತನೆ,ವಿಚಾರಗೋಷ್ಟಿ, ವಚನ ಸಂಗೀತ, ವಚನ ನೃತ್ಯ,ಪಥ ಸಂಚಲನ ಮುಂತಾದ ಕಾರ್ಯಕ್ರಮಗಳು ಜರುಗಿ, ಜನಮಾನಸದಲ್ಲಿ ಚಿರಕಾಲ ಉಳಿಯಲಿದೆ ಬಂಧುಗಳೇ. ಧನ್ಯನಾಗಬೇಕು : ಅಂತರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಮತ್ತು ಲಿಂಗವಂತ ಹರಳಯ್ಯ ಪೀಠ ಬಸವಕಲ್ಯಾಣ ರವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಶರಣ ವಿಜಯೋತ್ಸವ ನಾಡಹಬ್ಬ ಕಾರ್ಯಕ್ರಮವು ಬಸವಾದಿ ಶರಣರ ಸಂದೇಶಗಳನ್ನು  ಹೊತ್ತು ನಾಡಿನ ಉದ್ಧಕ್ಕೂ ಪಸರಿಸುವ ಕಾರ್ಯ ಸದ್ದುಗದ್ದಲವಿಲ್ಲದೆ ಮಾಡುತ್ತಿದ್ದಾರೆ. ಯಾವುದೇ ರೀತಿಯ ಸಮಸ್ಯೆಗಳು ಆಗದೇ ಇರುವ ಹಾಗೆ ಅಕ್ಕ ಗಂಗಾಂಬಿಕೆ ತಾಯಿಯವರು ಈ ಕಾರ್ಯ ಮಾಡುತ್ತಿರುವುದು ಹೆಮ್ಮೆಯ ಸಂಗತಿ.  ಜನಸಾಮಾನ್ಯರಿಗೆ ಬಸವ ತತ್ವದ ಅರಿವು ಮೂಡಿಸುತ್ತಿರುವ ಅಕ್ಕ, ಅಕ್ಕನವರ ಸೇವೆ ದೊಡ್ಡದು ಎಂದರೆ ಖಂಡಿತಾ ತಪ್ಪಾಗಲಾರದು. ಹೀಗಾಗಿ ಅಕ್ಕನವರು ನಿರಂತರವಾಗಿ ಬಸವ ತತ್ವ ಬೆಳೆಸುವ ಕೆಲಸದಲ್ಲಿ ಮಗ್ನರಾಗಿದ್ದಾರೆ. ನಾವೆಲ್ಲರೂ ಇವರ ಕೈ ಬಲಪಡಿಸುವ ಸೇವೆಯಲ್ಲಿ ಭಾಗಿಯಾಗುವುದು ನೆಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಅಂದಹಾಗೆ ಬಸವಕಲ್ಯಾಣ ಕ್ಷೇತ್ರ,ಬಸವಾಭಿಮಾನಿಗಳಿಗೆ ಸೂಜಿಗಲ್ಲಿನಂತೆ ತನ್ನತ್ತ ಸೆಳೆಯುತ್ತಿದ್ದು, ಪ್ರಮುಖ ಧಾರ್ಮಿಕ, ಪ್ರವಾಸಿ ತಾಣವಾಗಿ ಹೊರಹೊಮ್ಮಿದೆ. ಜಗತ್ತಿನ ಜನ, ಮತ್ತೆ ಕಲ್ಯಾಣಕ್ಕೆ ಬಂದು ನೋಡುವಂತಾಗಿದೆ. ಅದಕ್ಕಾಗಿ ಮಹಾ ಮಾನವತಾವಾದಿ  ಬಸವಣ್ಣನವರ ವಚನ ಸಾಹಿತ್ಯದ ಸಂದೇಶಗಳಲ್ಲಿ ನಂಬಿಕೆ ಇಟ್ಟು ಬದುಕುವ  ಸಮಸ್ತ ಬಸವಭಕ್ತರು, ಬಸವ ತತ್ವಾಭಿಮಾನಿಗಳೆಲ್ಲರೂ ಶರಣ ವಿಜಯೋತ್ಸವ ನಾಡಹಬ್ಬ ಕಾರ್ಯಕ್ರಮಕ್ಕೆ ಬಂದು ಧನ್ಯರಾಗಬೇಕಾಗಿದೆ.  ಕಾರ್ಯಕ್ರಮದ ವಿವರ ಮಾಹಿತಿ:  ಉದ್ಘಾಟನಾ ಸಮಾರಂಭ, ಇಷ್ಟಲಿಂಗಾರ್ಚನೆ,  ಪ್ರಾರ್ಥನೆ, ಶರಣರ ಸ್ಮರಣೆ, ವೈಚಾರಿಕ ಚಿಂತನ ಗೋಷ್ಠಿ ನಡೆಯಲಿವೆ. ಜ್ಞಾನ ದಾಸೋಹದೊಡನೆ ಅನ್ನದಾಸೋಹವನ್ನು ಸಹ ಅಚ್ಚುಕಟ್ಟಾಗಿ ಮಾಡಲಾಗುತ್ತಿದೆ. ಉಪನ್ಯಾಸ ಕಾರ್ಯಕ್ರಮಗಳು ನಡೆಯಲಿವೆ ಹಾಗೂ ಅಂತಿಮವಾಗಿ ಐತಿಹಾಸಿಕ ಮೆರವಣಿಗೆ ಹಾಗೂ ಸಮಾರೋಪ ಸಮಾರಂಭ ಜರುಗಲಿದೆ. ಸರ್ವರಿಗೂ ಆದರದ ಸ್ವಾಗತ: 12ನೇ ಶತಮಾನವು ವಿಶ್ವಕ್ಕೆ ಸಮಾನತೆ ಸಾರುವ ಭಾವೈಕ್ಯದ ಯುಗವಾಗಿತ್ತು. ಅಂದಿನ ಕಾಲದಲ್ಲಿ ಶರಣರು ಸಮಾನತೆಗಾಗಿ ಕ್ರಾಂತಿ ನಡೆಸಿದ ಪವಿತ್ರ ಭೂಮಿಯಲ್ಲಿ ಶರಣ ವಿಜಯೋತ್ಸವ ನಾಡಹಬ್ಬ ಕಾರ್ಯಕ್ರಮ ಜರುಗುತ್ತಿದೆ. ಹಾಗಾಗಿ ಪ್ರತಿಯೊಬ್ಬ ಬಸವ ಅಭಿಮಾನಿಗಳು ತಪ್ಪದೆ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ತತ್ವವನ್ನು ತಿಳಿದುಕೊಂಡು ಇತರರಿಗೂ ತತ್ವ ತಿಳಿಸಿಕೊಡುವ ಕೆಲಸ ಆಗಬೇಕು. ಅಂದಾಗಲೇ ಮಾತ್ರ ಬಸವತತ್ವವನ್ನು ಬೆಳೆಸಲು ಸಾಧ್ಯವಾಗುತ್ತದೆ.ಈ ನಿಟ್ಟಿನಲ್ಲಿ ಕೆಲವು ಮಾತುಗಳನ್ನು ಈ ಸಂದರ್ಭದಲ್ಲಿ ಹೇಳಲೇಬೇಕಾಗಿದೆ ಅವುಗಳೆಂದರೆ ಜೀವನಕ್ಕೆ ಬೇಕಾಗುವ ಮೌಲ್ಯಾಧಾರಿತ ಸಿದ್ಧಾಂತಗಳು ವಚನಗಳಲ್ಲಿ ಅಡಗಿವೆ. ಅದಕ್ಕಾಗಿ ವಚನಗಳಲ್ಲಿ ಅಡಗಿರುವ ಮಾನವೀಯ ಮೌಲ್ಯಗಳು ಜನರಿಗೆ ತಿಳಿಸುವ ಕಾರ್ಯ ನಾವೆಲ್ಲರೂ ಸೇರಿ ಮಾಡಲೇಬೇಕು . ವಚನ ಸಾಹಿತ್ಯವು ಲಿಂಗಾಯತ ಧರ್ಮದ ಪವಿತ್ರ ಗ್ರಂಥವಾಗಿದೆ. ಕೂಡಲಸಂಗಮ ಮತ್ತು ಬಸವಕಲ್ಯಾಣ ಕ್ಷೇತ್ರಗಳು ಮಾನವೀಯ ಸಮಾನತೆ ಸಾರಿದ ಪುಣ್ಯಕ್ಷೇತ್ರಗಳಾಗಿವೆ‌. ಲಿಂಗಾಯತರು ಒಮ್ಮೆಯಾದರೂ ಈ ಸ್ಥಳಗಳಿಗೆ ಭೇಟಿ ನೀಡಬೇಕು, ಭೇಟಿ ನೀಡಿದಾಗಲೇ ನಮ್ಮ ಜೀವನ ಪಾವನವಾಗುತ್ತದೆ. ಕಾರಣ ನಮ್ಮ ದೇಹದಲ್ಲಿ ಜೀವ ಇರುವವರೆಗೂ ಒಮ್ಮೆ  ಯಾದರೂ ಇಂತಹ ಐತಿಹಾಸಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಮೂಲಕ ಪಾವನರಾಗೊಣ. ಈ ಪವಿತ್ರ ಸಮಾವೇಶ ಶರಣ ವಿಜಯೋತ್ಸವ ಸಮಾರಂಭಕ್ಕೆ ಜಾತಿ ಮತ ಪಂಥಗಳ ಭೇದವಿಲ್ಲದೆ, ಸರ್ವರಿಗೂ ಆದರದ ಸ್ವಾಗತ.

ಲೇಖಕರು – ಸಂಗಮೇಶ ಎನ್ ಜವಾದಿ.

ಸಾಹಿತಿ,ಪತ್ರಕರ್ತ, ಪ್ರಗತಿಪರ ಚಿಂತಕರು.

ಬೀದರ ಜಿಲ್ಲೆ.

Leave a Reply

Your email address will not be published. Required fields are marked *